ಪ್ರತಿಭೆ

ದೇಶದಲ್ಲೇ ಪ್ರಪ್ರಥಮ ಆರೋಗ್ಯ ಯೋಜನೆಗೆ ಕರಾವಳಿಯ ಯುವಕ ರಚಿಸಿದ ಲೋಗೋ ಆಯ್ಕೆ

ವರದಿಗಾರ (ಮಾ.5): ದೇಶದಲ್ಲೇ ಪ್ರಪ್ರಥಮ ಬಾರಿಗೆ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಮಹತ್ತರವಾದ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತಂದಿರುವ ವಿನೂತನ ಯೋಜನೆ ‘ಆರೋಗ್ಯ ಕರ್ನಾಟಕ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಚಾಲನೆ ನೀಡಿದ್ದ ಯೋಜನೆ ಕರಾವಳಿ ಯುವಕ ರಚಿಸಿದ ಲೋಗೋ ಆಯ್ಕೆಯಾಗಿದ್ದು, ಕರಾವಳಿಗೆ ಮತ್ತೊಂದು ಕೀರ್ತಿಯನ್ನು ನೀಡಿದೆ.

ದೇಶದಲ್ಲೇ ಪ್ರಪ್ರಥಮ ಸಾರ್ವತ್ರಿಕ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಶೇಷ ಯೋಜನೆಗೆ ಲೋಗೋ ರಚಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿಯ ಮೊಹಮ್ಮದ್ ಸಲಾಂ ಎಂಬ ಯುವ ಡಿಸೈನರ್.

ಯೋಜನೆಗೆ ಲಾಂಛನ ರಚಿಸಿ ಕೊಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಹ್ವಾನ ನೀಡಿತ್ತು. ಇದನ್ನು ಗಮನಿಸಿದ ಸಲಾಂ ಲೋಗೋ ರಚಿಸಿ ಕಳುಹಿಸಿದ್ದರು. ಇದೀಗ ಸಲಾಂ ರಚಿಸಿದ ಲೋಗೋ ಆಯ್ಕೆಯಾಗಿ ಶುಕ್ರವಾರ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಅನಾವರಣಗೊಂಡಿದೆ.


‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಜಾಹೀರಾತು ವಿಭಾಗದ ಡಿಸೈನರ್ ಆಗಿದ್ದ ಸಲಾಂ ಇತ್ತೀಚಿಗೆ ದುಬೈಗೆ ತೆರಳಿ ಅಲ್ಲಿ ‘ಅಲ್ ಸನಾ ಅಡ್ವರ್ಟೈಸಿಂಗ್ ಗಿಫ್ಟ್ಸ್’ ಎಂಬ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿಂದಲೇ ಅವರು ಮಾಡಿ ಕಳಿಸಿದ ಲೋಗೋ ಸರ್ಕಾರದ ಪ್ರತಿಷ್ಠಿತ ಯೋಜನೆಯ ಅಧಿಕೃತ ಲಾಂಛನವಾಗಿ ಆಯ್ಕೆಯಾಗಿದ್ದು,ಇದಕ್ಕಾಗಿ ಸರಕಾರದಿಂದ ಅವರಿಗೆ ಸುಮಾರು 50,000 ರೂ. ಬಹುಮಾನವೂ ಸಿಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಲಾಂ, ಸಾರ್ವತ್ರಿಕ ಆರೋಗ್ಯ ಸೇವೆ ನೀಡುವ ಯೋಜನೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರಕಾರಕ್ಕೆ ಅಭಿನಂದನೆಗಳು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ನೂತನ ಯೋಜನೆ ‘ಆರೋಗ್ಯ ಕರ್ನಾಟಕ’ಕ್ಕೆ ಸರಕಾರದ ಆಹ್ವಾನದಂತೆ ನಾನು ಒಂದು ಲಾಂಛನ (ಲೋಗೊ) ವಿನ್ಯಾಸ ಮಾಡಿ ಕಳಿಸಿದ್ದೆ. ಆ ಲೋಗೋ ಸರಕಾರದ ಯೋಜನೆಯ ಅಧಿಕೃತ ಲೋಗೋ ಆಗಿ ಆಯ್ಕೆಯಾಗಿರುವುದು ನನಗೆ ಬಹಳ ಖುಷಿ ತಂದಿದೆ. ಕೋಟ್ಯಂತರ ಜನರಿಗೆ ಉಪಕಾರವಾಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಈ ಯೋಜನೆಯಲ್ಲಿ ನನ್ನದೂ ಒಂದು ಪುಟ್ಟ ಪಾಲು ಇದೆ ಎಂಬುದೇ ನನಗೆ ಅತ್ಯಂತ ಹೆಮ್ಮೆ. ನಾನು ರಚಿಸಿರುವ ಈ ಲಾಂಛನದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ರಾಜ್ಯದ ಭೂಪಟವನ್ನು ಹಿನ್ನೆಲೆಯಲ್ಲಿ ಬಳಸಿದ್ದೇನೆ. ಆರೋಗ್ಯ ಇಲಾಖೆಯನ್ನು ಮಾತೃ ಸ್ವರೂಪದಲ್ಲಿ ಚಿತ್ರಿಸಿದ್ದೇನೆ. ರಾಜ್ಯದ ಸರ್ವರನ್ನು ಆರೈಕೆ ಮಾಡುವ ತಾಯಿಯಾಗಿ ಆರೋಗ್ಯ ಇಲಾಖೆಯನ್ನು ಬಿಂಬಿಸಿದ್ದೇನೆ. ಆರೋಗ್ಯ ಇಲಾಖೆ ಎಂಬ ತಾಯಿ ನಮ್ಮಲ್ಲರನ್ನು ಹೊತ್ತುಕೊಂಡು ಕಾಯುವಂತೆ, ಆ ಹಾರೈಕೆಯಲ್ಲಿ ಜನಸಾಮಾನ್ಯರು ಸಂತಸದಲ್ಲಿರುವುದನ್ನು ಹೂಗಳಂತೆ ಬಿಂಬಿಸಿದ್ದೇನೆ. ನನ್ನ ನೆಚ್ಚಿನ ಕರ್ನಾಟಕ, ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಸದಾ ಸರ್ವ ಜನಾಂಗದ ಶಾಂತಿಯ ತೋಟವಾಗಿ ಎಲ್ಲರನ್ನೂ ಪೊರೆಯುವ , ಆರೈಕೆ ಮಾಡುವ ಕರ್ನಾಟಕವಾಗಲಿ ಎಂದು ಆಶಿಸುತ್ತೇನೆ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯ ಸರಕಾರದ ಎಲ್ಲ ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಸರಕಾರದ ಜೊತೆ ಕೈಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಒಬ್ಬ ಜವಾಬ್ದಾರಿಯುತ , ಪ್ರಜ್ಞಾವಂತ ಕನ್ನಡಿಗನಾಗಿ ನನ್ನ ಪಾಲಿನ ಕೊಡುಗೆ ನೀಡಲು ನಾನು ಸದಾ ಸಿದ್ಧ. ಈ ಅವಕಾಶಕ್ಕಾಗಿ ಕರ್ನಾಟಕ ಸರಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ಸಲಾಂ ಹೇಳಿಕೊಂಡಿದ್ದಾರೆ.

ರಾಜ್ಯ ಸರಕಾರದ ಅಧಿಕೃತ ಯೋಜನೆಗೆ ‘ಲೋಗೋ’ ರಚಿಸಿದ ಮೊಹಮ್ಮದ್ ಸಲಾಂ ರನ್ನು ‘ವರದಿಗಾರ’ ತಂಡ ಅಭಿನಂದಿಸುತ್ತದೆ ಮತ್ತು ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸುತ್ತದೆ. 

ವರದಿ ಕೃಪೆ: ವಾರ್ತಾಭಾರತಿ

To Top
error: Content is protected !!
WhatsApp chat Join our WhatsApp group