ಸಾಮಾಜಿಕ ತಾಣ

SFI ವಿದ್ಯಾರ್ಥಿನಿಯ ಫೋಟೋ ಕದ್ದು ವೈರಲ್ ಮಾಡಿ ‘ನೈತಿಕ ಗೂಂಡಾಯಿಸಂ’ ! ಮುಂದೆ ಸಿಕ್ಕರೆ ಕೊಂದು ಬಿಡಿ ; ಫೇಸ್ಬುಕ್ಕಿನಲ್ಲಿ ಬಹಿರಂಗ ಕೊಲೆ ಬೆದರಿಕೆ !!

ವರದಿಗಾರ (ಜ 9 ) :  ಮೂಡಿಗೆರೆಯ ಧನ್ಯಾ ಎಂಬ ವಿದ್ಯಾರ್ಥಿನಿ ಸಂಘಪರಿವಾರದ ಗೂಂಡಾಗಳ ‘ನೈತಿಕ ಪೊಲೀಸ್ ಗಿರಿ’ಗೆ ಗುರಿಯಾಗಿ ನೇಣು ಹಾಕಿಕೊಂಡು ಆತ್ಮಹತ್ಯೆಗೈದ ಘಟನೆ ಹಚ್ಚ ಹಸಿರಾಗಿರುವಾಗಲೇ ಮಂಗಳೂರಿನಲ್ಲಿ ಸಂಘಿಗಳ ಮತ್ತೊಂದು ನೈತಿಕ  ಗೂಂಡಾಯಿಸಂ ಬೆಳಕಿಗೆ ಬಂದಿದೆ. ಸಂಘಿ ಗೂಂಡಾಗಳು SFI ಕಾರ್ಯಕರ್ತೆಯೋರ್ವಳ ಫೋಟೋವನ್ನು ಕದ್ದು ಅದನ್ನು ಫೇಸ್ಬುಕ್ ಹಾಗೂ ವಾಟ್ಸಪ್ಪಿನಲ್ಲಿ ಹರಿಯಬಿಟ್ಟು, ‘ಆಕೆ ಹಂಝ ಎನ್ನುವ ಮುಸ್ಲಿಮ್ ಹುಡುಗನೊಂದಿಗೆ ತಿರುಗಾಡುತ್ತಿದ್ದಾಳೆ, ಆತನನ್ನು ಯಾರಾದರೂ ಸ್ವಲ್ಪ ‘ವಿಚಾರಿಸಿಕೊಳ್ಳಿ’ ಎಂದು ಪೋಸ್ಟ್ ಮಾಡಲಾಗಿದೆ. ಮಾತ್ರವಲ್ಲ ಇದಕ್ಕೆ ಕಮೆಂಟಿಸಿರುವ ಮತ್ತೋರ್ವ ‘ಆಕೆಯೇನಾದರೂ ಮುಂದೆ ಸಿಕ್ಕರೆ ಕೊಂದು ಬಿಡಿ’ ಎಂದು ಬಹಿರಂಗ ಕೊಲೆ ಬೆದರಿಕೆ ಹಾಕಿದ್ದಾನೆ.

ಮಂಗಳೂರಿನಲ್ಲಿ ಎಂ ಕಾಂ ವ್ಯಾಸಂಗ ಮಾಡುತ್ತಿರುವ ಮಾಧುರಿ ಬೋಳಾರ್ ಎನ್ನುವ ವಿದ್ಯಾರ್ಥಿನಿ ಕಳೆದ ವರ್ಷ ತನ್ನ ಸಹಾಪಟಿಗಳೊಡನೆ SFI ರಾಜ್ಯ ಸಮ್ಮೇಳನಕ್ಕೆಂದು ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಫೇಸ್ಬುಕ್ಕಿನಿಂದ ಕದ್ದು, ಅದನ್ನು ಈಗ ಸಾಮಾಜಿಕ ತಾಣಗಳಲ್ಲಿ, ಹಿಂದೂ ಜಾಗರಣ ವೇದಿಕೆಯ ಸ್ವಯಂಸೇವಕ ಎಂದು ಬರೆದುಕೊಂಡಿರುವ ಭಾರತೀಯ ರಿಕ್ಕಿ ರಿತೇಶ್ ಎನ್ನುವ ಖಾತೆಯಲ್ಲಿ ಪೋಸ್ಟ್ ಮಾಡಿ, ಹಂಝ ಎನ್ನುವ ವ್ಯಕ್ತಿ ಹಿಂದೂ ಹುಡುಗಿಯರೊಂದಿಗೆ ತಿರುಗಾಡುತ್ತಿದ್ದಾನೆ. ಅವನನ್ನು ಎಲ್ಲಾದರೂ ಕಂಡರೆ ತಕ್ಕ ಉತ್ತರ ನೀಡಬೇಕು ಎಂದು ಬರೆದು ಹಾಕಲಾಗಿದೆ.

ಅದಕ್ಕಿಂತಲೂ ಆಘಾತಕಾರಿಯೆಂದರೆ ಆ ಪೋಸ್ಟಿಗೆ ಪ್ರವೀಣ್ ಪೂಜಾರಿ ಕರಾವಳಿ ಹಿಂದೂ ಎನ್ನುವ ವ್ಯಕ್ತಿಯೋರ್ವ, ‘ ಇನ್ನು ಮುಂದೆ ಸಿಕ್ಕರೆ ಅವರನ್ನು ಕೊಂದು ಹಾಕಿ’ ಎಂದು ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದಾನೆ.

ಮೂಡಿಗೆರೆಯ ಧನ್ಯಾ ಆತ್ಮಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮಾಧುರಿಯವರು ಮಂಗಳೂರು ಪೊಲೀಸ್ ಕಮಿಷನರ್ ಗೆ ಈ ಕುರಿತು ದೂರು ನೀಡಿದ್ದಾರೆ. ಜಿಲ್ಲೆಯ ಪೊಲೀಸರು ಕೂಡಾ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿರುವ ಈ ಮಟ್ಟದ ನೈತಿಕ ಗೂಂಡಾಗಿರಿಯನ್ನು ಗಂಭೀರವಾಗಿ ಪರಿಗಣಿಸಿ ಇಂತಹಾ ಸಮಾಜದ್ರೋಹಿಗಳ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕಾದುದು ಆದ್ಯ ಕರ್ತವ್ಯವಾಗಿದೆ.

 

To Top
error: Content is protected !!
WhatsApp chat Join our WhatsApp group