ರಾಷ್ಟ್ರೀಯ ಸುದ್ದಿ

ಬೀದರ್ – ಕಲಬುರ್ಗಿ ರೈಲು ಹಳಿ ಯೋಜನೆಯ ವಾಸ್ತವಾಂಶ ಹೇಳುವ ನೆಪದಲ್ಲಿ ಸಂಸತ್ ಗೆ ಸುಳ್ಳು ಮಾಹಿತಿ ನೀಡಿದ ಮೋದಿ !

ವರದಿಗಾರ (ಫೆ 8) : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಸಂಸತ್ತಿನಲ್ಲಿ ಸದನವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಭಾರತ-ಪಾಕ್ ವಿಭಜನೆ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದ್ದರು. ಆ ವೇಳೆ ಕರ್ನಾಟಕದ ಬೀದರ್ – ಕಲಬುರ್ಗಿ ರೈಲು ಹಳಿ ಕಾಮಗಾರಿಯ ಕುರಿತು ಮಾತನಾಡಿದ್ದು, ‘ದಿ ಕ್ವಿಂಟ್‘ ಜಾಲ ತಾಣವು ಪ್ರಧಾನಿಯವರು ಪ್ರಸ್ತಾಪಿಸಿದ್ದ ಎಲ್ಲಾ ವಿಚಾರಗಳ ವಾಸ್ತವಾಂಶಗಳ ಕುರಿತು ಬೆಳಕು ಚೆಲ್ಲಿದ್ದು, ಬೀದರ್ – ಕಲಬುರ್ಗಿ ರೈಲು ಹಳಿ ವಿಚಾರದಲ್ಲಿ ಪ್ರಧಾನಿ ಮೋದಿಯವರು ಸದನಕ್ಕೆ ಕೆಲವೊಂದು ತಪ್ಪು ಮಾಹಿತಿ ನೀಡಿದ್ದು ಬಹಿರಂಗಗೊಂಡಿದೆ.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬೀದರ್–ಕಲಬುರ್ಗಿ ರೈಲು ಹಳಿ ನಿರ್ಮಾಣ ಯೋಜನೆಗೆ ಅನುಮೋದನೆ ದೊರೆತಿತ್ತು. 2004ರಿಂದ 2013ರ ವರೆಗೆ ಏನೊಂದು ಕಾಮಗಾರಿಗಳು ನಡೆದಿಲ್ಲ. 2013 ರಲ್ಲಿ ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರವಿದ್ದಾಗ ಕಾಮಗಾರಿ ಆರಂಭವಾಗಿತ್ತು’ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ ಮೋದಿ ಹೇಳಿದ್ದರು.

ಆದರೆ ವಾಸ್ತವದಲ್ಲಿ, 107 ಕಿಲೋ ಮೀಟರ್ ದೂರದ ಬೀದರ್–ಕಲಬುರ್ಗಿ ರೈಲು ಹಳಿ ಯೋಜನೆಗೆ 2000ನೇ ಇಸವಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50ರ ಅನುದಾನ ಹಂಚಿಕೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಹಾಗೂ ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚಕ್ಕೆ 2007ರಲ್ಲಿ ರೈಲ್ವೆ ಇಲಾಖೆ ಅನುಮೋದನೆ ನೀಡಿತ್ತು. 2014ರ ವೇಳೆಗೆ ಶೇ 91.5ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು ಎಂಬುದು 2014–15ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯಿಂದ ತಿಳಿದುಬಂದಿದೆ. ಆಗ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿತ್ತು.

ಇನ್ನು ಮೋದಿಯೇ ಹೇಳಿದಂತೆ 2013 ರ ವರೆಗೆ ಕಾಮಗಾರಿಗಳೇನೂ ನಡೆದಿಲ್ಲ. ಅದರ ನಂತರವಷ್ಟೇ ಕೆಲಸಗಳು ಪ್ರಾರಂಭಗೊಂಡಿದೆ ಎನ್ನುವ ವಾದವನ್ನು ಒಪ್ಪುವುದಾದರೆ, ಕರ್ನಾಟಕ ರಾಜ್ಯದಲ್ಲಿ 2013 ಮೇ ನಂತರ ಇಂದಿನವರೆಗೆ ಆಡಳಿತ ನಡೆಸುತ್ತಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಾಗಿ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.

ಒಟ್ಟಿನಲ್ಲಿ ರಾಷ್ಟ್ರಪತಿ ಭಾಷಣದ ನಂತರ ವಂದನಾ ನಿರ್ಣಯ ಸಂದರ್ಭದ ನಂತರದ ತನ್ನ ಭಾಷಣವನ್ನು ಮೋದಿಯವರು ಓರ್ವ ಪ್ರಧಾನಿ ಎನ್ನುವ ನೆಲೆಯಲ್ಲಿ ಮಾಡದೆ, ಬಿಜೆಪಿಯ ವಕ್ತಾರನ ರೀತಿಯಲ್ಲಿ ಕರ್ನಾಟಕದ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಭಾಷಣ ಮಾಡಿದಂತಿತ್ತು ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

To Top
error: Content is protected !!
WhatsApp chat Join our WhatsApp group