ರಾಜ್ಯ ಸುದ್ದಿ

ಮೋದಿಯವರೇ, ಬಸವಣ್ಣನ ತತ್ವಗಳನ್ನು ನೀವು ಪಾಲಿಸಿದ್ರೆ ಕನ್ನಡಿಗರು ನಿಮ್ಮನ್ನು ಅಭಿನಂದಿಸುವರು : ಸಿದ್ದರಾಮಯ್ಯ

ವರದಿಗಾರ (ಫೆ 7) :  ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಇಂದು ತನ್ನ ಭಾಷಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವಾಗ ಕರ್ನಾಟಕದ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ನೀವಿಂದು ಸಂಸತ್ತಿನಲ್ಲಿ ನನ್ನನ್ನು ಹಾಗೂ ಬಸವಣ್ಣನವರನ್ನು ನೆನಪಿಸಿದ್ದೀರಾ. ಇದು ಬಹಳ ಸಂತೋಷದಾಯಕ ವಿಚಾರ. ಬಸವಣ್ಣ ಹೇಳಿದ್ದಾರೆ, “ಧನಿಕರು ದೇಗುಲವನ್ನು ಕಟ್ಟಿಸಿದ್ದಾರೆ, ನಾನೇನು ಮಾಡಲಿ ಬಡವ?” ಎಂಬ ಬಸವ ವಚನವನ್ನು ಉಲ್ಲೇಖಿಸಿ, ಮೋದಿಯವರೇ, ನೀವು ಬಸವಣ್ಣನ ತತ್ವ ಸಿದ್ಧಾಂತಗಳನ್ನು ಪಾಲಿಸಿದ್ರೆ ಕನ್ನಡಿಗರು ನಿಮ್ಮನ್ನು ಅಭಿನಂದಿಸುತ್ತಾರೆ’ ಎಂದು ಟ್ವೀಟ್ ಮೂಲಕ ಉತ್ತರಿಸಿದ್ದಾರೆ.

ಲೋಕಸಭೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಪಕ್ಷವನ್ನು ದೇಶ ವಿಭಜನೆಗೆ ನೇರ ಕಾರಣವೆಂದು ಟೀಕಿಸಿದ  ಭಾಷಣದಲ್ಲಿ ಮುಂದುವರೆದು, ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯರ ಕಾಲೆಳೆಯುವ ಪ್ರಯತ್ನ ಮಾಡಿದ್ದರು. ಖರ್ಗೆಯವರನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, “ಖರ್ಗೆಯವರೇ ನೀವು ಕರ್ನಾಟಕದವರಲ್ಲವೇ? ನಿಮಗೆ ಬಸವಣ್ಣನ ಬಗ್ಗೆ ಗೊತ್ತಿರಬಹುದಲ್ಲವೇ? ಬಸವಣ್ಣ 12 ನೇ ಶತಮಾನದಲ್ಲಿ ‘ಅನುಭವ ಮಂಟಪ” ಸ್ಥಾಪಿಸಿ, ಎಲ್ಲವನ್ನೂ ಪ್ರಜಾಪ್ರಭುತ್ವ ಶೈಲಿಯಲ್ಲಿ ಹಾಗೂ ಮಹಿಳಾ ಸಬಲೀಕರಣಕ್ಕೆ ಪ್ರಾಶಸ್ತ್ಯ ನೀಡಿದ್ದರು. ನಿಮಗೆ ಮರೆತು ಹೋಗಿದೆಯೇ? ಎಂದು ಪ್ರಶ್ನಿಸಿದ್ದರು.

ಮೋದಿಯವರು ತನ್ನ ಭಾಷಣದಲ್ಲಿ ಎರಡೆರಡು ಬಾರಿ ಕರ್ನಾಟಕ ಹಾಗೂ ಖರ್ಗೆಯವರನ್ನು ಉಲ್ಲೇಖಿಸಿ ತನ್ನ ಟೀಕಾಸ್ತ್ರ ಪ್ರಯೋಗಿಸಿದ್ದು, ಕರ್ನಾಟಕದ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಿಸಿದ್ದಾರೆ. ರಾಜಸ್ಥಾನದಲ್ಲೂ ಕೂಡ ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯಿರುವುದರಿಂದ ಅಲ್ಲಿನ ಬರ್ಮಾರ್ ರಿಫೈನರಿ ಕುರಿತು ಉಲ್ಲೇಖಿಸಿದ್ದು ಕೂಡಾ ಮೋದಿಯವರ ಚುನಾವಣಾ ತಂತ್ರಗಾರಿಕೆ ಎಂದು ವಿಶ್ಲೇಷಿಸಲಾಗಿದೆ

To Top
error: Content is protected !!
WhatsApp chat Join our WhatsApp group