ವರದಿಗಾರ ವಿಶೇಷ

ಬಾಬರೀ ಧ್ವಂಸದಲ್ಲಿ ಪಾಲ್ಗೊಂಡಿದ್ದ ಕರಸೇವಕರಿಂದ ಈಗ ಇಸ್ಲಾಂ ಪ್ರಚಾರ ಹಾಗೂ ಮಸೀದಿಗಳ ನಿರ್ಮಾಣ!!

ವರದಿಗಾರ(08-02-2018): ಜಗತ್ತಿನ ಮುಂದೆ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದ ಬಾಬರೀ ಮಸೀದಿಯ ಧ್ವಂಸದಲ್ಲಿ ಪಾಲ್ಗೊಂಡಿದ್ದ ಸಂಘಪರಿವಾರದ ಮಾಜಿ ಕಾರ್ಯಕರ್ತ ಈಗ ಇಸ್ಲಾಂ ಧರ್ಮದ ಪ್ರಚಾರ ಹಾಗೂ ಮಸೀದಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕರಸೇವಕನಾಗಿದ್ದ ಬಲ್ಬೀರ್ ಸಿಂಗ್ ಇದೀಗ ಮೊಹಮ್ಮದ್ ಆಮಿರ್ ಆಗಿದ್ದಾರೆ. ಹರಿಯಾಣದ ಪಾಣಿಪತ್ ನ ಹಳ್ಳಿಯೊಂದರಲ್ಲಿ ಗಾಂಧಿವಾದಿ, ಜಾತ್ಯತೀತ ಕುಟುಂಬವೊಂದರಲ್ಲಿ ಜನಿಸಿದ ಬಲ್ಬೀರ್ ಸಿಂಗ್, ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯಿಂದ ಪ್ರೇರಿತರಾಗಿ ಶಿವಸೇನೆ ಸೇರಿಕೊಂಡಿದ್ದರು. ಸಂಘಪರಿವಾರದ ಸಿದ್ಧಾಂತದಲ್ಲಿ ಒಲವು ತೋರಿಸಿದ ಬಲ್ಬೀರ್ ನಂತರ ಆರೆಸ್ಸೆಸ್ ಸೇರಿಕೊಂಡು ಪ್ರತಿದಿನ ಆರೆಸ್ಸೆಸ್ ಶಾಖೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

1992ರ ಡಿಸೆಂಬರ್ 6ರಂದು ಅಯೋಧ್ಯೆ ತಲುಪಿದ ಬಲ್ಬೀರ್ ಸಿಂಗ್, ಬಾಬರೀ ಮಸೀದಿಯ ಗುಂಬಝ್ ಹತ್ತಿದ ಮೊದಲನೆಯ ಕರಸೇವಕರಾಗಿದ್ದರು. ಬಲ್ಬೀರ್ ಪ್ರಕಾರ, ಪಾಣಿಪತ್ ಹಾಗೂ ಸೋನಿಪತ್ ನ ಕರಸೇವಕರು ಬಾಬರೀ ಮಸೀದಿಯ ಗುಂಬಝ್ ಧ್ವಂಸ ಮಾಡಿದ್ದರು.

ತಾನು ಮಸೀದಿ ಧ್ವಂಸದ ನಂತರ ಊರಿಗೆ ಮರಳಿದಾಗ ತನನ್ನು ಒಬ್ಬ ‘ಹೀರೋ’ ಎಂಬಂತೆ ಬಿಂಬಿಸಿದರು ಎಂದು ಅಮೀರ್ ಹೇಳುತ್ತಾರೆ. ಆದರೆ, ಮನೆಗೆ ತಲುಪಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅವರ ಕುಟುಂಬವು ಅವರನ್ನು ದೂರ ಮಾಡಿತು.

ರಾಜಪೂತ ಕುಟುಂಬದಲ್ಲಿ ಜನಿಸಿದ ಬಲ್ಬೀರ್ ಸಿಂಗ್, ನಂತರ ತನ್ನ ತಪ್ಪಿನ ಅರಿವಾಗಿ, ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಇದೀಗ ಮುಸ್ಲಿಂ ಮಹಿಳೆಯೋರ್ವರನ್ನು ವಿವಾಹವಾಗಿರುವ ಆಮಿರ್, ಇಸ್ಲಾಮ್ ಧರ್ಮದ ಪ್ರಚಾರಕ್ಕಾಗಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಆಮಿರ್ ಜೊತೆ ಬಾಬರೀ ಧ್ವಂಸದಲ್ಲಿ ಪಾಲ್ಗೊಂಡಿದ್ದ ಅವರ ಸ್ನೇಹಿತ ಯೋಗೇಂದ್ರ ಪಾಲ್ ಇದೀಗ ಇಸ್ಲಾಮ್ ಸ್ವೀಕರಿಸಿ ಮೊಹಮ್ಮದ್ ಉಮರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಇದೀಗ ಮೊಹಮ್ಮದ್ ಅಮೀರ್ ಹಾಗೂ ಮೊಹಮ್ಮದ್ ಉಮರ್ ತಮ್ಮ ಪಾಪದ ಪ್ರಾಯಶ್ಚಿತ ಎಂಬಂತೆ ದೇಶದಾದ್ಯಂತ 100 ಮಸೀದಿಗಳನ್ನು ಮರುನಿರ್ಮಾಣ ಮಾಡಿಸುವ ಶಪಥ ಹಾಕಿದ್ದಾರೆ. ಇವರಿಬ್ಬರೂ ಸೇರಿ ಈಗಾಗಲೇ 90 ಮಸೀದಿಗಳನ್ನು ನಿರ್ಮಿಸಿದ್ದಾರೆ.

To Top
error: Content is protected !!
WhatsApp chat Join our WhatsApp group