ವರದಿಗಾರ ವಿಶೇಷ

ಪದ್ಮಾವತ್ ವಿವಾದ: ಕರ್ಣಿ ಸೇನೆಯ ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್ ಮೌನಕ್ಕೆ ಕಾರಣವೇನು ಗೊತ್ತೇ??

ವರದಿಗಾರ(25-01-2018): ಪದ್ಮಾವತ್ ಚಲನಚಿತ್ರವನ್ನು ವಿರೋಧಿಸಿ ಕರ್ಣಿ ಸೇನೆಯನ್ನೊಳಗೊಂಡಂತೆ ಕೆಲವು ರಾಜಪೂತ ಸಂಘಟನೆಗಳು ಗುಜರಾತ್, ರಾಜಸ್ಥಾನ ಹಾಗೂ ಹರಿಯಾಣಗಳನ್ನೊಳಗೊಂಡಂತೆ ಹಲವು ರಾಜ್ಯಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿವೆ. ನಿನ್ನೆಯವರೆಗೂ ಮಾಲ್, ಚಲನಚಿತ್ರ ಮಂದಿರಗಳನ್ನು ಹಾನಿಗೊಳಿಸುತ್ತಿದ್ದ ಕರ್ಣಿ ಸೇನೆಯ ದುಷ್ಕರ್ಮಿಗಳು ಇಂದು ಗುರ್ಗಾಂವ್ ನಲ್ಲಿ ಶಾಲಾ ಬಸ್ ನ ಮೇಲೆ ಆಕ್ರಮಿಸಿದ್ದಾರೆ.

ಇಷ್ಟೆಲ್ಲಾ ಆಗುತ್ತಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಇತರ ನಾಯಕರು ಸುಮ್ಮನಿರುವುದರ ಹಿಂದಿರುವ ಕಾರಣ ಹೆಚ್ಚಿನವರಿಗೂ ಗೊತ್ತಿರಬಹುದು. ಈ ವಿವಾದ, ಹಿಂಸಾಚಾರಗಳೆಲ್ಲವೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ನಡೆಯುತ್ತಿದ್ದು, ಇದು ಅಲ್ಲಿನ ರಾಜ್ಯ ಸರಕಾರಗಳ ಹಾಗೂ ಕೇಂದ್ರದಲ್ಲಿ ಆಡಳಿತದಲ್ಲಿರುವ ಮೋದಿ ಸರಕಾರದ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬಿಜೆಪಿ ಸರಕಾರಗಳು ಹೀನಾಯವಾಗಿ ಸೋಲನುಭವಿಸಿದೆ ಹಾಗೂ ಹಿಂಸಾವಾದಿಗಳ ಮುಂದೆ ಅಕ್ಷರಶಃ ಮಂಡಿಯೂರಿದಂತಿದೆ.

ಆದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಬಗ್ಗೆ ಏಕೆ ಸುಮ್ಮನಾಗಿದೆ? ಆಡಳಿತದಲ್ಲಿರುವ ಬಿಜೆಪಿಯನ್ನು ಟೀಕಿಸಲು ಯಾವುದೇ ಅವಕಾಶವನ್ನು ಬಿಡದ ಕಾಂಗ್ರೆಸ್ ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆಸುತ್ತಿರುವ ಭಯೋತ್ಪಾದಕರ ವಿರುದ್ಧ ಏಕೆ ಮಾತನಾಡುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮೆಲ್ಲರನ್ನೂ ಕಾಡುತ್ತಿರಬಹುದು.

ಕಾಂಗ್ರೆಸ್- ಕರ್ಣಿ ಸೇನೆ ಸಖ್ಯ??

ಹೌದು, ಇಂದು ದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಕರ್ಣಿ ಸೇನೆಯ ಹಿಂಸಾಚಾರದ ವಿರುದ್ಧ ಮಾತೆತ್ತದಿರಲು ಮುಂಬರುವ ಉಪಚುನಾವಣೆಯೇ ಕಾರಣ. ಜನವರಿ 29ರಂದು ರಾಜಸ್ಥಾನದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಹಾಗೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಅಜ್ಮೇರ್ ಹಾಗೂ ಅಲ್ವಾರ್ ಲೋಕಸಾಭಾ ಕ್ಷೇತ್ರ ಹಾಗೂ ಮಂಡಲ್ ಘರ್ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 29ರಂದು ಉಪಚುನಾವಣೆ ನಡೆಯಲಿದೆ. ಅಧಿಕಾರದಲ್ಲಿರುವ ಬಿಜೆಪಿಯಿಂದ ದೂರಸರಿಯಲು ನಿರ್ಧರಿಸಿದ ರಾಜಪೂತ ಸಂಘಟನೆಗಳು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ರಾಜಪೂತ ಸಮುದಾಯವು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಬಗ್ಗೆ ತೀವ್ರ ಅಸಮಾಧಾನವನ್ನು ಹೊಂದಿದೆ. ತಾವು ಬೆಂಬಲಿಸಿದ ಬಿಜೆಪಿಯು ತಮ್ಮನ್ನು ವಂಚಿಸಿದೆ ಎಂದು ರಾಜಪೂತ ಸಮುದಾಯವು ಚಿಂತಿಸತೊಡಗಿದೆ. ತಮ್ಮ ಮೀಸಲಾತಿಯ ಕೂಗಿಗೆ ಯಾವುದೇ ಬೆಲೆ ಕೊಡಲಿಲ್ಲ ಹಾಗೂ ಚತುರ್ ಸಿಂಗ್ ಲೋಧಾ ಸಮಿತಿ ಹಾಗೂ ಪದ್ಮಾವತಿ ವಿವಾದದಲ್ಲಿ ಬಿಜೆಪಿಯ ನಿಲುವು ರಜಪೂತ ಸಮುದಾಯವನ್ನು ನೋಯಿಸಿದೆ.

ಹಾಗಾಗಿ, ಕರ್ಣಿ ಸೇನಾ, ರಾಜಪೂತ ಸಭಾ, ರಾವಣ ರಾಜಪೂತ ಸಮಾಜ, ಪ್ರತಾಪ್ ಫೌಂಡೇಶನ್, ದುರ್ಗಾ ದಳಗಳನ್ನೊಳಗೊಂಡಂತೆ ಹಲವು ರಾಜಪೂತ ಸಂಘಟನೆಗಳು ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಬಿಜೆಪಿಗೆ ‘ಪಾಠ ಕಲಿಸಲು’ ತೀರ್ಮಾನಿಸಿದೆ. ಬಿಜೆಪಿಯಿಂದ ತಮಗುಂಟಾದ ‘ಅವಮಾನ’ದ ಕಾರಣ ರಾಜಪೂತ ಸಮುದಾಯವು ಉಪಚುನಾವಣೆಯಲ್ಲಿ ಎಲ್ಲಾ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಮತ ನೀಡಲು ತೀರ್ಮಾನಿಸಿದೆ.

ಕಳೆದ ವಾರ ಕಾಂಗ್ರೆಸ್ ನ ಅಜ್ಮೇರ್ ಕ್ಷೇತ್ರದ ಅಭ್ಯರ್ಥಿ ರಘು ಶರ್ಮಾ ರಾಜಪೂತ ನಾಯಕರನ್ನು ಭೇಟಿಯಾಗಿ ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಕೇಳಿಕೊಂಡಿದ್ದರು. ಕರ್ಣಿ ಸೇನಾ, ರಾಜಪೂತ ಸಭಾ, ರಾವಣ ರಾಜಪೂತ, ಚರಣ್ ರಾಜಪೂತ, ಪ್ರತಾಪ್ ಫೌಂಡೇಶನ್’ಗಳನ್ನೊಳಗೊಂಡಂತೆ ಪ್ರಮುಖ ರಾಜಪೂತ ಸಂಘಟನೆಗಳು ಅವರಿಗೆ ಷರತ್ತು ರಹಿತ ಬೆಂಬಲದ ಭರವಸೆ ನೀಡಿದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಶಾಲಾ ಬಸ್ ಮೇಲೆ ನಡೆದ ಆಕ್ರಮಣದ ನಂತರ ಹಿಂಸಾಚಾರವನ್ನು ಖಂಡಿಸಿದರೂ, ಪದ್ಮಾವತ್ ತಂಡದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಲು ಅಥವಾ ಕರ್ಣಿ ಸೇನೆಯ ಹೆಸರೆತ್ತಿ ಖಂಡಿಸಲು ಧೈರ್ಯ ತೋರದಿರುವುದು ಕಾಂಗ್ರೆಸ್ ಪಕ್ಷದ ಅವಕಾಶವಾದಿ ನೀತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದರೂ ತಪ್ಪಾಗಲಾರದು.

To Top
error: Content is protected !!
WhatsApp chat Join our WhatsApp group