ರಾಜ್ಯ ಸುದ್ದಿ

ದೀಪಕ್ ರಾವ್ ಕೊಲೆಗೆ ಪ್ರತೀಕಾರ: ಬಂಧಿತರು ಬಜರಂಗದಳ ಕಾರ್ಯಕರ್ತರು

ವರದಿಗಾರ (ಜ.6): ದಕ್ಷಿಣ ಕನ್ನಡ ಜಿಲ್ಲೆಯ ಕೊಟ್ಟಾರ ಚೌಕಿಯಲ್ಲಿ ಜನವರಿ 03ರಂದು ರಾತ್ರಿ ಅಹಮ್ಮದ್ ಬಶೀರ್‌ ಎಂಬವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಪ್ರಯತ್ನಿಸಿದವರು ಬಜರಂಗದಳ ಸಂಘಟನೆಯ ಕಾರ್ಯಕರ್ತರೆಂದು ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳದಲ್ಲಿ ಜನವರಿ 03ರ ಮಧ್ಯಾಹ್ನ ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರವಾಗಿ ಈ ಕೃತ್ಯ ನಡೆದಿದೆ ಎಂದು ಅವರು  ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳನ್ನು ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು ಶನಿವಾರ ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌, ‘ಬಶೀರ್‌ ಕೊಲೆಯತ್ನ ಪ್ರಕರಣದ ಆರೋಪಿಗಳಾದ ಕಾಸರಗೋಡು ಜಿಲ್ಲೆ ಉಪ್ಪಳ ಸಮೀಪದ ಅಂಬಾರ್‌ನ ಕೃಷ್ಣನಗರ ನಿವಾಸಿ ಶ್ರೀಜಿತ್‌ ಪಿ.ಕೆ. ಅಲಿಯಾಸ್‌ ಶ್ರೀಜು (25), ಮಂಗಳೂರಿನ ಪಡೀಲ್‌ನ ಅಳಪೆ ಕಂಡೇವು ಮನೆ ನಿವಾಸಿಗಳಾದ ಕಿಶನ್‌ (21), ಧನುಷ್‌ ಪೂಜಾರಿ (22) ಮತ್ತು ಕಾಸರಗೋಡು ಜಿಲ್ಲೆ ಮಂಜೇಶ್ವರದ ಕುಂಜತ್ತೂರು ಜೋಗಿಗುಡ್ಡೆ ನಿವಾಸಿ ಸಂದೇಶ್ ಕೋಟ್ಯಾನ್‌ (22) ಎಂಬವರನ್ನು ಬಂಧಿಸಲಾಗಿದೆ’ ಎಂದರು.

‘ಧನುಷ್‌ ಮತ್ತು ಕಿಶನ್‌ ಅಣ್ಣ, ತಮ್ಮಂದಿರಾಗಿದ್ದು, ಈ ಇಬ್ಬರೂ ಕೊಟ್ಟಾರ ಚೌಕಿ ಸುತ್ತಮುತ್ತ ಹಿಂದೆ ಓಡಾಡಿದ್ದರು. ಬಶೀರ್‌ ಅವರ ಫಾಸ್ಟ್‌ಫುಡ್‌ ಗೂ ಹೋಗಿದ್ದರು. ಮುಸ್ಲಿಂ ಧರ್ಮಕ್ಕೆ ಸೇರಿದ ಯಾವುದಾದರೂ ವ್ಯಕ್ತಿಗಳನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಬುಧವಾರ ರಾತ್ರಿ ಬೈಕ್‌ನಲ್ಲಿ ಬಂದಿದ್ದರು. ಆಗ ಎದುರಿಗೆ ಸಿಕ್ಕ ಬಶೀರ್‌ ಕೊಲೆಗೆ ಯತ್ನಿಸಿದ್ದರು’ ಎಂದರು.

ಅದಲ್ಲದೆ ಶರತ್‌ ಮಡಿವಾಳ ಹತ್ಯೆಗೆ ಪ್ರತೀಕಾರವಾಗಿ ಕಿಶನ್‌ ಮತ್ತು ಧನುಷ್‌ 2017ರ ಜುಲೈ 7ರಂದು ಅಡ್ಯಾರ್‌ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ  ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರೂ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ಅವರು ಹೇಳಿದ್ದಾರೆ.

ಕಿಶನ್‌ ವಿರುದ್ಧ ಅತ್ಯಾಚಾರ, ಹಫ್ತಾ ವಸೂಲಿ, ಕೊಲೆಯತ್ನ ಆರೋಪದಡಿ ಮೂರು ಪ್ರಕರಣಗಳಿವೆ. ಧನುಷ್‌ ವಿರುದ್ಧ ಕೊಲೆ ಯತ್ನ, ದೊಂಬಿ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಒಂದು ಪ್ರಕರಣವಿದೆ. ಶ್ರೀಜಿತ್‌ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ ಆರು ಹಾಗೂ ನಗರದ ಉಳ್ಳಾಲ ಠಾಣೆಯಲ್ಲಿ ಒಂದು ಪ್ರಕರಣವಿದೆ. ಈತನ ವಿರುದ್ಧ ವೇಶ್ಯಾವಾಟಿಕೆಗಾಗಿ ಅಪ್ರಾಪ್ತ ಮಕ್ಕಳ ಬಳಕೆ, ಉದ್ದೇಶಪೂರ್ವಕವಲ್ಲದ ಕೊಲೆ, ದರೋಡೆ ಮತ್ತಿತರ ಆರೋಪಗಳಿವೆ. ಸಂದೇಶ್‌ ವಿರುದ್ಧ ಕಾಸರಗೋಡಿನ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ದೊಂಬಿ ನಡೆಸಿದ ಆರೋಪದಡಿ ಒಂದು ಪ್ರಕರಣವಿದೆ.

ಎಲ್ಲ ಆರೋಪಿಗಳೂ ರೌಡಿ ಪಟ್ಟಿಯಲ್ಲಿದ್ದಾರೆ. ಶ್ರೀಜಿತ್‌ ಮತ್ತು ಸಂದೇಶ್‌ಗೆ ಸಂಬಂಧಿಸಿದಂತೆ ಕೇರಳ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಿಶನ್‌ ಮತ್ತು ಧನುಷ್‌ ವಿರುದ್ಧ ಗೂಂಡಾ ಕಾಯ್ದೆ ಜಾರಿಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group