ಗುಟ್ಟು

ಹಜ್ ಯಾತ್ರೆ : ಬದಲಾದ ಸೌದಿ ಕಾನೂನನ್ನು ತನ್ನ ಸಾಧನೆಯೆಂಬಂತೆ ಬಿಂಬಿಸಲು ನೋಡಿ ಕೈ ಸುಟ್ಟುಕೊಂಡರೇ ಮೋದಿ?!!

ಹಜ್ ಯಾತ್ರೆಯಲ್ಲೂ ಮೋದಿ ರಾಜಕೀಯ ಬಯಲು : ವಾಸ್ತವಗಳತ್ತ ಒಂದು ನೋಟ

ಸೌದಿ ಅರೇಬಿಯಾವು ಇತ್ತೀಚೆಗೆ ಹಜ್ ನೀತಿಯಲ್ಲಿ ಬದಲಾವಣೆಯನ್ನು ತಂದಿತ್ತು. ಹೊಸ ಕಾನೂನಿನ ಪ್ರಕಾರ 45 ವರ್ಷಕ್ಕಿಂತ ಹೆಚ್ಚು ಪ್ರಾಯದ ಮಹಿಳಾ ಹಜ್ ಯಾತ್ರಿಕರಿಗೆ ಪುರುಷ ಸಹ ಯಾತ್ರಿಕರ ಅವಶ್ಯಕತೆಯಿಲ್ಲ. ಈ ಮೊದಲು ಮಹಿಳೆಯರು ಹಜ್ ಹೋಗಬೇಕಾದಲ್ಲಿ ‘ಮೆಹ್ರಮ್’ ಅಥವಾ ಪುರುಷ ಸಂಬಂಧಿಕರ ಜೊತೆ ಹೋಗಬೇಕಾಗಿತ್ತು. ಈ ಬಗ್ಗೆ ತನ್ನ ಭಾನುವಾರದ ‘ಮನ್ ಕೀ ಬಾತ್’ ನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ, ಇದು ತನ್ನ ಸರ್ಕಾರದ ಸಾಧನೆಯೆಂಬಂತೆ ಹೇಳಿದ್ದರು.

2018ರ ಹಜ್ ಯಾತ್ರೆಯಲ್ಲಿ 1300 ಭಾರತೀಯ ಮಹಿಳೆಯರು ‘ಮೆಹ್ರಮ್’ ಇಲ್ಲದೇ ಮಕ್ಕಾ ತೆರಳಲಿದ್ದಾರೆ ಎಂದು ಮೋದಿ ಹೇಳಿದ್ದರು.

ಈಗಾಗಲೇ ತ್ರಿವಳಿ ತಲಾಕ್ ವಿಷಯದಲ್ಲಿ ಹೊಸ ಕಾನೂನನ್ನು ತರಲು ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿಯನ್ನು ಮುಸ್ಲಿಂ ಮಹಿಳೆಯರ ಸಂರಕ್ಷಕನೆಂದು ಬಿಂಬಿಸುತ್ತಿರುವ ಮಾಧ್ಯಮಗಳೂ ಇದನ್ನು ಮೋದಿ ಸರಕಾರದ ಸಾಧನೆಯೆಂಬಂತೆ ಬಿತ್ತರಿಸಿದವು. ಆದರೆ ಬದಲಾವಣೆಯಾಗಿರುವುದು ಭಾರತೀಯ ಕಾನೂನಿನಲಲ್ಲ, ಸೌದಿ ಅರೇಬಿಯಾದ ಕಾನೂನಿನಲ್ಲಿ!

2012ರಲ್ಲಿ ಮೆಹ್ರಮ್ ಜೊತೆಯಿಲ್ಲದೇ ಹಜ್ ಯಾತ್ರೆಗೆ ಬಂದ 1000 ನೈಜೀರಿಯನ್ ಮಹಿಳೆಯರನ್ನು ಜಿದ್ದಾ ವಿಮಾನ ನಿಲ್ದಾಣದಿಂದಲೇ ವಾಪಾಸ್ ಹೋಗಲು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸೌದಿ ಸರಕಾರವು ಇತ್ತೀಚೆಗೆ ತನ್ನ ನೀತಿಯಲ್ಲಿ ಬದಲಾವಣೆ ತಂದಿತ್ತು. 45 ವರ್ಷಕ್ಕಿಂತ ಹೆಚ್ಚು ಪ್ರಾಯವಾಗಿರುವ ಮಹಿಳೆಯರು ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ, ‘ಮೆಹ್ರಮ್’ ಜೊತೆಯಿರಬೇಕಾದ ಅವಶ್ಯಕತೆಯಿಲ್ಲ. ಆದರೆ, ಈ ಮಹಿಳೆಯರು ಗುಂಪಿನಲ್ಲಿ ಪ್ರಯಾಣಿಸಲು ತಮ್ಮ ತಂದೆ, ಸಹೋದರ ಅಥವಾ ಮಗನಿಂದ ಅನುಮತಿ ಪಡೆದ ಪತ್ರವನ್ನು ಹೊಂದಿರಬೇಕು.

ಈ ಸೌಲಭ್ಯವು ಸೌದಿ ಅರೇಬಿಯಾದ ಜೊತೆ ಒಪ್ಪಂದ ಮಾಡಿಕೊಂಡ ರಾಷ್ಟ್ರಗಳಿಗೆ ಮಾತ್ರ ಲಭ್ಯವಿದೆ. ಭಾರತ ಸರಕಾರವು 2018ರ ಹಜ್ ಯಾತ್ರಿಕರಿಗೆ ಈ ಸೌಲಭ್ಯವನ್ನು ಒದಗಿಸಲು ತೀರ್ಮಾನಿಸಿತ್ತು. ಅದರೆ, ತನ್ನ ‘ಮನ್ ಕೀ ಬಾತ್’ ನಲ್ಲಿ ಮೋದಿ, ಮಹಿಳಾ ಹಜ್ ಯಾತ್ರಿಕರು ‘ಮೆಹ್ರಮ್’ ಜೊತೆ ಪ್ರಯಾಣಿಸಬೇಕೆನ್ನುವುದು ಭಾರತದ ಕಾನೂನಾಗಿತ್ತೆಂದೂ ಅದರಲ್ಲಿ ತಾನು ಬದಲಾವಣೆ ಮಾಡಿದ್ದೇನೆಂದು ಅರ್ಥೈಸುವ ರೀತಿಯಲ್ಲಿ ಮಾತನಾಡಿದ್ದರು. ಸ್ವಾತಂತ್ರ್ಯದ 70 ವರ್ಷಗಳ ನಂತರವೂ ಭಾರತೀಯ ಮಹಿಳೆಯರ ಜೊತೆ ಭೇದ ಭಾವ ನಡೆಯುತ್ತಿತ್ತೆಂದೂ, ಯಾರೂ ಈ ಬಗ್ಗೆ ಚರ್ಚಿಸಿಲ್ಲ. ತನ್ನ ಸರಕಾರ ಈ ವಿಷಯಕ್ಕೆ ಗಮನ ನೀಡಿ ಪರಿಹಾರವನ್ನು ಕಂಡುಹಿಡಿಯಿತು ಎಂದು ಅವರು ಹೇಳಿದ್ದರು.

ವಿಪರ್ಯಾಸವೆಂದರೆ, 45 ವರ್ಷಕ್ಕಿಂತ ಹೆಚ್ಚು ಪ್ರಾಯವಿರುವ ಮಹಿಳೆಯರು ಮಾತ್ರ ‘ಮೆಹ್ರಮ್’ ಜೊತೆಯಿಲ್ಲದಿದ್ದರೂ ಗುಂಪಿನಲ್ಲಿ ಹಜ್ ಯಾತ್ರೆ ನಡೆಸಬಹುದು. ಆದರೆ, ಆ ಗುಂಪಿನ ಜೊತೆ ಪ್ರಯಾಣ ಮಾಡಲು ತನ್ನ ತಂದೆ, ಸಹೋದರ ಅಥವಾ ಮಗನ ಅನುಮತಿ ಪಡೆದಿರಬೇಕು. ಅದಲ್ಲದೆ, 45 ವರ್ಷಕ್ಕಿಂತ ಕಡಿಮೆ ಪ್ರಾಯವಿರುವ ಮಹಿಳೆಯರು ‘ಮೆಹ್ರಮ್’ ಜೊತೆಯಿಲ್ಲದೆ ಹಜ್ ಯಾತ್ರೆ ಹೋಗುವಂತಿಲ್ಲ. ಪ್ರಧಾನಿ ಮೋದಿಯನ್ನು ಮುಸ್ಲಿಂ ಮಹಿಳೆಯರ ಸಂರಕ್ಷಕನೆಂದು ಬಿಂಬಿಸುವ ಭರದಲ್ಲಿ ಭಾರತೀಯ ಮಾಧ್ಯಮಗಳು ವಿಷಯದ ಸತ್ಯಾಸತ್ಯತೆಯನ್ನು ಮರೆತವೋ ಅಥವಾ ಉದ್ದೇಶಪೂರ್ವಕವಾಗಿ ಭಾರತೀಯರಿಂದ ಈ ವಿಷಯವನ್ನು ಅಡಗಿಸುವ ಹುನ್ನಾರ ನಡೆಯಿತೇ?? ಈ ಪ್ರಶ್ನೆಯ ಉತ್ತರವು ನಮ್ಮ ಓದುಗರಿಗೆ ಕಷ್ಟಕರವಲ್ಲ ಎನ್ನುವುದು ನಮ್ಮ ವಿಶ್ವಾಸ!!

To Top
error: Content is protected !!
WhatsApp chat Join our WhatsApp group