ರಾಷ್ಟ್ರೀಯ ಸುದ್ದಿ

“ಪ್ರಜಾಪ್ರಭುತ್ವ ಅಪಾಯದಲ್ಲಿದೆ” ! ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಿಂದ ಪತ್ರಿಕಾಗೋಷ್ಠಿ !!

ವರದಿಗಾರ (ಜ 12 ) :        ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಸುಪ್ರೀಮ್ ಕೋರ್ಟಿನ ಹಿರಿಯ ನಾಲ್ಕು ನ್ಯಾಯಾಧೀಶರಿಂದು ಪತ್ರಿಕಾಗೋಷ್ಠಿ ನಡೆಸಿದ್ದು, ‘ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ,  ಸುಪ್ರೀಮ್ ಕೋರ್ಟ್ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲವೆಂದು ಆಪಾದಿಸಿದ್ದಾರೆ. ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿದ್ದು ಒಂದು ಅತ್ಯಂತ ಅಪರೂಪದ ಘಟನೆ ಎನ್ನಲಾಗಿದ್ದು, ಸೊಹ್ರಾಬುದ್ದೀನ್ ಶೇಖ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟಿಸ್ ಲೋಯಾ ಅವರ ಸಂಶಯಾಸ್ಪದ ಸಾವಿನ ವಿಚಾರಣೆ ಕುರಿತಂತೆ ಸುಪ್ರೀಮ್ ಕೊರ್ಟಿನ ಮುಖ್ಯ ನ್ಯಾಯಾಧೀಶರು ಅನುಸರಿಸುತ್ತಿರುವ ಕೆಲವೊಂದು ನಡೆಗಳ ಕುರಿತು  ನಾಲ್ವರು ಹಿರಿಯ ನ್ಯಾಯಾಧೀಶರುಗಳಾದ ಜಸ್ಟಿಸ್ ಜೆ ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕುರ್ ಹಾಗೂ ಹಾಗೂ ಕುರಿಯನ್ ಜೋಸೆಫ್ ಅವರುಗಳು ತೀವ್ರ ಅಸಮಧಾನವನ್ನು ಹೊರಹಾಕಿದ್ದಾರೆನ್ನಲಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಅವರು ಪ್ರಮುಖ ಆರೋಪಿಯಾಗಿದ್ದ ಸೊಹ್ರಾಬುದ್ದೀನ್  ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆದು ತೀರ್ಪು ನೀಡುವ ಕೆಲವೇ ವಾರಗಳ ಮೊದಲು ಜಸ್ಟಿಸ್ ಲೋಯಾರವರು ನಿಗೂಢವಾಗಿ ಸಾವನ್ನಪ್ಪಿದ್ದರು. ಕಳೆದ ವರ್ಷ “ದಿ ಕಾರವನ್” ನಿಯತಕಾಲಿಕೆಗೆ ನೀಡಿದ್ದ ಸಂದರ್ಶನದಲ್ಲಿ ಲೋಯಾರವರ ಮಗ, ಸಹೋದರಿ ಹಾಗೂ ತಂದೆಯವರು ಲೋಯಾರವರ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದರು.

ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರು ಈ ಪ್ರಕರಣದ ಕುರಿತಂತೆ ದಾಖಲಾಗಿದ್ದ ದೂರೊಂದನ್ನು ವಿಚಾರಣೆ ನಡೆಸಲು ಜಸ್ಟಿಸ್ ಅರುಣ್ ಮಿಶ್ರಾರನ್ನು ನೇಮಕ ಮಾಡಿರುವುದೇ ಈ ನಾಲ್ವರ ಅಸಮಾಧಾನಕ್ಕೆ ಕಾರಣವೆಂದು ಮೂಲಗಳು ತಿಳಿಸಿದೆ.

ಅತ್ಯಂತ ಅಪರೂಪದ ಘಟನೆಯೊಂದರಲ್ಲಿ ಈ ನಾಲ್ವರು ಹಿರಿಯ ನ್ಯಾಯಾಧೀಶರುಗಳು ಪತ್ರಿಕಾಗೋಷ್ಠಿ ನಡೆಸಿ, ‘ಸುಪ್ರೀಮ್ ಕೋರ್ಟ್ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ. ಈ ಕುರಿತು ನಾವು ಮುಖ್ಯ ನ್ಯಾಯಾಧೀಶರನ್ನು ಎಚ್ಚರಿಸಲು ಹಲವು ಪ್ರಯತ್ನಗಳನ್ನು ನಡೆಸಲಾಯಿತಾದರೂ ಅದೆಲ್ಲವೂ ವಿಫಲಗೊಂಡಿದೆ. ಇಂದು ಬೆಳಗ್ಗೆ ಕೂಡಾ ಅವರನ್ನು ಭೇಟಿ ಮಾಡುವ ಪ್ರಯತ್ನವೂ ವಿಫಲಗೊಂಡಾಗ ನಾವು ಅನಿವಾರ್ಯವಾಗಿ ದೇಶದ ಜನತೆಯ ಮುಂದೆ ಬರಬೇಕಾಗಿ ಬಂತೆಂದು ಹೇಳಿದ್ದಾರೆ. ಮುಖ್ಯ ನ್ಯಾಯಾಧೀಸ ದೀಪಕ್ ಮಿಶ್ರಾರವರನ್ನು ದೋಷಾರೋಪಣೆಗೆ ಗುರಿಪಡಿಸಬೇಕೇ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು, “ಅದನ್ನು ದೇಶದ ಜನತೆ ನಿರ್ಧರಿಸಬೇಕಾಗಿದೆ” ಎಂದು ಹೇಳಿದ್ದಾರೆ.

ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನಂತರದ ಹಿರಿಯ ನ್ಯಾಯಮೂರ್ತಿಗಳಾದ ಜಸ್ಟಿಸ್ ಜೆ ಚೆಲಮೇಶ್ವರ್ ಮನೆಯಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ‘ದೇಶ ಹಾಗೂ ಅದರ ಉನ್ನತ ಅಂಗವನ್ನು ರಕ್ಷಿಸುವ ಜವಬ್ದಾರಿ ನಮ್ಮದಾಗಿದ್ದು, ಅದನ್ನು ಮುಖ್ಯ ನ್ಯಾಯಾಧೀಶರಿಗೆ ತಿಳಿಹೇಳುವ ಪ್ರಯತ್ನ ವಿಫಲಗೊಂಡಿದೆ’ ಎಂದು ಆಪಾದಿಸಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group