ರಾಷ್ಟ್ರೀಯ ಸುದ್ದಿ

‘ಆರೆಸ್ಸೆಸ್ ಭಸ್ಮಗೊಳಿಸಿದ್ದ’ ಗ್ರಂಥಾಲಯ ದುಪ್ಪಟ್ಟು ಪುಸ್ತಕಗಳೊಂದಿಗೆ ಲೋಕಾರ್ಪಣೆ

2016ರ ಮಾರ್ಚ್ ನಲ್ಲಿ ಭಸ್ಮವಾದಾಗ 6000 ಪುಸ್ತಕಗಳನ್ನು ಹೊಂದಿದ್ದ ಎಕೆಜಿ ಗ್ರಂಥಾಲಯವು ಇಂದು 13000 ಪುಸ್ತಕಗಳೊಂದಿಗೆ ಮತ್ತೆ ತಲೆಯೆತ್ತಿದೆ

ಕೂಲಿ ಪಡೆಯದೆ ಮರುನಿರ್ಮಾಣದಲ್ಲಿ ಕೈಜೋಡಿಸಿದ ಸ್ಥಳೀಯ ಕಾರ್ಮಿಕರು!

ಗ್ರಂಥಾಲಯದ ಮೇಲೆ ಆರೆಸ್ಸೆಸ್ ಸಡೆಸಿದ ಆಕ್ರಮಣ, ಶಬ್ದ ಹಾಗೂ ಜ್ಞಾನದೊಂದಿಗೆ ಅವರ ಶತ್ರುತ್ವವನ್ನು ಎತ್ತಿ ತೋರಿಸುತ್ತಿದೆ: ಪಿಣರಾಯಿ ವಿಜಯನ್

ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರಿನ ತಲೂಕ್ಕರ ಎಂಬಲ್ಲಿ 6000ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಹೊಂದಿದ್ದ ಎಕೆಜಿ ಗ್ರಂಥಾಲಯವು 2016 ಮಾರ್ಚ್ ತಿಂಗಳಲ್ಲಿ ಬೆಂಕಿಗಾಹುತಿಯಾಗಿತ್ತು. 1980ರಲ್ಲಿ ನಿರ್ಮಿಸಲ್ಪಟ್ಟ, ಹಲವು ಮೌಲ್ಯಯುತ ಪುಸ್ತಕಗಳನ್ನು ಹೊಂದಿದ್ದ ಈ ಗ್ರಂಥಾಲಯವನ್ನು ಆರೆಸ್ಸೆಸ್ ಕಾರ್ಯಕರ್ತರು ಭಸ್ಮಗೊಳಿಸಿದ್ದರು ಎಂದು ಆರೋಪಿಸಲಾಗುತ್ತಿದೆ.

ಕೆಲವೇ ತಿಂಗಳಲ್ಲಿ ಸ್ಥಳೀಯ ಸಿಪಿಐ(ಎಂ) ಘಟಕದ ನೇತೃತ್ವದಲ್ಲಿ ಗ್ರಂಥಾಲಯದ ಮರುನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ನವೀನ ಕಟ್ಟಡವನ್ನು ನಿನ್ನೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು.

ಗ್ರಂಥಾಲಯದ ಮರುನಿರ್ಮಾಣಕ್ಕೆ ಸಹಾಯ ಬಂದದ್ದು ಕೇವಲ ಕೇರಳದಿಂದಲ್ಲ.. ದೇಶದಾದ್ಯಂತ ಹಲವು ವಿಶ್ವವಿದ್ಯಾಲಯಗಳಿಂದ ಹಾಗೂ ಸಾಹಿತಿಗಳಿಂದ ಸಹಾಯ ಒದಗಿತ್ತು.

60%ರಷ್ಟು ಪುಸ್ತಕಗಳನ್ನು ಗ್ರಂಥಾಲಯದ ಮರುನಿರ್ಮಾಣಕ್ಕಾಗಿ ಸೃಷ್ಟಿಸಲಾದ ಫೇಸ್ಬುಕ್ ಗುಂಪು ಸಂಗ್ರಹಿದ್ದರೆ, 20%ರಷ್ಟು ಪುಸ್ತಕಗಳು ದೇಶದ ವಿವಿಧ ಭಾಗಗಳಿಂದ ಕೊರಿಯರ್ ಮೂಲಕ ಕಳುಹಿಸಲಾಗಿತ್ತು. ಉಳಿದ ಪುಸ್ತಕಗಳು ಕೇರಳದ ವಿವಿಧ ಸಂಘಟನೆಗಳ ಕೊಡುಗೆಯಾಗಿದೆ.

ಸ್ಥಳೀಯ ನಿವಾಸಿಗಳು ಹಾಗೂ ಕೂಲಿ ಕಾರ್ಮಿಕರು ಯಾವುದೇ ಪ್ರತಿಫಲವನ್ನು ಪಡೆಯದೇ ಗ್ರಂಥಾಲಯದ ಮರುನಿರ್ಮಾಣಕ್ಕಾಗಿ ತಿಂಗಳುಗಟ್ಟಲೆ ಶ್ರಮದಾನ ಮಾಡಿದ್ದರು ಎಂದು ವಾಚನಾಲಯದ ಕಾರ್ಯದರ್ಶಿಯು ತಿಳಿಸಿದ್ದಾರೆ.

ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡುತ್ತಾ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮರುನಿರ್ಮಾಣಕ್ಕೆ ಸಹಕರಿಸಿದವರನ್ನು ಅಭಿನಂದಿಸಿದರು. “ನಮಗೆಲ್ಲರಿಗೂ ತಿಳಿದ ಹಾಗೆ ಆರೆಸ್ಸೆಸ್ ಈ ಗ್ರಂಥಾಲಯವನ್ನು ಆಕ್ರಮಿಸಿತ್ತು. ಇದು ಶಬ್ದ ಹಾಗೂ ಜ್ಞಾನದೊಂದಿಗೆ ಅವರ ಶತ್ರುತ್ವವನ್ನು ಎತ್ತಿ ತೋರಿಸುತ್ತದೆ” ಎಂದು ಅವರು ಹೇಳಿದರು.

To Top
error: Content is protected !!
WhatsApp chat Join our WhatsApp group