ವಿದೇಶ ಸುದ್ದಿ

ಅಬುಧಾಬಿ ರಾಜಕುಮಾರ ‘ಜೈ ಶ್ರೀ ರಾಮ್’ ಹೇಳಿದರೆಂದು ಸುಳ್ಳು ಸುದ್ದಿ ಹಬ್ಬಿಸಿದ ಭಾರತೀಯ ಮಾಧ್ಯಮಗಳ ಮಾನ ಹರಾಜು ಹಾಕಿದ ‘ಗಲ್ಫ್ ನ್ಯೂಸ್’ !

► ಟೈಮ್ಸ್ ನೌ ಹಾಗೂ ಝೀ ನ್ಯೂಸ್ ನ ಜನ್ಮ ಜಾಲಾಡಿದ ಗಲ್ಫ್ ನ್ಯೂಸ್ !

► ಸತ್ಯ ತಿಳಿದ ಮೇಲೂ ಸುಳ್ಳು ಸುದ್ದಿಯನ್ನು ಮತ್ತೆ ರಿಟ್ವೀಟ್ ಮಾಡಿದ ಟೈಮ್ಸ್ ನೌ‘ !

► ಈ ಎಲ್ಲಾ ಸುಳ್ಳು ಸುದ್ದಿಗಳು ವ್ಯವಸ್ಥಿತ ಸುಳ್ಳು ಪ್ರಚಾರ ವೊಂದರ ಭಾಗವೆಂದ ಗಲ್ಫ್ ನ್ಯೂಸ್ !

ವರದಿಗಾರ (ಫೆ 13) : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದುಬೈ ಭೇಟಿಯ ಸಂದರ್ಭದಲ್ಲಿ ಅಬುಧಾಬಿಯ ರಾಜಕುಮಾರ ಶೇಕ್ ಮುಹಮದ್ ಬಿನ್ ಝಾಯೇದ್ ಅಲ್ ನಹ್ಯಾನ್, ಸಭೆಯೊಂದರಲ್ಲಿ  ‘ಜೈ ಸಿಯಾ ರಾಂ’ ಎಂದು ಹೇಳಿದ್ದಾರೆಂದು ವೀಡಿಯೋ ಒಂದನ್ನು ಉದಾಹರಿಸಿ ಸುಳ್ಳು ಸುದ್ದಿ ಹಬ್ಬಿಸಿ ರಾಜಕೀಯ ಪ್ರಚಾರ ಪಡೆಯಲು ನೋಡಿದ್ದ ಭಾರತದ ಸುದ್ದಿ ಚಾನೆಲ್ ಗಳಾದ ‘ಟೈಮ್ಸ್ ನೌ’ ಹಾಗೂ ‘ಝೀ ನ್ಯೂಸ್ ‘ ನ ಮಾನವನ್ನು ಮಧ್ಯ ಪ್ರಾಚ್ಯದ ಖ್ಯಾತ ಮಾಧ್ಯಮವಾಗಿರುವ ‘ಗಲ್ಫ್ ನ್ಯೂಸ್’ ಬೀದಿಯಲ್ಲಿ ಹರಾಜು ಹಾಕಿದೆ. ಈ ಕುರಿತು ವರದಿಯೊಂದನ್ನು ಪ್ರಕಟಿಸಿರುವ ‘ಗಲ್ಫ್ ನ್ಯೂಸ್’ ಭಾರತದಲ್ಲಿ ರಾಜಕೀಯ ಲಾಭಕ್ಕಾಗಿ ಮಾಧ್ಯಮಗಳು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಕಿಡಿ ಕಾರಿದೆ. ಇದು ಮಾತ್ರವಲ್ಲದೆ ಈ ಚಾನೆಲ್ ಗಳ ಗಾಯದ ಮೇಲೆ ಉಪ್ಪು ಸವರುವಂತೆ ಯು ಎ ಇ ಯ ಭಾರತೀಯ ರಾಯಭಾರ ಕಛೇರಿಯು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ‘ಗಲ್ಫ್ ನ್ಯೂಸ್’ ಪ್ರಕಟಿಸಿರುವ ಸುದ್ದಿಯನ್ನು ಟ್ವೀಟ್ ಮಾಡಲಾಗಿದೆ.

ಭಾರತೀಯ ಮಾಧ್ಯಮಗಳ ಈ ಕೃತ್ಯವು “ಜಿಗುಪ್ಸೆ” ತರಿಸುವಂತದ್ದು ಎಂದು ಹೇಳಿರುವ ‘ಗಲ್ಫ್ ನ್ಯೂಸ್’, ಇದು ಭಾರತದಲ್ಲಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನವೊಂದರ ಭಾಗವಾಗಿದೆ ಎಂದು ಹೇಳಿದೆ. 2016 ಸಪ್ಟಂಬರ್ ನ ವೀಡೀಯೋ ಒಂದನ್ನು ಟ್ವೀಟ್ ಮಾಡಿದ್ದ ಇವೆರಡು ಚಾನೆಲ್ ಗಳು, ವೀಡಿಯೋದಲ್ಲಿರುವ ವ್ಯಕ್ತಿ ಅಬುಧಾಬಿಯ ರಾಜಕುಮಾರ ಎಂದು ಸುಳ್ಳು ಹೇಳಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ‘ಗಲ್ಫ್ ನ್ಯೂಸ್’, ವಾಸ್ತವದಲ್ಲಿ  ವೀಡಿಯೋದಲ್ಲಿರುವ ವ್ಯಕ್ತಿ ಸುಲ್ತಾನ್ ಸೂದ್ ಅಲ್ ಖಾಸಿಮಿ, ಆತನೋರ್ವ ಯು ಎ ಇ ಯ ಅಂಕಣಕಾರನಾಗಿದ್ದಾನೆ ಎಂದಿದೆ.

ಸುಳ್ಳು ಸುದ್ದಿ ಚಾನೆಲನ್ನು ಬೆಂಬಲಿಸಿದವರನ್ನು ಅಪಹಾಸ್ಯ ಮಾಡಿದ ಗಲ್ಫ್ ನ್ಯೂಸ್ !

ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಪ್ರಚಾರ ಪಡೆಯಿತಲ್ಲದೆ, ಕೆಲವರಂತೂ ತಮ್ಮ “ಪರಿಣತ” ಅಭಿಪ್ರಾಯಗಳನ್ನು ಹಂಚಿಕೊಂಡರೆಂದು ‘ಗಲ್ಫ್ ನ್ಯೂಸ್’ ವೀಡಿಯೋವನ್ನು ಕಣ್ಣು ಮುಚ್ಚಿ ನಂಬಿದವರನ್ನು ಅವರ ಅಭಿಪ್ರಾಯಗಳನ್ನು ತಾನು ಪ್ರಕಟಿಸಿರುವ ಸುದ್ದಿಯಲ್ಲಿ ಹಾಕಿಕೊಂಡು ಗೇಲಿ ಮಾಡಿದೆ.

ಭಾರತದ ಬೇಜವಾಬ್ದಾರಿಯುತ ಮಾಧ್ಯಮಗಳ ಬೆವರಿಳಿಸಿದ ‘ಗಲ್ಫ್ ನ್ಯೂಸ್’ !

ಸುಳ್ಳು ಸುದ್ದಿಯನ್ನು ಹಬ್ಬಿಸಿದ ಚಾನೆಲ್ ಗಳಾದ ‘ಟೈಮ್ಸ್ ನೌ’ ಹಾಗೂ ‘ಝೀ ನ್ಯೂಸ್ ‘ ನ ಬೇಜವಾಬ್ದಾರಿಯುತ ಪತ್ರಿಕೋದ್ಯಮವನ್ನು ‘ಗಲ್ಫ್ ನ್ಯೂಸ್’ ಖಾರವಾದ ರೀತಿಯಲ್ಲಿ ಟೀಕಿಸಿದೆ. ಅಬುಧಾಬಿಯ ರಾಜಕುಮಾರ 2017 ರ ಪ್ರಜಾಪ್ರಭುತ್ವ ದಿನದ ಮುಖ್ಯ ಅತಿಥಿಯಾಗಿದ್ದಂತಹವರು. ಮಾತ್ರವಲ್ಲ 2016 ರಲ್ಲಿ ಭಾರತದ ಸರಕಾರಿ ಅತಿಥಿಯಾಗಿ ಭೇಟಿ ಕೊಟ್ಟವರು. ಅವರ ಪರಿಚಯ ಈ ಮಾಧ್ಯಮಗಳಿಗೆ ಇಲ್ಲವೆಂದರೆ ನಂಬಲಾದೀತೇ? ಎಂದು ‘ಗಲ್ಫ್ ನ್ಯೂಸ್’ ಪ್ರಶ್ನಿಸಿದೆ. ಇದು ಭಾರತದಲ್ಲಿ ಮಾಧ್ಯಮಗಳ ಅಪಾಯಕಾರಿ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದಿದೆ. ಭಾರತದ ಕೆಲ ಮಾಧ್ಯಮಗಳು ಕೆಲವರ ಪ್ರಚಾರ ರಾಯಭಾರಿಯಾಗಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಲು ಮಾತ್ರ ಮೀಸಲಾಗಿದೆ. ಇದು ಅವರ ಆಯ್ಕೆಯೋ ಅಥವಾ ಒತ್ತಾಯಪೂರ್ವಕವಾಗಿಯೋ ತಿಳಿಯುತ್ತಿಲ್ಲ ಎಂದು ‘ಗಲ್ಫ್ ನ್ಯೂಸ್’ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ ಈ ರೀತಿಯಲ್ಲಿ ವೈರಲ್ ಆದ ವೀಡೀಯೋಗಳ ಜಾಡು ಹಿಡಿದಾಗ ಇವೆಲ್ಲವೂ ಒಂದು ನಿರ್ದಿಷ್ಟ ಕಾಲಮಾನದಲ್ಲಿ ಅಪ್ಲೋಡ್ ಆಗಿರುವಂತಹದ್ದಾಗಿದೆ. ಉದಾಹರಣೆಗೆ ಮೋದಿ ದುಬೈ ಭೇಟಿಯ ಅವಧಿಯಲ್ಲೇ 2016 ರ ಈ ವೀಡಿಯೋವನ್ನು ಸುಳ್ಳು ಸುದ್ದಿಯ ಮೂಲಕ ಪ್ರಚಾರ ಪಡೆಯುವ ಪ್ರಯತ್ನ ನಡೆದಿರುವುದನ್ನು ‘ಗಲ್ಫ್ ನ್ಯೂಸ್’ ಬೊಟ್ಟು ಮಾಡಿದೆ.

‘ಸುಳ್ಳು ಸುದ್ದಿಗೆ ಖ್ಯಾತಿವೆತ್ತ “ಟೈಮ್ಸ್ ನೌ” ಚಾನೆಲಿನ ನಕಲಿತನವನ್ನು ಬಟಾಬಯಲುಗೊಳಿಸಿದ ‘ಗಲ್ಫ್ ನ್ಯೂಸ್’, ಈ ಚಾನೆಲ್ ಫೆಬ್ರವರಿ 10ರಂದು ಸಂಜೆ 3.45ಕ್ಕೆ ಮೊದಲಿಗೆ ”ಅಬುಧಾಬಿ ರಾಜಕುಮಾರ ವೇದಿಕೆಗೆ ಬಂದು ತನ್ನ ಭಾಷಣ ಆರಂಭಿಸುವುದಕ್ಕೆ ಮೊದಲು ‘ಜೈ ಸಿಯಾ ರಾಂ’ ಹೇಳಿದಾಗ ಸಭಿಕರು ಹುಚ್ಚೆದ್ದರು” ಎಂದು ಟ್ವೀಟ್ ಮಾಡಿತ್ತು. ಟ್ವಿಟ್ಟರಿಗರು, ಇದು ಅಬುಧಾಬಿ ರಾಜಕುಮಾರನಲ್ಲ ಎಂದು ಸತ್ಯ ಮನದಟ್ಟು ಮಾಡಿಸುವ ಪ್ರಯತ್ನ ನಡೆಸಿದರೂ, ಚಾನೆಲ್ ಅದೇ ಟ್ವೀಟನ್ನು ಫೆಬ್ರವರಿ 11 ರ ಬೆಳಗ್ಗೆ 12.05ಕ್ಕೆ ಮತ್ತೆ ರಿಟ್ವೀಟ್ ಮಾಡಿ ಸುಳ್ಳು ಸುದ್ದಿ ಹಬ್ಬಿಸುವುದರಿಂದ ತಾನು ಹಿಂದೆ ಸರಿಯುವುದಿಲ್ಲವೆಂದು ಸ್ಪಷ್ಟಪಡಿಸಿತು. ನಂತರ ಈ ಸುದ್ದಿಯನ್ನು ಪ್ರಸಾರಿಸುವಾಗ ಚಾನೆಲ್, ರಾಜಕುಮಾರ ಎನ್ನದಿದ್ದರೂ ‘ಅಬುಧಾಬಿಯ ಶೇಕ್ ಸುಲ್ತಾನ್’ ಎನ್ನುತ್ತಾ ಮತ್ತೆ ಜನರನ್ನು ಮೋಸಗೊಳಿಸಿತು ಎಂದು ‘ಗಲ್ಫ್ ನ್ಯೂಸ್’ ಚಾನೆಲಿನ ಬಂಡವಾಳವನ್ನು ಬಯಲುಗೊಳಿಸಿದೆ.

ಒಟ್ಟಿನಲ್ಲಿ ತಮ್ಮ ರಾಜಕೀಯ ಲಾಭಕ್ಕೋಸ್ಕರ ಭಾರತದ ಕೆಲ ಮಾಧ್ಯಮಗಳು ಇದುವರೆಗೆ ತಮ್ಮ ಸುಳ್ಳು ಸುದ್ದಿಗೆ ಭಾರತದಲ್ಲಿ ಮಾತ್ರ ಸುದ್ದಿಯಾಗಿ ಮಾನ ಕಳೆಯುತ್ತಿದ್ದರೆ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ‘ಮಾಧ್ಯಮ ಗುಲಾಮಗಿರಿತನ’ವನ್ನು ಪ್ರದರ್ಶಿಸಿದ್ದು, ‘ಗಲ್ಫ್ ನ್ಯೂಸ್’ ಅಂತೂ ಇದರ ವಿರುದ್ಧ ಸರಿಯಾದ ಏಟು ಕೊಟ್ಟಿದೆ ಎಂದರೆ ತಪ್ಪಾಗಲಾರದು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group