ಸುತ್ತ-ಮುತ್ತ

ಬಾಬಾಬುಡನ್ ಗಿರಿಯನ್ನು ಮುಜರಾಯಿ ವ್ಯಾಪ್ತಿಗೆ ನೀಡಿ ಕರ್ನಾಟಕದಲ್ಲಿ ಹಿಂದುತ್ವ ಸಿದ್ಧಾಂತಕ್ಕೆ ಅಧಿಕೃತ ಚಾಲನೆ ನೀಡಿದ ಕಾಂಗ್ರೆಸ್ ಸರ್ಕಾರ:ರಿಯಾಝ್ ಫರಂಗಿಪೇಟೆ ಆರೋಪ

ವರದಿಗಾರ (ಮಾ.05): ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯನ್ನು ವಕ್ಫ್ ಆಸ್ತಿಯಿಂದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಪಾದುಕಾ ಪೂಜೆ, ನಗಾರಿ ದತ್ತಮಾಲೆ ಕಾರ್ಯಕ್ರಮಗಳನ್ನು ಅಧಿಕೃತಗೊಳಿಸಲಾಗಿದೆ. ಇದಕ್ಕೆ 2015 ರ ಸೆಪ್ಟೆಂಬರ್ 3 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಕಾರಣ ನೀಡಿ ರಾಜ್ಯ ಸರ್ಕಾರವು ಕೈ ತೊಳೆದು ಕೊಂಡಿದೆ ಎಂದು ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆರೋಪಿಸಿದ್ದಾರೆ.

ಆದರೆ ಇತ್ತೀಚಿಗೆ ಬಾಬಾ ಬುಡನ್ ಗಿರಿಯ ಉರೂಸ್ ಸಂದರ್ಭದಲ್ಲಿ ಗುಹೆಯೊಳಗೆ ಪ್ರವೇಶ ನಿರಾಕರಣೆ ಮಾಡಿರುವುದು ಮತ್ತು ದತ್ತಮಾಲೆ ಕಾರ್ಯಕ್ರಮದ ಸಂದರ್ಭದಲ್ಲಿ ಗೋರಿಗಳನ್ನು ಹಾನಿಗೊಳಿಸಿದ ಪ್ರಕರಣಗಳಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನಿರ್ಲಿಪ್ತ ಧೋರಣೆಯನ್ನು ನೋಡುವಾಗಲೇ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷವು ಹಿಂದುತ್ವದ ಮತಗಳನ್ನು ಓಲೈಸುವ ಪ್ರಯತ್ನದಲ್ಲಿತ್ತು ಎಂಬ ಸಂಶಯವು ಮೂಡಿತ್ತು ನಂತರ ರಾಹುಲ್ ಗಾಂಧಿಯವರು ಮೃದು ಹಿಂದುತ್ವದ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದಾಗ ಆ ಸಂಶಯ ಇನ್ನಷ್ಟು ಬಲಗೊಂಡಿತು ಈಗ ಈ ತೀರ್ಮಾನದ ಮೂಲಕ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಹಿಂದುತ್ವ ಸಿದ್ಧಾಂತಕ್ಕೆ ಅಧಿಕೃತ ಚಾಲನೆಯನ್ನು ನೀಡಿದಂತಾಗಿರುತ್ತದೆ ಹಾಗೂ ಜ್ಯಾರಿಗೊಳಿಸದೆ ಇರುವ ಅದೆಷ್ಟು ಸುಪ್ರೀಂಕೋರ್ಟ್ ನ ಆದೇಶಗಳು ಕರ್ನಾಟಕದಲ್ಲಿ ಬಾಕಿ ಇರುವಾಗಲೇ ಇಂತಹ ಆತುರದ ತೀರ್ಮಾನ ಕಾಂಗ್ರೆಸ್ ನ ಮುಸ್ಲಿಂ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ದೇಶದ ಜನತೆ  ‘ದೇಶಕ್ಕೆ ಮಾರಕವಾಗಿರುವ ಹಿಂದುತ್ವ’ದ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವಾಗ ಮತ್ತು ಸುಪ್ರೀಂಕೋರ್ಟ್ನ ನ್ಯಾಯಾಧೀಶರು ಕೂಡ ಮಾಧ್ಯಮದ ಮುಂದೆ ಬಂದು ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ  ಹಿಂದುತ್ವ ಸಿದ್ಧಾಂತಕ್ಕೆ ಮನ್ನಣೆಯನ್ನು ನೀಡುತ್ತಿರುವುದು ಮಾತ್ರ ತುಂಬಾ ಕಳವಳಕಾರಿಯಾದ ವಿಚಾರವಾಗಿರುತ್ತದೆ. ಕಾಂಗ್ರೆಸ್ ಸರಕಾರದ ಈ ನಿಲುವು ರಾಜಕೀಯ ಲಾಭ ಪಡೆಯುವ ಹುನ್ನಾರವಾಗಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷವು ಅಹಿಂದ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸುವ ಸಾಧ್ಯತೆ ಇರುವುದರಿಂದ ಕರ್ನಾಟಕದ ಜನತೆ ಪರ್ಯಾಯ ರಾಜಕೀಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group