ಜಿಲ್ಲಾ ಸುದ್ದಿ

ಶೋಭಾ ಮತ್ತು ಅನಂತ್ ಕುಮಾರರ ಮೌನ, ದಲಿತರ ಬಗ್ಗೆ ಬಿಜೆಪಿಗಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತಿದೆ : ಅಕ್ರಂ ಹಸನ್

ವರದಿಗಾರ (21.12.2017) : ಬಿಜಾಪುರದ ವಿಜಯಪುರದಲ್ಲಿ ದಲಿತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿನಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವನ್ನು ಎಸಗಿ, ಕೊಲೆ ಮಾಡಿರುವ ಅತ್ಯಂತ ನೀಚ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI), ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಠಿಣ ಶಬ್ದಗಳಿಂದ ಖಂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ ಮುಂಬಾಗದಲ್ಲಿ ಹೀನ ಕೃತ್ಯದ ವಿರುದ್ಧ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ರವರು ಸಾವಿನ ಮನೆಯಲ್ಲಿ ನೀಚ ರಾಜಕೀಯ ಮಾಡುವ ಬಿಜೆಪಿಯ ಶೋಭ ಕರಂಧ್ಲಾಜೆ,ಅನಂತ ಕುಮಾರ್ ಹೆಗಡೆ ಮೌನವಾಗಿರುವುದು ದಲಿತರ ಮೇಲಿನ ಅವರ ಕಾಳಜಿ ಎತ್ತಿ ತೋರಿಸುತ್ತದೆ ಎಂದರು. ಅವರಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆಯಿಲ್ಲ. ರಾಜಕೀಯ ದುರುದ್ದೇಶಗಳನ್ನಿಟ್ಟುಕೊಂಡು ‘ಶವ ರಾಜಕೀಯ’ ನಡೆಸುತ್ತಿದ್ದಾರೆ. ದಲಿತ ಬಾಲಕಿಯೊಬ್ಬಳ ಹತ್ಯೆಯಾಗಿದೆ, ಯಾಕೆ ಇವರೆಲ್ಲಾ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮುಖ್ಯ ಭಾಷಣ ಮಾಡಿದ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಯವರು,  ವಿಜಯಪುರದ ಶಾಲೆಯೊಂದರ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿರುವ ದಲಿತ ವಿದ್ಯಾರ್ಥಿನಿಯನ್ನು, ಊಟದ ಬಿಡುವಿನ ಸಮಯದಲ್ಲಿ ಕಾಮುಕರ ತಂಡ ಕರೆದೊಯ್ದು ಬರ್ಬರವಾಗಿ ಅತ್ಯಾಚಾರ ಮಾಡಿ ಹತ್ಯೆಗೈದ ಅಮಾನವೀಯ ಘಟನೆಯಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಅಹಿಂದ ವರ್ಗ ರಕ್ಷಣೆ ಇಲ್ಲದೆ ಜೀವನ ನಡೆಸುತ್ತಿದ್ದಾರೆ.ಅದರಲ್ಲೂ ಶಿಕ್ಷಣ ಪಡೆಯಲು ಶಾಲಾ-ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿನಿಯರು ಭಯಗ್ರಸ್ತ ವಾತಾವರಣದಲ್ಲಿ ಜೀವಿಸುವಂತಾಗಿದೆ. ರಾಜ್ಯಾದ್ಯಂತ ದಲಿತ,ಅಲ್ಪಸಂಖ್ಯಾತರ ಮೇಲಿನ ದಾಳಿ,ದೌರ್ಜನ್ಯ ವ್ಯಾಪಕವಾಗುತ್ತಿದ್ದು ಅಪಾಯಕಾರಿ ಸನ್ನಿವೇಶವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಆಶ್ರಫ್ ಮಂಚಿ, ದಸಂಸ ಮಂಗಳೂರು ಸಂಚಾಲಕ ರಾಕೇಶ್ ಕೆಂಜಾರ್ ಮಾತನಾಡಿದರು. ಎಸ್ಡಿಪಿಐ ಜಿಲ್ಲಾ ಪ್ರ.ಕಾರ್ಯದರ್ಶಿ ಅಥಾವುಲ್ಲಾ ಪ್ರಾಸ್ತಾವಿಕವಾಗಿ ನುಡಿದರು.ಸಭೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಗೂಡಿನಬಳಿ, ಕಾರ್ಪುರೇಟರ್ ಅಯಾಝ್ ಕೃಷ್ಣಾಪುರ, ದಸಂಸ ಪುತ್ತೂರು ಸಂಚಾಲಕರಾದ ಶಿವಪ್ಪ ಅಟ್ಟೋಲೆ, ಎಸ್ಡಿಪಿಐ ನಾಯಕರಾದ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಉಳ್ಳಾಲ,ಮುಲ್ಕಿ ಮೂಡಬಿದ್ರೆ ಕ್ಷೇತ್ರ ಅಧ್ಯಕ್ಷರಾದ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.ಉಳ್ಳಾಲ ಕ್ಷೇತ್ರ ಸಮಿತಿ ಕಾರ್ಯದರ್ಶಿ ಹಾರಿಸ್ ಮಲಾರ್ ನಿರೂಪಿಸಿ, ವಂದಿಸಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!