ನಿಮ್ಮ ಬರಹ

‘ಹಜ್ ಸಬ್ಸಿಡಿ’ ಎಂಬ ಗುಮ್ಮ..! ಯಾರ ಒಡಲು ಸೇರುತ್ತಿದೆ ಹಾಜಿಗಳಿಂದ ದೋಚುವ ಸಾವಿರಾರು ಕೋಟಿ ?!!

ವರದಿಗಾರ (ಜ 18 ) :  ಮಂಗಳೂರು ಹಜ್ ಕ್ಯಾಂಪಿನಲ್ಲಿ ಕೆಲಸ ಮಾಡಿ 10 ವರ್ಷದ ಅನುಭವ ಪಡೆದವನಾದುದರಿಂದ “ಹಜ್ ಸಬ್ಸಿಡಿ” ಬಗ್ಗೆ ಸಹಜವಾಗಿಯೇ ಕೆಲವೊಂದು ಸಂಶಯ ಮೂಡಿದೆ. ಅದನ್ನು ಇಲ್ಲಿ ಬಿತ್ತರಿಸಿದ್ದೇನೆ. ಸಾಧ್ಯವಿದ್ದವರು ಅಥವಾ ಸಂಬಂಧಪಟ್ಟವರು ಉತ್ತರಿಸುವ ಸವಾಲನ್ನೂ ಹಾಕುತ್ತೇನೆ.

ಕಳೆದ 2017 ನೇ ಸಾಲಿನಲ್ಲಿ ಸೌದಿ ಅರೇಬಿಯಾ ಸರಕಾರ ಭಾರತದ 1,70,025 ಮುಸ್ಲಿಮರಿಗೆ ಪವಿತ್ರ ಹಜ್ ಗೆ ತೆರಳಲು ವೀಸಾ ನೀಡಿದೆ. ಅದರಲ್ಲಿ 1,25,025 ಸದಸ್ಯರು ಸರಕಾರದ ಹಜ್ ಸಮಿತಿ ಮೂಲಕ ಹಜ್ ಗೆ ಪ್ರಯಾಣ ಬೆಳೆಸಿದ್ದಾರೆ. ಉಳಿದ 45,000 ಮಂದಿ ಖಾಸಗಿ ಸಂಸ್ಥೆ ಮೂಲಕ ಹೋಗುತ್ತಾರೆ. ಖಾಸಗಿ ಸಂಸ್ಥೆ ಆ ಸೀಟಿಗಾಗಿ ಸರಕಾರಕ್ಕೆ ಇಂತಿಷ್ಟು ಹಣ ಸಂದಾಯ ಮಾಡುತ್ತದೆ ಹಾಗೂ ಅಲ್ಲಿ ದೊಡ್ಡ ಲಾಬಿಯೂ ನಡೆಯುತ್ತದೆ. ಕಳೆದ ವರ್ಷದ ಕೇಂದ್ರ ಸರಕಾರದ ಬಜೆಟ್ ನಲ್ಲಿ 450 ಕೋಟಿ ರೂ. ಗಳನ್ನು ಹಜ್ ಸಬ್ಸಿಡಿಗೆ ವಿನಿಯೋಗಿಸಲಾಗಿದೆ ಎಂದು ಘೋಷಿಸಲಾಗಿದೆ. ಅಂದರೆ 450,00,00,000/- ಸಬ್ಸಿಡಿ ÷ 1,25,025 ಸದಸ್ಯರು = 35,992/- ರೂ. ಅಂದರೆ ಸರಕಾರದ ಪ್ರಕಾರ ಒಬ್ಬ ಹಜ್ಜಾಜ್ ಗೆ 35,992/- ರೂ. ಸಬ್ಸಿಡಿ ಸರಕಾರ ಕೊಟ್ಟಂತಾಯಿತು. ಇನ್ನು ವಿಷಯಕ್ಕೆ ಬರೋಣ.

ಕಳೆದ 2017 ರ ಹಜ್ ಗೆ ಕೇಂದ್ರ ಸರಕಾರ ಮಂಗಳೂರಿನಿಂದ ತೆರಳುವ ಒಬ್ಬ ಸದಸ್ಯನಿಂದ ಪಡೆದ ಮೊತ್ತ 2,39,150/- ರೂ. (ಪ್ರಥಮ ಅಥವಾ ಗ್ರೀನ್ ಕೆಟಗರಿ). ರೂ. 2,05,750/- (ದ್ವಿತೀಯ ಅಥವಾ ಅಝೀಝಿಯಾ ಕೆಟಗರಿ). ಇದರಲ್ಲಿ 2,100/- ಸೌದಿ ರಿಯಾಲ್ ಅಂದರೆ ಸರಕಾರ ಸರಿಸುಮಾರು 37,000/- ರೂ. ವನ್ನು ಹಜ್ ಗೆ ತೆರಳುವ ಸಂದರ್ಭ ಪ್ರತಿಯೊಬ್ಬರಿಗೆ ಹಿಂದಕ್ಕೆ ನೀಡುತ್ತದೆ. ಅಂದರೆ ಪ್ರತಿ ಹಜ್ಜಾಜ್ ಗೆ ಅಸಲು ಪ್ರಥಮಕ್ಕೆ 2,02,150/- ರೂ. ಹಾಗೂ ದ್ವಿತೀಯಕ್ಕೆ 1,68,750/- ರೂ. ಆಗುವುದು. ಇವಿಷ್ಟು ಸರಕಾರಕ್ಕೆ ಪ್ರತಿಯೋರ್ವ ಪ್ರವಾಸಿಗ ನೀಡುವ ಮೊತ್ತ. ಈ ಹಣದಲ್ಲಿ 81,000/- ವನ್ನು 7 ತಿಂಗಳು ಮುಂಚಿತವಾಗಿ ಹಾಗೂ ಉಳಿದ ಮೊತ್ತವನ್ನು 4 ತಿಂಗಳು ಮುಂಗಡವಾಗಿ ಸರಕಾರ ಪಡೆಯುತ್ತದೆ. ಅಂದರೆ ಕಳೆದ ವರ್ಷ ರೂ. 2,780 ಕೋಟಿಯನ್ನು ಹಾಜಿಗಳು ಸರಕಾರದ ಬೊಕ್ಕಸಕ್ಕೆ ಹಲವು ತಿಂಗಳ ಮುಂಚಿತವಾಗಿಯೇ ನೀಡಿ ತಮ್ಮ ಸೀಟು ಕಾಯ್ದಿರಿಸಿಕೊಂಡಿದ್ದಾರೆ. ಆ ಹಣದ ಲಾಭಾಂಶ, ಬ್ಯಾಂಕ್ ಬಡ್ಡಿ ಅಥವಾ ವ್ಯವಹಾರ ಇವುಗಳನ್ನೆಲ್ಲಾ ಬದಿಗಿಡೋಣ. ಅದರ ಲೆಕ್ಕವೂ ಬೇಡ. ಮುಂದಕ್ಕೆ ನಾವೇ ಒಂದು ನ್ಯಾಯಯುತ ಲೆಕ್ಕಾಚಾರ ಮಾಡುವ.

4 ತಿಂಗಳು ಮುಂಚಿತವಾಗಿಯೇ ಮಂಗಳೂರಿನಿಂದ ಜಿದ್ದಾಕ್ಕೆ ಹಾಗೂ ಮದೀನಾದಿಂದ ಮಂಗಳೂರಿಗೆ ನಾವಾಗಿಯೇ ವಿಮಾನದ ಅಪ್ ಎಂಡ್ ಡೌನ್ ಟಿಕೆಟ್ ಕಾಯ್ದಿರಿಸಿದರೆ ಅಬ್ಬಬ್ಬಾ ಅಂದ್ರೆ ರೂ. 25,000/- ಆಗಬಹುದು. (IRCTC ಪರಿಶೀಲಿತ ಮೊತ್ತವಿದು). ಇನ್ನು ಅಲ್ಲಿನ ಊಟೋಪಚಾರ, ಟ್ಯಾಕ್ಸಿ, ಬಸ್ ಇನ್ನಿತರ ಖರ್ಚನ್ನು ಸರಕಾರ ನೋಡುವುದಿಲ್ಲ. ಸ್ವತಃ ಪ್ರಯಾಣಿಕರೇ ಭರಿಸಬೇಕು. ಹಜ್ ಗೆ ತೆರಳುವವರು ತಮಗೆ ಸರಕಾರ ನೀಡುವ 2,100/- ರಿಯಾಲನ್ನು ಹೊರತುಪಡಿಸಿ ಸರಕಾರಕ್ಕೆ ಪ್ರಥಮ ರೂ. 2,02,150/- ಹಾಗೂ ದ್ವಿತೀಯ ರೂ. 1,68,750/- ನ್ನು ಪಾವತಿ ಮಾಡಿ ಆಗಿರುತ್ತದೆ. ಈಗ ನ್ಯಾಯಯುತ ಹಾಗೂ ಮಾರುಕಟ್ಟೆಯ ಲೆಕ್ಕಾಚಾರ ನೋಡೋಣ ಬನ್ನಿ.

ವಿಮಾನ ಪ್ರಯಾಣ 25,000/-, ಮಕ್ಕಾ ಹೋಟೆಲ್ ಕೋಣೆ (25 ದಿವಸ) 50,000/-, ಮದೀನಾ ಹೋಟೆಲ್ ಕೋಣೆ (15 ದಿವಸ) ರೂ. 20,000/-, ಇತರ ಖರ್ಚು (ವೀಸಾ, ಮೆಡಿಕಲ್, ಪೋಸ್ಟೇಜ್, ಕ್ಯಾಂಪ್, ಚುಚ್ಚುಮದ್ದು, ಸಿಬ್ಬಂದಿ ಇತ್ಯಾದಿ) ರೂ. 25,000/- ಅಂದರೆ ಒಟ್ಟು 1,20,000/- ರೂ. ಇದು ಪ್ರಥಮ (ಗ್ರೀನ್ ಕೆಟಗರಿ). ಆದರೆ ದ್ವಿತೀಯಕ್ಕೆ (ಅಝೀಝಿಯಾ ಕೆಟಗರಿ) ಮಕ್ಕಾದಲ್ಲಿ ತಂಗುವ ಹೋಟೆಲ್ ಕೋಣೆ ದೂರ ಇರುವುದರಿಂದ ಒಟ್ಟು ರೂ. 95,000/- ಆಗಬಹುದು.

ಹಾಗಾದರೆ ಹಾಜಿಗಳಿಂದ ಪಡೆದ 2,02,150/- ರಿಂದ 1,20,000/- ಕಳೆದರೆ ರೂ. 82,150/- ಉಳಿಕೆಯಾಗಬೇಕು. ಅಂದರೆ ಸರಕಾರ ಲೆಕ್ಕಕ್ಕಿಂತ ಹೆಚ್ಚು ಪಡೆದಿದೆ ಎಂದು ಅರ್ಥ. ದ್ವಿತೀಯ ಕೆಟಗರಿಯಲ್ಲೂ ರೂ. 73,750/- ಸರಕಾರ ಹೆಚ್ಚುವರಿ ಪಡೆದಿದೆ ಎಂಬುದು ಮನವರಿಕೆಯಾಗುತ್ತದೆ. ಇದು ಕೇವಲ ಒಂದು ವರ್ಷದ ವಿಚಾರ. ಪ್ರತಿವರ್ಷ ಕೂಡಾ ಹಜ್ ಪ್ರಯಾಣಿಕರಿಂದ ಇಂತಹುದೇ ಸುಲಿಗೆ ನಡೆಯುತ್ತಿದೆ. ಇನ್ನು ಇದರಲ್ಲಿ ಸರಕಾರದ ಸಬ್ಸಿಡಿ ಹಣ ರೂ. 35,992/- ಕಳೆದರೂ ಅದು ಹಾಜಿಗಳಿಗೆ ಈ ವರ್ಷ ಬಿಡಿ, ಕಳೆದ ವರ್ಷವೇ 2017 ರಲ್ಲಿ ಹಜ್ ಸಬ್ಸಿಡಿ ಬೇಡ ಅಂದರೂ ರೂ. 46,158/- (ದ್ವಿತೀಯ ರೂ. 37,758/-) ನ್ನು ಕೇಂದ್ರ ಸರಕಾರ ಹೆಚ್ಚುವರಿಯಾಗಿ ಪಡೆದು ಹಜ್ ಗೆ ತೆರಳುವ ಜನ ಸಾಮಾನ್ಯರಿಗೆ ಮೋಸ ಮಾಡಿದೆ. ಈ ಮೊತ್ತ ಎಲ್ಲಿದೆ? ಹಾಗೂ ಯಾರು ತಿಂದಿದ್ದಾರೆ? ಎಂಬುವುದು ನಿಗೂಢ.

ಹಾಗಾದರೆ ಜನರ ಕಿಸೆಯಿಂದ ಹೆಚ್ಚುವರಿಯಾಗಿ ಹಾಕಿರುವ  46,158/- (ದ್ವಿತೀಯ 37,758/-) ಸರಾಸರಿ ರೂ. 40,000/- ಎಂದು ಹಿಡಿಯೋಣ. + ಹಜ್ ಸಬ್ಸಿಡಿ 35,992/- = 75,992/- × ಕಳೆದ ವರ್ಷ ಸರಕಾರದ ಮೂಲಕ ತೆರಳಿರುವ ಪ್ರಯಾಣಿಕರು 1,25,025 = ರೂ. 950,08,99,800/-. ಹಾಗಾದರೆ ಒಂದೇ ವರ್ಷದಲ್ಲಿ ಹಜ್ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿ ನುಂಗಿ ನೀರು ಕುಡಿದ ರೂ. 950 ಕೋಟಿ (ಒಂಬೈನೂರ ಐವತ್ತು ಕೋಟಿ) ಯಾರ ಒಡಲನ್ನು ತುಂಬಿದೆ? ಅಲ್ಲದೇ ಮುಂಚಿತವಾಗಿ ಹಜ್ ಗೆ ಅರ್ಜಿ ಹಾಕುವಾಗ ತಲಾ ರೂ. 300/- ರಂತೆ ಪಡೆಯಲಾಗುತ್ತದೆ. ಭಾರತದಲ್ಲಿ ಸುಮಾರು 5 ಲಕ್ಷ ಆಕಾಂಕ್ಷಿಗಳು ಅರ್ಜಿ ಹಾಕುತ್ತಾರೆ. ಅದರಲ್ಲಿ 1,24,525 ಯಾತ್ರಾರ್ಥಿಗಳು ಕುರ್ರಾ (ಡ್ರಾ) ಮೂಲಕ ತೇರ್ಗಡೆಯಾಗುತ್ತಾರೆ. 500 ಮಂದಿ ಸರಕಾರಿ ಕೋಟಾದಲ್ಲಿ ಆಯ್ಕೆಯಾಗುತ್ತಾರೆ. ಹಾಗಾದರೆ ತಲಾ ರೂ. 300 ರಂತೆ ಆ 5 ಲಕ್ಷ ಮಂದಿ ಅರ್ಜಿ ಹಾಕಿದ ರೂ. 15 ಕೋಟಿ ಏನಾಗುತ್ತದೆ?. ರೂ. 2,100 ಕೋಟಿ ಸಾಲದಲ್ಲಿದೆ ಎಂದು ಅನುಕಂಪದ ಅಲೆಯಲ್ಲಿ ಮುಳುಗಿರುವ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ಸಂಸ್ಥೆಯೇ? ಅಥವಾ ಸಬ್ಸಿಡಿ… ಸಬ್ಸಿಡಿ… ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳೇ? ಒಂದು ವರ್ಷದಲ್ಲಿ ಕೇವಲ ಹಜ್ ಹೆಸರಲ್ಲಿ ಸಾವಿರ ಕೋಟಿ ಹೊಡೆದಿದ್ದರೆ ಕಳೆದ ಹಲವಾರು ವರ್ಷಗಳಿಂದ ತಿಂದು ತೇಗಿದ ಹಣವೆಷ್ಟು? ಸಬ್ಸಿಡಿ ಬಿಡಿ. ಪ್ರತಿ ಹಜ್ ಯಾತ್ರಾರ್ಥಿಯ ಜೇಬಿಗೆ ಹಾಕಿದ ಕತ್ತರಿಯ ಲೆಕ್ಕ ಕೊಡಿ. ಹಜ್ ಸಬ್ಸಿಡಿ ಬಗ್ಗೆ ಉದ್ದುದ್ದ ಮಾತನಾಡುವರೇ… ಎಲ್ಲಿದ್ದೀರಾ? ಇದಕ್ಕೆ ಉತ್ತರಿಸಿ.

To Top
error: Content is protected !!
WhatsApp chat Join our WhatsApp group