ರಾಷ್ಟ್ರೀಯ ಸುದ್ದಿ

ಕೋರೆಗಾಂವ್ ಗಲಭೆಗೆ ಮೊದಲೇ ನಡೆದಿತ್ತೇ ಪೂರ್ವ ತಯಾರಿ ? ಬೆಚ್ಚಿ ಬೀಳಿಸುತ್ತಿದೆ ಪಂಚಾಯತ್ ನಿರ್ಣಯ !!

ವರದಿಗಾರ (ಜ 5 ) :  “ಭೀಮಾ ಕೋರೆಗಾಂವ್” ಯುದ್ಧದ 200ನೇ ವಿಜಯೋತ್ಸವ ಆಚರಿಸುತ್ತಿದ್ದವರ ಮೇಲೆರಗಿ ಕಲ್ಲುಗಳನ್ನು ತೂರಿ, ಮೆರವಣಿಗೆಕಾರರ ಕಾರುಗಳಿಗೆ ಬೆಂಕಿ ಹಚ್ಚಿ, ಪುಣೆಯನ್ನು ಅಕ್ಷರಶಃ ನರಕವನ್ನಾಗಿಸಿದ ಘಟನೆಗಳ ಹಿನ್ನೆಲೆಯನ್ನು ಪರಿಶೀಲಿಸಿದಾಗ ಅಚ್ಚರಿಯ ಸಂಗತಿಗಳು ಬೆಳಕಿಗೆ ಬರುತ್ತಿದೆ. 2018ರ ಜನವರಿ ಒಂದರಂದು ಈ ಘಟನೆ ನಡೆದಿದೆಯಾದರೂ, ಡಿಸಂಬರ್ 30ರಂದು ಘಟನೆಯ ಮೂಲಸ್ಥಾನವಾದ ಕೋರೆಗಾಂವ್ ಪಂಚಾಯತ್ ತೆಗೆದುಕೊಂಡ ತೀರ್ಮಾನ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಮಾತ್ರವಲ್ಲ ಗಲಭೆ ಫೂರ್ವಯೋಜಿತವಾಗಿತ್ತೇ ಅನ್ನುವ ಕುರಿತು ಸಂಶಯ ಮೂಡಿಸಿದೆ.

ಗಣೇಶ್ ಬಾಜೂ ಸಾಹೇಬ್ ಫಡ್ತರೆ ಎನ್ನುವ ವ್ಯಕ್ತಿಯೊಬ್ಬರು ಸೂಚಿಸಿದ ಹಾಗೂ ಯೋಗೇಶ್ ನರಹರೆ ಎನ್ನುವ ವ್ಯಕ್ತಿ ಅನುಮೋದಿಸಿ ಸಹಿ ಹಾಕಿದ ‘ಗ್ರಾಮ ಪಂಚಾಯತ್ ಕೋರೆಗಾಂವ್ ಭೀಮಾ’ ಎಂಬ ತಲೆಬರಹದ ಲೆಟರ್ ಹೆಡ್ಡಿನಲ್ಲಿ ಪತ್ರವೊಂದು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಖುದ್ದು ಕೋರೆಗಾಂವ್ ಪಂಚಾಯತ್, ಶಿಕ್ರಾಪುರ ಪೊಲೀಸ್ ಠಾಣೆಗೆ ಸಲ್ಲಿಸಿರುವ ಪಂಚಾಯತ್ ನಿರ್ಣಯದಲ್ಲಿ, ಜನವರಿ 1 ರಂದು ಗ್ರಾಮಸ್ಥರು ಕೋರೆಗಾಂವ್ ಭೀಮಾ ಬಂದ್ ಆಚರಿಸುವುದಾಗಿ ಹೇಳಿಕೊಂಡಿದೆ.

ಇದೊಂದು ವ್ಯವಸ್ಥಿತ ಷಡ್ಯಂತ್ರದಂತೆ ಕಂಡು ಬರುತ್ತಿದ್ದು, ದಲಿತರ ವಿಜಯೋತ್ಸವವನ್ನು ತಡೆಯಲು ಬೇಕಾಗಿಯೇ ಗ್ರಾಮ ಪಂಚಾಯತ್ ಈ ನಿರ್ಣಯ ಕೈಗೊಂಡಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.  ಮಾತ್ರವಲ್ಲ ಕೋರೆಗಾಂವ್ ಬಂದ್ ಆಚರಿಸಿ, ಅಲ್ಲೇನಾದರೂ ಅಹಿತಕರ ನಡೆದಾಗ ಪೊಲೀಸರಿಗೂ ಸೂಕ್ತ ಭದ್ರತಾ ಕಾರ್ಯಗಳನ್ನು ಮಾಡಲು ಆಗದಂತೆ ತಡೆಯುವ ಉದ್ದೆಶವೂ ಇದರ ಹಿನ್ನೆಲೆಯಲ್ಲಿತ್ತೆಂದು ಅವರು ತಿಳಿಸುತ್ತಾರೆ. ಇದರಲ್ಲಿ ದುಷ್ಟ ಶಕ್ತಿಗಳು ಭಾಗಶಃ ಯಶಸ್ವಿಯಾಗಿದ್ದಾರೆಂದೂ ಕಾರ್ಯಕ್ರಮದಲ್ಲಿ ಹಾಜರಿದ್ದ ಭೀಮ ಅನುಯಾಯಿಗಳು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಾಂಭಾಜಿ ಮಹಾರಾಜರ ಸಮಾಧಿ ಸ್ಥಳದಲ್ಲಿ ನಡೆದಂತಹಾ ಘಟನೆಗೆ ಸಂಬಂಧಿಸಿ, ನಂತರ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ನೆಲೆಯಲ್ಲಿ ಕೋರೆಗಾಂವ್ ಭೀಮಾ ಬಂದ್ ಆಚರಿಸಲು ಕಾರಣ ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಾಸ್ತವದಲ್ಲಿ ಪೇಶ್ವೆಯ ಕ್ರೂರ ಸೈನಿಕರಿಂದ ಭಯಾನಕವಾಗಿ ಹತ್ಯೆಗೀಡಾದ ಸಾಂಭಾಜಿ ಮಹಾರಾಜರ ಸಮಾಧಿಯನ್ನು ನಿರ್ಮಿಸಲು ಕಾರಣೀಭೂತರಾದಂತಹಾ ಸಿದ್ಧನಾಯಕ್ ಗಾಯಕ್ ವಾಡ್ ಎನ್ನುವಂತಹಾ ಆಸ್ಥಾನದ ಕುಸ್ತಿಪಟುವಿನ ಸಮಾಧಿಯನ್ನು ಡಿಸಂಬರ್ 27ರಂದು ದಲಿತ ವಿರೋಧಿ ದುಷ್ಕರ್ಮಿಗಳು ಹಾಳುಗೆಡವಿದ್ದಾರೆ. ಒಟ್ಟಿನಲ್ಲಿ ಘಟನಾವಳಿಗಳನ್ನು ಗಮನಿಸಿದರೆ ಗಲಭೆ ನಡೆಯಲೇಬೇಕೆಂದು ನಿರ್ಧರಿಸಿ ಈ ಎಲ್ಲಾ ಷಡಂತ್ರಗಳನ್ನು ಹೆಣೆಯಲಾಗಿದೆ ಎಂದು ಅಲ್ಲಿನ ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ಕೋರೆಗಾಂವ್ ಹಿಂಸಾಚಾರದ ಭೀಕರತೆಯನ್ನು ಸಾರುವ ಚಿತ್ರಗಳು

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group