ನಿಮ್ಮ ಬರಹ

ಯಾದಗಿರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೆಯಾ?

ವರದಿಗಾರ (ಫೆ 8) :   ಇಂತಹದ್ದೊಂದು ಪ್ರಶ್ನೆ ಇತ್ತೀಚೆಗೆ ಕಾಡಿದ್ದು ಗಿರಿನಾಡಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ನೋಡಿದಾಗ. ಈಗಾಗಲೇ ಹಲವು ಕಾರಣಕ್ಕೆ ಹಿಂದುಳಿದ ಜಿಲ್ಲೆಯಂದು ಖ್ಯಾತಿಯಾದ ಯಾದಗಿರಿಯು ಇದೀಗ ಸಾಹಿತ್ಯಕ ಕಾರ್ಯಕ್ರಮಗಳಿಂದಲು ವಂಚಿತವಾಗಿದೆ.
ನಾನು  ವಯಸ್ಸಿನಲ್ಲಿ  ಚಿಕ್ಕವನು ಈ ಪ್ರಶ್ನೆ ಹಲವು ದಿನಗಳಿಂದ ತಲೆಯೊಳಗೆ ಕೊರೆಯುತ್ತಿದೆ. ಕೇಳಬೇಕೊ ಅಥವಾ ಬೇಡವೊ ಎಂಬುವುದು ತಿಳಿದಿಲ್ಲ. ಸರಕಾರದ ಸಂಸ್ಥೆಯಾದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿಯಿಂದ ಈ ಪ್ರಶ್ನೆ ಕೇಳಲೇಬೇಕಾಗಿದೆ ನನಗನಿಸುತ್ತದೆ. ಈ ಪ್ರಶ್ನೆ ಗಿರಿನಾಡಿನ ಸಾಹಿತ್ಯ ವಲಯದಲ್ಲಿನ ಅನೇಕ ಸಾಹಿತಿಗಳದ್ದಾಗಿದೆ ಆದರೆ ಯಾರು ಬಾಯಿ ಬಿಡುತ್ತಿಲ್ಲ ಒಳಗೆ ಅನುಭವಿಸುತ್ತಿರುವುದು ಕಂಡುಬರುತ್ತದೆ.

ಇದೇ ಜಿಲ್ಲೆಯ ಕೆಲವು ವಲಯ ಕಸಾಪಗಳಷ್ಟಾದರು ಚುರುಕತೆಯಿಲ್ಲದ ಜಿಲ್ಲಾ ಕಸಾಪ ಬರಿ ಸಮ್ಮೇಳನಕ್ಕೆಮಾತ್ರ ಸೀಮಿತಗೊಳಿಸಿದ್ದು ದುರಂತದ ಸಂಗತಿಯಾಗಿದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಯಾದಗಿರಿ ಕಸಾಪ ಅತ್ಯಂತ ಮೌನವಾಗಿದ್ದು ಸದ್ದುಗದ್ದಲವೇ ಇಲ್ಲದೇ ಸಾಹಿತ್ಯ ಲೋಕವನ್ನು ಮೌನಗೊಳಿಸಿದ್ದು ಖಾರವಾದ ವಿಚಾರವಾಗಿದೆ. ಇದೇ ಜಿಲ್ಲೆಯ ಕೆಲವು ವಲಯಗಳಾದ ಸುರಪೂರ, ಕೆಂಬಾವಿಗಳಲ್ಲಿ ಸದಾ ಒಂದಲ್ಲಾ ಒಂದು ಸಾಹಿತ್ಯಕ ಚಟುವಟಿಕೆಗಳಲ್ಲಿ  ತೊಡಗಿಸಿಕೊಂಡಿರುತ್ತಾರೆ. ಸಾಹಿತ್ಯ ಸಂಗೀತಕ್ಕೆ ತಮ್ಮದೇ ಆದ ರೀತಿಯಲ್ಲಿ ಕೆಲಸಗಳು ಮಾಡುತ್ತಿದ್ದಾರೆ ಆದರೆ ಅದ್ಯಾಕೆ ಜಿಲ್ಲಾ ಸಾಹಿತ್ಯ ಪರಿಷತ್ತು ಯಾವುದೇ ಕಾರ್ಯಕ್ರಮಗಳನ್ನು ಇಲ್ಲಿನ ಸಾಹಿತಿಗಳಿಗೆ ಕೊಡದೇ ಮೌನವಾಗಿದ್ದಾರೆ.

ಸುರಪೂರ ಶಾಹಾಪೂರ ತಾಲೂಕಿಗೆ ಹೋಲಿಸಿದರೆ ಯಾದಗಿರಿ ಜಿಲ್ಲಾ ಸಾಹಿತ್ಯ ಪರಿಷತ್ತು ಕಳೆದ ಹಲವು ವರ್ಷಗಳಿಂದ ಸಾಹಿತ್ಯ ಯಾವುದೇ ದೊಡ್ಡ ಕಾರ್ಯಕ್ರಮ  ಮಾಡದಿರುವುದು ಸಾಹಿತ್ಯ ವಲಯದಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದೆ. ಗಿರಿನಾಡಿನಲ್ಲಿ ಖಾಸಗಿ ಸಂಸ್ಥೆಗಳು ಅದೆಷ್ಟೊ ಹೆಚ್ಚು  ಕಾರ್ಯಕ್ರಮ ಮಾಡುತ್ತಿವೆ ಆದರೆ ಅಧಿಕೃತ ಸರಕಾರದ ಸಂಸ್ಥೆ ಮೌನ ವಹಿಸಿದ್ದು ಸಾಹಿತ್ಯ ಲೋಕದಲ್ಲಿ  ಸಂಶಯದ ಹುತ್ತ ಬೆಳೆಯುವಂತೆ ಮಾಡಿದೆ.
ಇದೇ ಪಕ್ಕದ ಕಲಬುರ್ಗಿ ಜಿಲ್ಲೆಯ ಸಾಹಿತ್ಯ ಪರೀಷತ್ತು ಅನೇಕ ಕಾರ್ಯಕ್ರಮಗಳಿಂದ ಕ್ರಿಯಾಶೀಲವಾಗಿದ್ದು ಸಾಹಿತ್ಯ ಲೋಕವನ್ನು ಬೆರಗುಗೊಳಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದನ್ನು ನೋಡಿಯಾದರೂ ಯಾದಗಿರಿ ಜಿಲ್ಲಾ ಸಾಹಿತ್ಯ ಪರಿಷತ್ತು ಎಚ್ಚತ್ತುಕೊಳ್ಳುತ್ತಿಲ್ಲ ಎನ್ನುವುದು ವಿಚಾರಿಸಬೇಕಾದ ಸಂಗತಿಯಾಗಿದೆ.

ಯಾದಗಿರಿಯಲ್ಲಿ ಅನೇಕ ಯುವ ಹಾಗೂ ಹಿರಿಯ ಸಾಹಿತಿಗಳಿದ್ದು ಅವರ ಬೆಳವಣಿಗೆಗೆ ಸಾಹಿತ್ಯ ಪರಿಷತ್ತು ಮುಖ್ಯ ಪಾತ್ರ ವಹಿಸುತ್ತದೆ. ಇಲ್ಲಿ ಸಾಹಿತ್ಯಕ ನೆಲೆಗಳನ್ನು ಗಟ್ಟಿಗೊಳಿಸಲು ಪರಿಷತ್ತು ಮುಖ್ಯವಾಗುತ್ತದೆ.  ಆದರೆ ಸಾಹತ್ಯ ಪರಿಷತ್ತೇ ಗಾಢ ನಿದ್ರೆಯಲ್ಲಿರುವುದು ಕಂಡುಬರುತ್ತಿದೆ. ಯಾದಗಿರಿಯ ಕೆಲವು ಯುವಕರ ಸಾಂಸ್ಕೃತಿಕ ಲೋಕವನ್ನು ಅದರ ಮೆರಗನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ  ಹಿರಿಯ ಸಾಹಿತಿಗಳು ಕೂಡ ಮಾತನಾಡದೇ ಸುಮ್ಮನಿರುವುದು ಯಾಕೆ ಎಂಬ ಪ್ರಶ್ನೆ ನನಗೂ ಕಾಡಿದೆ. ಅನೇಕರು ಈ ವಿಷಯದಲ್ಲಿ ಮೌನ ವಹಿಸಿದ್ದು ಇನ್ನಷ್ಟು ಗುಮಾನಿಗಳನ್ನು ಎಬ್ಬಿಸಿರುವುದು ಸತ್ಯವಾಗಿದೆ. ಸಾಹಿತ್ಯ ಪರಿಷತ್ತಿನ ಪದಾದಿಕಾರಿಗಳು ಏನು  ಮಾಡುತ್ತಿದ್ದಾರೆ ಸರಕಾರದ ಅನುದಾನದ ಕೊರತೆಯಿದೆಯಾ ಅಥವಾ ಉಳಿದ ಜಿಲ್ಲೆಗಳಿಗಿಂತ ಯಾದಗಿರಿಗೆ ಸರಕಾರ ಅನುದಾನವೇ ಕೊಡುತ್ತಿಲ್ಲವೆ,  ಹೀಗೆ ಪ್ರಶ್ನೆಗಳು ಸಾಹಿತ್ಯ ವಲಯದಲ್ಲಿ ಎದ್ದಿವೆ.

ಈ ಲೇಖನದ ಮೂಲಕ ಜಿಲ್ಲಾ ಸಾಹಿತ್ಯ ಪರಿಷತ್ತು ಕಣ್ಣು ಬಿಡಬೇಕಿದೆ. ಸಾಹಿತ್ಯದ ಕಾರ್ಯಕ್ರಮಗಳನ್ನು ಹೆಚ್ಚುಗೊಳಿಸಿ ಈ ನಾಡಿನ ಸಾಹಿತಿಗಳಿಗೆ ನ್ಯಾಯ ಕೊಡಬೇಕಿದೆ. ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ತುಂಬಾ ಹಿರಿಯರಾಗಿದ್ದು ಅವರ ಬಗ್ಗೆ ನನಗೆ ಅತೀವ ಗೌರವವಿದೆ. ಇಲ್ಲಿ ವಯಕ್ತಿಕವಾಗಿ ಯೋಚಿಸದೇ ಸಾಮೂಹಿಕವಾಗಿ ಸಾಹಿತ್ಯಿಕವಾಗಿ ಯೋಚಿಸಿ ಜಿಲ್ಲಾ ಕಸಾಪ ಕ್ರಿಯಾಶೀಲವಾಗಬೇಕು. ಅಧಿಕೃತ ಸರಕಾರದ ಸಂಸ್ಥೆಯಾದ ಜಿಲ್ಲಾ ಕಸಾಪ ತನ್ನ ಕಾರ್ಯವೈಖರಿ ಚುರುಕುಗೊಳಿಸಿ  ಈ ಗಿರಿನಾಡಿನ ಸಾಹಿತ್ಯ ಬೆಳವಣಿಗೆಯಲ್ಲಿ ಮುಂದಾಗಬೇಕು ಎಂಬುವುದು ನನ್ನ ಆಶಯ.

ರಿಯಾಜ್ ಪಟೇಲ್ ವರ್ಕನಳ್ಳಿ. 

To Top
error: Content is protected !!
WhatsApp chat Join our WhatsApp group