ರಾಜ್ಯ ಸುದ್ದಿ

ಶವಗಳ ಮೇಲೆ ರಾಜಕೀಯ ಮಾಡುತ್ತಾ ಕೋಮುವಾದ ಹರಡುತ್ತಿರುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್ ರೈ

ವರದಿಗಾರ (ಜ.14): ‘ದೇಶದಲ್ಲಿ ಶವಗಳ ಮೇಲೆ ರಾಜಕೀಯ ಮಾಡುತ್ತಾ ಕೋಮುವಾದ ಹರಡುತ್ತಿರುವವರು ನಿಜವಾದ ಹಿಂದೂಗಳಲ್ಲ. ಅವರ ಬಣ್ಣವೂ ಕೇಸರಿಯಲ್ಲ. ಶೀಘ್ರದಲ್ಲಿ ಎಲ್ಲವೂ ಬಯಲಾಗಲಿದೆ’ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ

ಅವರು ಶಿರಸಿಯ ರಾಘವೇಂದ್ರ ಮಠದಲ್ಲಿ ‘ಪ್ರೀತಿ ಪದಗಳ ಪಯಣ’ ಆಯೋಜನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮ’ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

‘ದೇಶಕ್ಕೆ ದೊಡ್ಡ ರೋಗ ಅಂಟಿಕೊಂಡಿದೆ. ಸಂವಿಧಾನದ ಮೇಲೆ ಗೌರವವಿರುವ ಪ್ರತಿಯೊಬ್ಬರೂ ಅದನ್ನು ತೊಲಗಿಸುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದ್ದಾರೆ.

‌ಜನರ ಮುಗ್ಧತೆ ಹಾಗೂ ಮೌಢ್ಯವನ್ನು ದುರ್ಬಳಕೆ ಮಾಡಿಕೊಳ್ಳುವ ರಾಜಕೀಯ ಪಕ್ಷಗಳು, ಚುನಾವಣೆ ಮುಗಿಯುವವರೆಗೂ ಸೌಹಾರ್ದವನ್ನು ನಾಶ ಮಾಡಲು ಪ್ರಯತ್ನಿಸುತ್ತಿರುತ್ತವೆ. ಅಂತಹ ಪಕ್ಷಗಳನ್ನು ಜನರು ತೀವ್ರವಾಗಿ ವಿರೋಧಿಸಬೇಕು ಎಂದು ಹೇಳಿದ್ದಾರೆ.

ನಮಗೆ ನೋವಷ್ಟೇ ಅಲ್ಲ ಸಿಟ್ಟು ಕೂಡ ಬರುತ್ತದೆ ಎಂಬುದನ್ನು ತೋರಿಸಿ ಕೊಡಬೇಕು. ಮೌನವೇ ನಮ್ಮನ್ನು ಕೊಲ್ಲುತ್ತಿದ್ದು, ಪ್ರತಿ ಬಾರಿಯೂ ಧೈರ್ಯವಾಗಿ ಮಾತನಾಡಬೇಕು. ವಿವೇಚನೆ, ಹಾಸ್ಯಪ್ರಜ್ಞೆಯಿಂದ ಅಣಕಿಸುತ್ತ, ಪ್ರಶ್ನಿಸುತ್ತ ಸಾಗಬೇಕು.

‘ಭೂಮಿಯ ಮೇಲೆ ಒಂದು ಸಮುದಾಯಕ್ಕೆ ಜೀವಿಸಲು ಅವಕಾಶವಿಲ್ಲದೆ ಅಳಿಸಿ ಹಾಕುವವರು ಹಿಂದೂಗಳೇ, ಪ್ರತಿಭಟನೆ ಮಾಡಿ ಟೈರ್‌ಗಳಿಗೆ ಬೆಂಕಿ ಹಚ್ಚುವಂತೆ ಹೇಳಿಕೊಡುವುದು ಹಿಂದುತ್ವವೇ’ ಎಂದು ಪ್ರಶ್ನಿಸಿದ್ದಾರೆ.

‘ಖಾವಿ ಕಂಡರೆ ವಿವೇಕಾನಂದರು ನೆನಪಾಗುತ್ತಾರೆ. ಆದರೆ, ಇಂದು ಖಾವಿ ರೂಪದಲ್ಲಿ ಕೆಲವರು ವಿಕಾರಾನಂದರಿದ್ದಾರೆ. ಇಂಥವರಿಂದಲೇ ಧರ್ಮದ ಹೆಸರಿನಲ್ಲಿ ರಾಜಕಾರಣ ವಿಜೃಂಭಿಸುತ್ತಿದೆ. ನಮ್ಮ ನೆಲದ ನಿಜವಾದ ಹಿಂದೂಗಳು ಕೋಮು ಸೌಹಾರ್ದತೆ ಹದಗೆಡಿಸುವ ಕಾರ್ಯವನ್ನು ಎಂದಿಗೂ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!