ಪ್ರತಿಭೆ

‘ನನ್ನೂರ ಸೌಹಾರ್ದ ಇಷ್ಟೇ’ – ಜಲೀಲ್ ಮುಕ್ರಿಯವರ ವೈರಲ್ ಕವನ

ನನ್ನೂರ ಸೌಹಾರ್ದ ಇಷ್ಟೇ….  

ಕಿಣಿಯರಂಗಡಿ ಅಕ್ಕಿ ಸಾಮಾನು
ಉಸ್ಮಾನಾಕನ ಮೀನು
ಸಿದ್ದೀಕಾಕನ ಕೋಳಿ
ಕೃಷ್ಣಣ್ಣನ ಒಂದು ತುಂಡು ಮಲ್ಲಿಗೆ
ಪೊರ್ಬುಲಂಗಡಿಯಿಂದ ಒಂದು ಬೀಡ
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಉಮರಾಕನ ಕಟ್ಟಿಗೆ
ಮಹಾಲಿಂಗೇಶ್ವರ ಗ್ಯಾಸ್
ಸೋಜಾರ ಗ್ಯಾಸ್ ಸ್ಟವ್
ಶಬೀರನ ಮನೆ ಕಟ್ಟುವ ಸುಧಾಕರಣ್ಣ
ಹರೀಶನ ಮನೆ ಕಟ್ಟುವ ಹಮೀದ್
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಎಲ್ಲರೂ ಮಿಂದೆದ್ದ
ನದಿಯ ಕುಡಿಯುವ ನೀರು
ಐತ ಚೋಮ ಮೈ ಸೋಂಕಿದ ಗಾಳಿ
ಅಕ್ಕಪಕ್ಕ ಮಸೀದಿ ಮಂದಿರ
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಕೋಮುವಾದ ಅಶಾಂತಿ
ಊರಿಗೆ ಕಾಲಿಡದಂತೆ
ಒಂದು ಬದಿಯಿಂದ ಕಾಯುವ
ಸಹಸ್ರಲಿಂಗೇಶ್ವರ
ಅಕ್ರಮ-ಅನ್ಯಾಯ ಕಾಲಿಡದಂತೆ
ಇನ್ನೊಂದು ಬದಿಯಿಂದ ಕಾಯುವ ಇಗರ್ಜಿ
ಅಪ್ಪಿ ತಪ್ಪಿ ಬಂದರೂ ಒದ್ದೋಡಿಸುವ
ನಡುವಿನಲ್ಲಿರುವ ಮಾಲಿಕುದ್ದೀನಾರ್
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಅಝಾನ್ ಕೇಳುವ ವೆಂಕಟರಮಣ
ಮಂತ್ರೋಚ್ಛಾರ ಜಾಗಟೆ ಸುಪ್ರಭಾತ
ಕೇಳುವ ಮಾಲಿಕುದ್ದೀನಾರ್
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಗಣೇಶ್’ಸ್ಟೋರಿಂದ ಹುಟ್ಟಿದ ಮಗುವಿನ ಉಡುಪು
ಸೂರಪ್ಪರಂಗಡಿಯಿಂದ ತೊಟ್ಟಿಲು
ಬದ್ರಿಯಾದಿಂದ ದಫನದ ಬಟ್ಟೆ
ಸೀನಣ್ಣನ ಪಿಕ್’ಅಪಲ್ಲಿ
ತರುವ ಮಯ್ಯತ್ ಕಟ್ಟಿಲು
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಹತ್ತು ಬಿಜೆಪಿ, ಹತ್ತು ಕಾಂಗ್ರೆಸ್
ಪಂಚಾಯತ್ ಮೆಂಬರು
ಇಗರ್ಜಿ ಮಂದಿರ ಮಸೀದಿಯಂತೆ ಕಾಣುವ
ಪಂಚಾಯತ್ ಕಟ್ಟಡ
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಮಹಮ್ಮದ್,ರಾಬರ್ಟ್’ನ ಕೂದಲು
ಚಂದಗೊಳಿಸುವ ರಾಘವ,ಸಂಜೀವ
ಪ್ರಕಾಶ ರಾಜರ ಬಟ್ಟೆ ಹೊಲಿಯುವ
ಮಾರ್ಕೊ ರಹಿಮಾನ್
ಇಕ್ಬಾಲರ ಮನೆಗೆ
ಬಣ್ಣ-ಸುಣ್ಣ ಬಳಿಯುವ ಶೆಟ್ರು
ಶೆಟ್ಟರ ಮನೆಗೆ ಪೈಂಟ್ ಕೊಡುವ ಪುತ್ತುಮೋನು
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಬದುಕಿನಲ್ಲೂ ಸತ್ತಮೇಲೂ
ಮೋಕ್ಷ ಸಿಗುವ ದಕ್ಷಿಣ ಕಾಶಿ
ಹರಿಯುವ ನೇತ್ರಾವತಿ
ಸಂಗಮವಾಗುವ ಕುಮಾರಧಾರ
ಚಂದದ ತೌಹೀದಿನ ಮಾಲಿಕುದ್ದೀನಾರ್
ಎತ್ತರದಲ್ಲಿರುವ ಸುಂದರ ಇಗರ್ಜಿ
ಶಾಂತಿ ಕದಡಲು ಬಂದವರಿಗೆ
ಬುದ್ಧಿವಾದ ಹೇಳಿದ ಮೇಧಾವಿ ಸಜ್ಜನರು
ಇಷ್ಟೇ ನನ್ನೂರ ಸೌಹಾರ್ದ
ಹೆಚ್ಚೇನೂ ಇಲ್ಲ…

ಜಲೀಲ್ ಮುಕ್ರಿ

To Top
error: Content is protected !!
WhatsApp chat Join our WhatsApp group