ರಾಷ್ಟ್ರೀಯ ಸುದ್ದಿ

ಸುಳ್ಳು ಸುದ್ದಿ ಪ್ರಸರಿಸುವ ಟಿವಿ ನಿರ್ವಾಹಕರನ್ನು ಟೀಕಿಸಿದ್ದಕ್ಕೆ ಉದ್ಯೋಗ ಕಳೆದುಕೊಂಡ ‘ಇಂಡಿಯಾ ಟುಡೇ’ ಪತ್ರಕರ್ತೆ!!

ವರದಿಗಾರ(13-2-2017): ತನ್ನ ಟ್ವಿಟ್ಟರ್ ಖಾತೆಯಲ್ಲಿ ಸುಳ್ಳು ಸುದ್ದಿಯನ್ನು ಪ್ರಸರಿಸುವ ಟಿವಿ ನಿರ್ವಾಹಕರನ್ನು ಟೀಕಿಸಿದ್ದಕ್ಕಾಗಿ ಇಂಡಿಯಾ ಟುಡೇ ಗ್ರೂಪ್ ನ ಪತ್ರಕರ್ತೆಯೊಬ್ಬರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಇಂಡಿಯಾ ಟುಡೇ ಗ್ರೂಪ್ ನ ಅಧೀನದಲ್ಲಿರುವ DailyO ವೆಬ್ ಸೈಟ್’ನ ರಾಜಕೀಯ ಸಂಪಾದಕರಾಗಿದ್ದ ಅಂಗ್ಶುಕಾಂತ ಚಕ್ರವರ್ತಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೆಬ್ರವರಿ 4ರಂದು ಸುಳ್ಳು ಸುದ್ದಿ ಪ್ರಸರಿಸುವ ಹಾಗೂ ದ್ವೇಷ ಪ್ರಚೋದಿಸುವ ಪತ್ರಕರ್ತರನ್ನು ಟೀಕಿಸಿದ್ದರು.

“ಸುಳ್ಳು ಸುದ್ದಿಯನ್ನು ಪ್ರಸರಿಸುವ, ದ್ವೇಷ ಪ್ರಚೋದಿಸುವ ನ್ಯೂಸ್ ನಿರ್ವಾಹಕರು, ಸಂಪಾದಕರು, ವರದಿಗಾರರು ಹಾಗೂ ಲೇಖಕರ ಕಡೆ ಕುರುಡಾಗಿರುವ ಅಥವಾ ಅವರಿಗೆ ಉದ್ಯೋಗ ನೀಡುವ ಮಾಧ್ಯಮ ಸಂಸ್ಥೆಯ ಸ್ಥಾಪಕ/ಯಜಮಾನರನ್ನು ದ್ವೇಷ ಭಾಷಣಕ್ಕೆ ಅನುಮತಿ ನೀಡುವ ಹಾಗೂ ಅದರಿಂದ ಲಾಭಗಳಿಸುವ ಆರೋಪದಲ್ಲಿ ನ್ಯಾಯಾಲಯದ ಮುಂದೆ ತರಬೇಕು” ಎಂದು ಪತ್ರಕರ್ತೆ ಟ್ವೀಟ್ ಮಾಡಿದ್ದರು.

Scroll.in ವರದಿ ಪ್ರಕಾರ, ಅಂಗ್ಶುಕಾಂತ ಚಕ್ರವರ್ತಿಯ ಈ ಟ್ವೀಟ್ ಆಕೆ ಕೆಲಸ ಮಾಡುತ್ತಿರುವ ಮಾಧ್ಯಮ ಸಂಸ್ಥೆಯ ನಿರ್ವಾಹಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಟ್ವೀಟ್ ಡಿಲೀಟ್ ಮಾಡಲು ಕೇಳಿಕೊಂಡಾಗ ಪತ್ರಕರ್ತೆಯು ಒಪ್ಪಿರಲಿಲ್ಲ. ತಾನು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲದ ಕಾರಣ ಅದನ್ನು ಡಿಲೀಟ್ ಮಾಡಲು ಅವರು ಒಪ್ಪಿರಲಿಲ್ಲ. ಅದರ ನಂತರ ಎರಡು ಬಾರಿ ಅವರಿಗೆ ತನ್ನ ನಿರ್ಧಾರವನ್ನು ಬದಲಿಸುವಂತೆ ಕೇಳಲಾಯಿತು. ಇದಾಗ್ಯೂ, ಟ್ವೀಟ್ ಡಿಲೀಟ್ ಮಾಡದಿದ್ದಾಗ, ಆಕೆಗೆ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಿಂದ ಬಂದ ಕರೆಯಲ್ಲಿ ಮೂರು ಆಯ್ಕೆಗಳನ್ನು ನೀಡಲಾಯಿತು.
1. ಟ್ವೀಟ್ ಡಿಲೀಟ್ ಮಾಡುವುದು
2. ಕೆಲಸಕ್ಕೆ ರಾಜೀನಾಮೆ ನೀಡುವುದು
3. ಹೊರದಬ್ಬಲ್ಪಡುವುದು

ಮೊದಲ ಎರಡು ಆಯ್ಕೆಗಳನ್ನು ಕಡೆಗಣಿಸಿದ ಕಾರಣ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಯಿತು.

ಇಂಡಿಯಾ ಟುಡೇ ಗ್ರೂಪ್ ನ ಅಧೀನದಲ್ಲಿರುವ ಆಜ್ ತಕ್ ಹಾಗೂ ಇಂಡಿಯಾ ಟುಡೇ ಎಂಬ ಎರಡು ಚಾನೆಲ್ ಗಳು ಹಲವು ಬಾರಿ ಸುಳ್ಳು ಸುದ್ದಿಯನ್ನು ಪ್ರಸರಿಸಿ ಖಂಡನೆಗೊಳಗಾಗಿದ್ದವು. ಎರಡು ಸಾವಿರ ರೂಪಾಯಿಯ ನೋಟಿನಲ್ಲಿ GPS ಚಿಪ್ ಇದೆ ಎಂದ ಪತ್ರಕರ್ತೆ ಹಾಗೂ ಇತ್ತೀಚೆಗೆ ಕಾಸ್ ಗಂಜ್ ಹಿಂಸಾಚರದಲ್ಲಿ ಸುಳ್ಳು ಹಾಗೂ ಪ್ರಚೋದನಕಾರಿ ವರದಿಯನ್ನು ಪ್ರಸರಿಸಿದ ಇನ್ನೋರ್ವ ಪತ್ರಕರ್ತ ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದ್ದರು.

ಇದೇ ಪತ್ರಕರ್ತೆ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಮಹಿಳಾ ನಾಯಕಿಯನ್ನು ಸಂಸತ್ ನಲ್ಲಿ ಅವಮಾನಿಸಿದ ಮೋದಿ ಹಾಗೂ ಅದನ್ನು ಬೆಂಬಲಿಸಿದ ಇತರ ಬಿಜೆಪಿ ಸಂಸದರ ಕೃತ್ಯವನ್ನು ಮಹಾಭಾರತದ ದೃತರಾಷ್ಟ್ರ ಹಾಗೂ ಬೆಂಬಲಿಗರು ದ್ರೌಪದಿಯ ಮಾನಹರಣ ನಡೆಸಿದ್ದಕ್ಕೆ ಹೋಲಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅಂಗ್ಶುಕಾಂತ ಚಕ್ರವರ್ತಿ ಬಲಪಂಥೀಯ ಟ್ರಾಲ್ ಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನುವುದೂ ಗಮನಾರ್ಹವಾಗಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group