ವರದಿಗಾರ ವಿಶೇಷ

ಬ್ಯಾಂಕ್ ಹಗರಣಗಳು, ಕೆಟ್ಟ ಸಾಲಗಳಿಂದ ಉಂಟಾದ ನಷ್ಟಕ್ಕೆ ಪರಿಹಾರ: ಪ್ರತಿಯೊಬ್ಬ ಭಾರತೀಯನ ತಲೆಗೆ ಬರುವ ವೆಚ್ಚ ರೂ.7600!!

ಹಗರಣಕೋರರು ದೋಚಿದ್ದು ಬ್ಯಾಂಕ್ ಗಳಿಂದಲ್ಲ, ನಮ್ಮ ಜೇಬಿನಿಂದ!!

ವರದಿಗಾರ(22-02-2018): ಪಿ ಎನ್ ಬಿ ಹಗರಣ ಅಥವಾ ಇನ್ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳ ಹಗರಣಗಳ ಬಗ್ಗೆ, ಕೆಟ್ಟ ಸಾಲಗಳ ಬಗ್ಗೆ ಓದಿ ಮರೆತು ಬಿಡುತ್ತೀರಾ?? ನೀರವ್ ಮೋದಿ, ವಿಜಯ ಮಲ್ಯ ಹಾಗೂ ಬ್ಯಾಂಕ್ ಗಳ ನಡುವೆ ಕೆಟ್ಟ ವ್ಯವಹಾರದ ಉಸಾಬರಿ ನಮಗೇಕೆಂದು ಯೋಚಿಸಿದ್ದೀರಾ?? ಹಾಗೇನಾದರೂ ಇದ್ದಲ್ಲಿ, ನಿಮ್ಮನ್ನು ಬೆಚ್ಚಿ ಬೀಳಿಸುವ ಮಾಹಿತಿಗಳು ಇಲ್ಲಿವೆ.

ಹಗರಣಕೋರರು ದೋಚಿದ್ದು ಬ್ಯಾಂಕ್ ಗಳನ್ನಲ್ಲ, ನಮ್ಮ ಜೇಬನ್ನು!!
ಮಾಹಿತಿಗಳ ಪ್ರಕಾರ ಇದುವರೆಗೆ ಬಯಲಾದ ಹಗರಣಗಳ ಮೊತ್ತವನ್ನು ಸುಮಾರು 20,000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಗಳೇ ಕಂಡು ಬರುತ್ತಿವೆ.

ಅಧಿಕೃತ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 2017ರ ವರೆಗೆ ರಾಷ್ಟೀಕೃತ ಬ್ಯಾಂಕ್ ಗಳು ನೀಡಿದ ಕೆಟ್ಟ ಸಾಲಗಳ ಮೊತ್ತವನ್ನು ಸುಮಾರು 7,34,000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಅಂದರೆ, ನಮ್ಮ ದೇಶದ ಬೊಕ್ಕಸಕ್ಕೆ 7,34,000 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ ಎಂದೇ ಪರಿಗಣಿಸಬಹುದು. ಈ ನಷ್ಟವನ್ನು ಪರಿಹರಿಸಲು 130 ಕೋಟಿ ಜನಸಂಖ್ಯೆ ಇರುವ ಭಾರತದ ಪ್ರತಿಯೊಬ್ಬ ನಾಗರಿಕನಿಗೆ ತಗಲುವ ವೆಚ್ಚ ರೂ.5600!!

ವರದಿಗಳ ಪ್ರಕಾರ, ಈಗಾಗಲೇ ಕೆಟ್ಟ ಸಾಲಗಳ ಕಾರಣ ನಷ್ಟದಿಂದ ಬಳಲುತ್ತಿರುವ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಕಾರವು ಕಳೆದ 11ವರ್ಷಗಳಲ್ಲಿ 2,60,000 ಕೋಟಿ ರೂಪಾಯಿಗಳನ್ನು ನೀಡಿದೆ. ಸರಕಾರವು ನೀಡುವುದೆಂದರೆ ಅದು ನಮ್ಮ ತೆರಿಗೆಯ ಪಾಲಲ್ಲವೇ?? ಅಂದರೆ, 130 ಕೋಟಿ ಭಾರತೀಯರು ಈಗಾಗಲೇ ತಮ್ಮ ಜೇಬಿನಿಂದ ತಲಾ 2000 ರೂಪಾಯಿಗಳನ್ನು ಭರಿಸಿದ್ದಾರೆ.

ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂಪಾಯಿಗಳು ಬರಬಹುದೆಂದು ಉದ್ದುದ್ದ ಭಾಷಣ ಮಾಡಿ ಚುನಾವಣೆ ಗೆದ್ದವರು ಅಧಿಕಾರದಲ್ಲಿರುವಾಗಲೇ ನಮ್ಮ ಜೇಬಿಗೆ ಕತ್ತರಿ ಹಾಕುತ್ತಿರುವುದು ವಿಪರ್ಯಾಸ.

To Top
error: Content is protected !!
WhatsApp chat Join our WhatsApp group