ಸಾಮಾಜಿಕ ತಾಣ

ಮತಾಂಧ ಮಾಜಿ ಪತ್ರಕರ್ತೆ ಜಾಗೃತಿ ಶುಕ್ಲಾ ಖಾತೆಯನ್ನು ಬ್ಲಾಕ್ ಮಾಡಿದ ಟ್ವಿಟ್ಟರ್ ಸಂಸ್ಥೆ !

ವರದಿಗಾರ (ಜ 30) :  ಬಲಪಂಥೀಯ ಉಗ್ರವಾದಿಗಳಿಗೆ ಸಾಮಾಜಿಕ ತಾಣಗಳಲ್ಲಿ ಬೆಂಬಲ ಸೂಚಿಸಿ ಟ್ವೀಟ್ ಮಾಡುವ ಮತಾಂಧ ಮಾಜಿ ಪತ್ರಕರ್ತೆ ಜಾಗೃತಿ ಶುಕ್ಲಾಳ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ ಸ್ಥಗಿತಗೊಳಿಸಿದೆ. ಕಾಸ್ ಗಂಜ್ ಕೋಮು ಗಲಭೆಗೆ ಸಂಬಂಧಿಸಿದಂತೆ ತನ್ನ ಮತಾಂಧತೆಯನ್ನು ಟ್ವೀಟ್ ಮೂಲಕ ಮೂಲಕ ತೋರ್ಪಡಿಸಿದ್ದ ಜಾಗೃತಿ ಶುಕ್ಲಾ, “ಅವರು (ಮುಸ್ಲಿಮರು) ನಮ್ಮನ್ನು ಕೊಲ್ಲುವುದಕ್ಕಿಂತ ಮೊದಲು ನಾವು (ಹಿಂದೂಗಳು) ಅವರನ್ನು ಕೊಲ್ಲಬೇಕು, ಇದಕ್ಕಾಗಿ ಎಲ್ಲರೂ ಮಾರಕಾಯುಧಗಳನ್ನು ಹೊಂದಿರಬೇಕು” ಎಂದು ನರಮೇಧಕ್ಕೆ ಕರೆಕೊಡುವ ಟ್ವೀಟ್ ಮಾಡಿದ್ದಳು. ಈ  ಟ್ವೀಟ್ ಗೆ ಸಾಮಾಜಿಕ ತಾಣಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಇದರ ಕುರಿತಾಗಿ ಜಾಲತಾಣಿಗರು, ಟ್ವಿಟ್ಟರ್ ಸಂಸ್ಥೆಗೆ ದೂರನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಟ್ಟರ್, ಜಾಗೃತಿ ಶುಕ್ಲಾಳ ಖಾತೆಯನ್ನು ಸ್ಥಗಿತಗೊಳಿಸಿತ್ತು.

ನರಮೇಧಕ್ಕೆ ಕರೆ ಕೊಡುವ ರೀತಿಯ ಟ್ವೀಟ್ ಮಾಡಿದ್ದ ಈ ಮತಾಂಧೆಯ ಟ್ವಿಟ್ಟರ್ ಖಾತೆಯ ವಿರುದ್ಧ ಹಲವರು ದೂರು ದಾಖಲಿಸಿದ್ದರೂ, ಟ್ವಿಟ್ಟರ್ ಸಂಸ್ಥೆ ಮಾತ್ರ ಮೊದಲಿಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನಿತ್ತು. ಆದರೆ ಜಾಲತಾಣಿಗರು ಈ ಕುರಿತು ದೊಡ್ಡ ಮಟ್ಟದ ಅಭಿಯಾನ ಮಾಡಿದಾಗ, ಕೊನೆಗೆ ಒತ್ತಡಕ್ಕೆ ಮಣಿದ ಟ್ವಿಟ್ಟರ್ ಸಂಸ್ಥೆ,  ಆಕೆಯ ಖಾತೆಯನ್ನು ಸ್ಥಗಿತಗೊಳಿಸಿತ್ತು. ನಂತರ ಆಕೆ ತನ್ನ ಪ್ರಚೋದನಕಾರಿ ಟ್ವೀಟನ್ನು ಅಳಿಸಿಹಾಕುವುದಾಗಿ ಒಪ್ಪಿಕೊಂಡ ನಂತರ ಆಕೆಯ ಖಾತೆಯನ್ನು ಮರು ಸ್ಥಾಪಿಸಲಾಗಿತ್ತು.

ಜಾಗೃತಿ ಶುಕ್ಲಾ, ಉತ್ತರಪ್ರದೇಶದ ಕಾಸ್ ಗಂಜಿನಲ್ಲಿ ನಡೆದ ಕೋಮು ಗಲಭೆಗೆ ವ್ಯಕ್ತಿಯೋರ್ವ ಹತ್ಯೆಯಾಗಿದ್ದರ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಟ್ವೀಟ್ ಮಾಡಿದ್ದಳು. ಕಾಸ್ ಗಂಜ್ ನಲ್ಲಿ ಮುಸ್ಲಿಮರು ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಸಲುದ್ದೇಶಿಸಿದ್ದ ಸ್ಥಳಕ್ಕೆ ತಿರಂಗಾಯಾತ್ರೆಯ ನೆಪದಲ್ಲಿ ಭಗವ ಧ್ವಜಗಳೊಂದಿಗೆ ಬೈಕ್ ರ‍್ಯಾಲಿಯಲ್ಲಿ ಬಂದಿದ್ದ ಬಜರಂಗದಳ ಹಾಗೂ ಎಬಿವಿಪಿಯ ಕಾರ್ಯಕರ್ತರು, ತ್ರಿವರ್ಣ ಧ್ವಜಕ್ಕೆ ಬದಲಾಗಿ ಭಗವಾ ಧ್ವಜ ಹಾರಿಸಲು ಬಲವಂತಪಡಿಸಿ, ಪ್ರದೇಶದಲ್ಲಿ ಬಿಗುವಿನ ವಾತಾವರಣಕ್ಕೆ ಕಾರಣರಾಗಿದ್ದರು. ನಂತರ ಈ ಘಟನೆ ಕಾಸ್ ಗಂಜ್ ನ ಇನ್ನೊಂದು ಪ್ರದೇಶದಲ್ಲಿ ಕೋಮು ಗಲಭೆಗೆ ಕಾರಣವಾಗಿ, ಚಂದನ್ ಗುಪ್ತಾ ಎನ್ನುವ ವ್ಯಕ್ತಿಯೋರ್ವನ ಹತ್ಯೆಯಾಗಿತ್ತು.

ಕಾಸ್ ಗಂಜ್ ಕೋಮು ಗಲಭೆಯ ನಂತರ ಕೆಲವೊಂದು ಮಾಧ್ಯಮಗಳಲ್ಲಿ ಬಂದಿದ್ದ ಹಲವು ರೀತಿಯ ಸುಳ್ಳುಗಳು ಜನರನ್ನು ಮತ್ತಷ್ಟು ಪ್ರಚೋದಿಸಿದ್ದವು. ‘ಇಂಡಿಯಾ ಟುಡೇ’ ಚಾನೆಲ್, ಜೀವಂತವಾಗಿದ್ದ ವ್ಯಕ್ತಿಯನ್ನು ಕೋಮು ಗಲಭೆಯಲ್ಲಿ ಸತ್ತನೆಂದು ಹೇಳಿಕೊಂಡು ಜನರನ್ನು ಉದ್ರೇಕಿಸುವ ಪ್ರಯತ್ನ ನಡೆಸಿತ್ತು. ‘ಆಜ್ ತಕ್’ ನ ನಿರೂಪಕರಾದ ಶ್ವೇತಾ ಸಿಂಗ್ ಹಾಗೂ ರೋಹಿತ್ ಸರ್ದಾನ ಕೂಡಾ ಸತ್ಯಗಳನ್ನು ಮರೆ ಮಾಚಿ ಸುಳ್ಳುಗಳನ್ನು ಪ್ರಸಾರಿಸುವ ಪ್ರಯತ್ನ ನಡೆಸಿದ್ದರು. ಆದರೆ ‘ಎಬಿಪಿ ನ್ಯೂಸ್’ನ ಅಭಿಸಾರ್ ಶರ್ಮಾ ತನ್ನ ಚಾನೆಲಿನಲ್ಲಿ ಹಾಗೂ ತನ್ನ ಫೇಸ್ಬುಕ್ ಖಾತೆಯಲ್ಲಿ ‘ಆಜ್ ತಕ್’ನ ಸುಳ್ಳುಗಳನ್ನು ಬಯಲು ಮಾಡಿದ್ದರು. ಒಟ್ಟಿನಲ್ಲಿ ಜನರಿಗೆ ಸತ್ಯವನ್ನು ತಲುಪಿಸಿ, ಕೋಮು ಸಾಮರಸ್ಯಕ್ಕೆ ಕಾರಣವಾಗಬೇಕಿದ್ದ ಮಾಧ್ಯಮಗಳೇ ಕಾಸ್ ಗಂಜ್ ಕೋಮುಗಲಭೆಯಲ್ಲಿ ಸುಳ್ಳುಗಳನ್ನು ಪ್ರಸಾರಿಸಿ, ಗಲಭೆಗೆ ಕುಮ್ಮಕ್ಕು ನೀಡಿರುವುದು ಭಾರತದಲ್ಲಿ ಮಾಧ್ಯಮಗಳು ಎತ್ತ ಸಾಗುತ್ತಿದೆ ಎನ್ನುವುದರ ಒಂದು ಸ್ಪಷ್ಟ ಚಿತ್ರಣವಾಗಿದೆ

To Top
error: Content is protected !!
WhatsApp chat Join our WhatsApp group