ರಾಷ್ಟ್ರೀಯ ಸುದ್ದಿ

ಹರಿಯಾಣ: ಸದಸ್ಯರಿಲ್ಲದ ಮಾನವ ಹಕ್ಕು ಆಯೋಗ ಹಾಗೂ 16 ಸದಸ್ಯರ ಗೋ ಸೇವಾ ಸಮಿತಿ!!

ಖಟ್ಟರ್ ನೇತೃತ್ವದ ಬಿಜೆಪಿ ಸರಕಾರದ ಆದ್ಯತೆಗಳಿಗೆ ಹಿಡಿದ ಕನ್ನಡಿ!

ವರದಿಗಾರ(02-03-2018): ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಚಿಸಲ್ಪಟ್ಟ ಹರಿಯಾಣ ಮಾನವ ಹಕ್ಕುಗಳ ಆಯೋಗವು ಇದೀಗ ಸ್ಥಾಪನೆಯ 5 ವರ್ಷಗಳ ನಂತರ ಕೇಳುವವರಿಲ್ಲದಂತಾಗಿದೆ. ಆದರೆ, ಖಟ್ಟರ್ ನೇತೃತ್ವದ ಬಿಜೆಪಿ ಸರಕಾರದಿಂದ ರಚಿಸಲ್ಪಟ್ಟ ಗೋ ಸೇವಾ ಸಮಿತಿಯು 16 ಸದಸ್ಯರಿಂದ ತುಂಬಿ ತುಳುಕುತ್ತಿದೆ.

ಹರಿಯಾಣ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನವು ಕಳೆದ 19 ತಿಂಗಳಿಂದ ಖಾಲಿಯಾಗಿದೆ. ಅದೇ ರೀತಿ ಇನ್ನೆರಡು ಪ್ರಮುಖ ಸ್ಥಾನಗಳು ಕಳೆದ 5 ತಿಂಗಳಿಂದ ಖಾಲಿಯಾಗಿವೆ. ಪರಿಣಾಮವಾಗಿ, ಆಯೋಗದ ಮುಂದೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಮಾಹಿತಿ ಹಕ್ಕು ಕಾಯಿದೆಯ ಮೂಲಕ ಪಡೆದ ಮಾಹಿತಿ ಪ್ರಕಾರ, 2,205 ಪ್ರಕರಣಗಳು ಹರಿಯಾಣ ಮಾನವ ಹಕ್ಕುಗಳ ಆಯೋಗದ ಮುಂದೆ ಬಾಕಿ ಉಳಿದಿವೆ.

ಮಾಹಿತಿ ಹಕ್ಕು ಕಾರ್ಯಕರ್ತ, ಜನ ಅಭಿಯಾನ ಮಂಚ್ ಸದಸ್ಯ ಪಿ.ಪಿ.ಕಪೂರ್ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ದೊರಕಿದ ಉತ್ತರವು ಹರಿಯಾಣದ ಮಾನವ ಹಕ್ಕುಗಳ ಆಯೋಗದ ಚಿಂತಾಜನಕ ಸ್ಥಿತಿಯನ್ನು ಬೆಳಕಿಗೆ ತಂದಿದೆ.

“ಮಾನವ ಹಕ್ಕುಗಳ ಆಯೋಗದ ಪ್ರಮುಖ ಹುದ್ದೆಗಳು ಖಾಲಿಯಾಗಿರುವಾಗಲೇ, ಸರಕಾರವು ಗೋ ಸೇವಾ ಸಮಿತಿಗೆ 16 ಸದಸ್ಯರನ್ನು ನೇಮಿಸಿರುವುದು ಸರಕಾರವು ಮಾನವ ಹಕ್ಕುಗಳ ಬಗ್ಗೆ ಅದೆಷ್ಟು ಸಂವೇದನಾರಹಿತವಾಗಿದೆ ಎನ್ನುವುದನ್ನು ತೋರಿಸುತ್ತದೆ” ಎಂದು ಕಪೂರ್ ಹೇಳಿದ್ದಾರೆ. ಅದಲ್ಲದೆ ಸರಕಾರದ ಆದ್ಯತೆಯು ಮಾನವ ಯೋಗಕ್ಷೇಮವಲ್ಲ ಎನ್ನುವುದನ್ನೂ ತಿಳಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ಪ್ರಮುಖ ಹುದ್ದೆಗಳಲ್ಲದೆ, ಇತರ 83 ಹುದ್ದೆಗಳಲ್ಲಿ 34 ಹುದ್ದೆಗಳು ಖಾಲಿಯಾಗಿವೆ.

ಆಯೋಗಕ್ಕಿರುವ ಬಜೆಟ್ ಹೆಚ್ಚುತ್ತಿದೆ, ಕೆಲಸ ನಡೆಯುತ್ತಿಲ್ಲ!
ಹರಿಯಾಣದ ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಿದಾಗ 2.5 ಕೋಟಿ ರೂಪಾಯಿಗಳ ಬಜೆಟ್ ಕಾಯ್ದಿರಿಸಲಾಗಿತ್ತು. ಇದೀಗ 2017-18ರ ವರ್ಷಕ್ಕೆ 6.5 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಲಾಗಿದೆ.

ನಿರಂತರವಾಗಿ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕುಖ್ಯಾತವಾಗಿರುವ ಹರಿಯಾಣದಲ್ಲಿ ಮಾನವ ಹಕ್ಕುಗಳ ಆಯೋಗದ ಕೊರತೆಯು ಚಿಂತಾಜನಕವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ನಂತರ 90 ಜನರು ಪೊಲೀಸ್ ಹಾಗೂ ಇತರ ಭದ್ರತಾ ಪಡೆಗಳಿಗೆ ಬಲಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group