ರಾಜ್ಯ ಸುದ್ದಿ

ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಅನಂತ್ ಕುಮಾರ್ ಹೆಗಡೆ, ಗೋ. ಮಧುಸೂದನ್  ಅವಿವೇಕಿಗಳು: ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್

ವರದಿಗಾರ (ಡಿ.30): ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಬಿಜೆಪಿ ರಾಜ್ಯ ನಾಯಕ ಗೋ. ಮಧುಸೂದನ್ ಮತಾಂಧರು, ಅವಿವೇಕಿಗಳು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.

ಇವರಿಬ್ಬರೂ ಸಂವಿಧಾನದ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಲು ನಮ್ಮಲ್ಲಿರುವ ಸಂವಿಧಾನವೇ ಕಾರಣ ಮತ್ತು ಸಂವಿಧಾನವೇ ಶ್ರೇಷ್ಠ ಗ್ರಂಥ ಎಂಬುದನ್ನು ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ. ಆದರೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ್ ಕುಮಾರ್ ಹೆಗಡೆಗೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳದಿರುವುದು ನಾಚಿಕೆಯ ಸಂಗತಿ.

ಸಚಿವ ಸ್ಥಾನದಲ್ಲಿದ್ದು ಜವಾಬ್ದಾರಿಯಿಂದ ವರ್ತಿಸಬೇಕಾದ ವ್ಯಕ್ತಿಗೆ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಇಲ್ಲವೇ? ಜಾತ್ಯತೀತತೆಯ ಅರ್ಥ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ ಶ್ರೀನಿವಾಸ್ ಪ್ರಸಾದ್, ಇವರ ಹೇಳಿಕೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟಿಸುವಂತಾಗಿದೆ ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ವರ್ತನೆಗೆ ಛೀಮಾರಿ ಹಾಕಿದ್ದಾರೆ.

‘ವಿಧಾನ ಪರಿಷತ್‌ ಸದಸ್ಯನಾಗಿದ್ದ ಗೋ.ಮಧುಸೂದನ್‌ಗೆ ಇನ್ನೂ ಬುದ್ದಿ ವಿಕಾಸವಾಗಿಲ್ಲ. ಸಂವಿಧಾನದ ಬಗ್ಗೆ ಅನಾವಶ್ಯಕವಾಗಿ ಮಾತನಾಡಿ, ಅದನ್ನು ಸಮರ್ಥಿಸಿಕೊಳ್ಳುವ ಆತನಿಗೆ ನಾಚಿಕೆಯಾಗಬೇಕು’ ಎಂದು ಗುಡುಗಿದರು.

ಇಬ್ಬರಿಗೂ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಿ, ತಪ್ಪು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group