ರಾಜ್ಯ ಸುದ್ದಿ

ಹೊನ್ನಾವರ ಶಾಲಾ ಬಾಲಕಿಗೆ ಚೂರಿ ಇರಿತ : ಬೆಂಕಿಗೆ ತುಪ್ಪ ಸುರಿಯುವ ಸಂಘ ಪರಿವಾರದ ಹುನ್ನಾರ ಬಯಲಿಗೆ ; ಆರೋಪಿ ಗಣೇಶ್ ನಾಯ್ಕ್’ಗಾಗಿ ಶೋಧ !

ವರದಿಗಾರ (17.12.2017) : ಪರೇಶ್ ಮೇಸ್ತಾ ಎನ್ನುವ ಯುವಕನೋರ್ವನ ಸಾವಿನಿಂದ ಹೊತ್ತಿ ಉರಿಯುತ್ತಿದ್ದ ಹೊನ್ನಾವರದ ಬೆಂಕಿಗೆ ‘ಮಾಗೋಡಿನಲ್ಲಿ ಶಾಲಾ ಬಾಲಕಿಗೆ ಅನ್ಯ ಕೋಮಿನ ಯುವಕರಿಂದ ಚೂರಿ ಇರಿತ‘ ಎಂಬ ಗುಲ್ಲೆಬ್ಬಿಸಿ ಗಲಭೆಗೆ ತುಪ್ಪ ಸುರಿಸಿ ಗಲಭೆ ಉಲ್ಭಣಗೊಳ್ಳಲು ಪ್ರಯತ್ನಿಸಿದ ಸಂಘಪರಿವಾರದ ಹುನ್ನಾರ ಬಯಲಾಗಿದ್ದು, ಗಣೇಶ್ ನಾಯ್ಕ್ ಎನ್ನುವ ಯುವಕನೋರ್ವನ ಕಿರುಕುಳದ ಕಾರಣದಿಂದ ಬಾಲಕಿ ತನ್ನ ಕೈಗೆ ಮುಳ್ಳಿನಿಂದ ಚುಚ್ಚಿಕೊಂಡೂ, ಅದಕ್ಕೆ ಚೂರಿ ಇರಿತದ ಕಥೆ ಕಟ್ಟಿದ್ದು, ಊರ ಕೆಲವರೂ ಇದಕ್ಕೆ ಬೆಂಬಲ ನೀಡಿದ್ದು ಬಯಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಮೊದಲೇ ಹೊತ್ತಿ ಉರಿಯುತ್ತಿದ್ದ ಹೊನ್ನಾವರವನ್ನು ಇನ್ನಷ್ಟು ಪ್ರಕ್ಷುಬ್ದಗೊಳಿಸಲು ಟೊಂಕ ಕಟ್ಟಿ ಇಳಿದಿದ್ದ ಗಲಭೆಕೋರರಿಗೆ ಪೂರಕವಾಗಿ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಪೋರ್ಟಲ್’ಗಳು ಈ ಘಟನೆಗೆ ವರ್ಣರಂಜಿತವಾಗಿ ಕಥೆಗಳನ್ನು ಪೋಣಿಸಿ, ಅಲ್ಪಸಂಖ್ಯಾತ ಸಮುದಾಯದ ಯುವಕರ ಮೇಲೆ ಹೊರಿಸಲು ಪ್ರಯತ್ನಪಟ್ಟು ಯಶಸ್ವಿಯೂ ಆಗಿದ್ದರು. ಬಾಲಕಿಗೆ ಚೂರಿ ಇರಿತವಾಗಿದೆ ಎಂಬ ಸುಳ್ಳು ಸುದ್ದಿಗೆ ಕೆಲ ಅಂಗಡಿ ಮುಂಗಟ್ಟುಗಳು, ಮಸೀದಿಯೊಂದರ ಸೊತ್ತುಗಳು ಮತ್ತು ಕೆಲ ಮನೆಗಳು ಗಲಭೆಕೋರರ ದಾಳಿಗೀಡಾಗಿದ್ದವು.

ಇದೀಗ ಆ ಕಟ್ಟುಕಥೆಗೆ ಪೊಲೀಸರೇ ಅಂತ್ಯ ಹಾಡಿದ್ದು, ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ನುರಿತ ಆಪ್ತ ಸಮಾಲೋಚಕರ ಸಮಕ್ಷಮದಲ್ಲಿ ವಿಚಾರಣೆ ನಡೆಸಿದಾಗ, ನೈಜ ಘಟನೆ ಬಯಲಾಗಿದೆ. ಈ ಮೂಲಕ ಸಂಘಪರಿವಾರದವರ ಗಲಭೆ ನಡೆಸಿ, ಅಲ್ಪಸಂಖ್ಯಾತ ಸಮುದಾಯದ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟು ಮಾಡಿ ರಾಜಕೀಯ ಲಾಭ ಗಳಿಸುವ ಹುನ್ನಾರ ಮತ್ತೊಮ್ಮೆ ಬಯಲಾಗಿದ್ದು, ರಾಜ್ಯದ ಜನತೆಯ ಮುಂದೆ ಬೆತ್ತಲಾಗಿದೆ.

ವಿಚಾರಣೆಯ ವೇಳೆ ಬಾಲಕಿಗೆ ಆರೋಪಿ ಗಣೇಶ್ ನಾಯ್ಕ್, ಕಳೆದ ಆರು ತಿಂಗಳಿನಿಂದ ಪ್ರತಿದಿನ ಶಾಲೆಗೆ ಹೋಗುವ ದಾರಿ ಮಧ್ಯೆ ಕಿರುಕುಳ ನೀಡುತ್ತಿದ್ದ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ. ತನ್ನ ಬೈಕಿನಲ್ಲಿ ಕೂರುವಂತೆ ಆತ ಪೀಡಿಸುತ್ತಿದ್ದುದಾಗಿ ಬಾಲಕಿ ತಿಳಿಸಿರುತ್ತಾಳೆ. ಆತನ ಕಿರುಕುಳದಿಂದಾಗಿ ತನ್ನ ಓದಿಗೆ ಸಮಸ್ಯೆಯಾಗುತ್ತದೆ ಹಾಗೂ ಪೋಷಕರ ಮರ್ಯಾದೆ ಹಾಳಾಗುತ್ತದೆ ಎಂದು ಬಾಲಕಿ ಆತಂಕಗೊಂಡಿದ್ದಳು. ಇದನ್ನು ಪೋಷಕರು ಗ್ರಾಮದ ಮುಖಂಡರ ಗಮನಕ್ಕೂ ತಂದು, ಪೀಡಕನಿಗೆ ಎಚ್ಚರಿಕೆ ನೀಡುವ ಭರವಸೆ ನೀಡಲಾಗಿತ್ತು. ಆದರೆ ಗಣೇಶ್ ನಾಯ್ಕ್ ಮಾತ್ರ ತನ್ನ ಕಪಿ ಚೇಷ್ಟೆ ಮುಂದುವರಿಸಿದ್ದ. ಹೊನ್ನಾವರದ ಗಲಭೆಯಿಂದಾಗಿ ಮೂರು ದಿನ ಶಾಲೆಗೆ ರಜೆ ಹಾಕಿದ್ದ ಬಾಲಕಿ, ಡಿಸಂಬರ್ 14ರಂದು ಶಾಲೆಯಲ್ಲಿ ಪರೀಕ್ಷೆ ಇರುವ ಬಗ್ಗೆ ಗೆಳತಿಯಿಂದ ತಿಳಿದು ಬಂದಿದೆ. ಮೊದಲೇ ಪೀಡಕನಿಂದ ಆಘಾತಗೊಂಡಿದ್ದ ಬಾಲಕಿ, ಸರಿಯಾಗಿ ಪರೀಕ್ಷೆ ತಯಾರಿ ನಡೆಸದೇ ಇದ್ದುದರಿಂದ, ಮನೆಯಿಂದ ತಂದಿದ್ದ ನಿಂಬೆ ಹಣ್ಣಿನ ಮುಳ್ಳಿನಿಂದ ತನ ಕೈಗೆ ತಾನೇ ಚುಚ್ಚಿಕೊಂಡಿದ್ದಾಳೆ. ಅದಕ್ಕೆ ಸುತ್ತಿಕೊಳ್ಳಲು ಬ್ಯಾಂಡೇಡ್ ತರಲು ಅಂಗಡಿಗೆ ಹೋದರೆ, ಅಂಗಡಿಯವ ಈ ಘಟನೆಯನ್ನು ವೈಭವೀಕರಿಸಿ, ಬಾಲಕಿಗೆ ಮುಸ್ಲಿಮರೇ ಚೂರಿ ಇರಿದಿದ್ದಾರೆ, ನಾನೂ ಕೂಡಾ ನೋಡಿದ್ದೇನೆ ಎಂದು ಸುಳ್ಳು ಪ್ರಚಾರ ನಡೆಸಿ, ಮಾಗೋಡು ಪ್ರದೇಶದಲ್ಲೂ ಗಲಭೆ ಹರಡುವಂತೆ ಮಾಡಿದ್ದಾನೆ. ತಜ್ಞ ವೈದ್ಯರು ಬಾಲಕಿಯ ಕೈಗೆ ಆಗಿರುವ ಗಾಯ ಮುಳ್ಳಿನಂದಾಗಿರುವ ಗಾಯವೆಂದು ದೃಢಪಡಿಸಿದ್ದಾರೆ. ಇದನ್ನು ಬಾಲಕಿಯೂ ಕೂಡಾ ಆಪ್ತ ಸಮಾಲೋಚಕರ ಮುಂದೆ ಹಾಗೂ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾಳೆ.

ಬಾಲಕಿಯ ಹೇಳಿಕೆಯ ಪ್ರಕಾರ ತಲೆಮರೆಸಿಕೊಂಡಿರುವ ಆರೋಪಿ ಗಣೇಶ್ ನಾಯ್ಕನ ವಿರುದ್ಧ ಪೋಕ್ಸೋ ಕಾಯ್ದೆಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದೇ ರೀತಿ ಈ ಘಟನೆಗೆ ಕೋಮು ಬಣ್ಣ ಹಚ್ಚಿ ಗಲಭೆ ಇನ್ನಷ್ಟು ಕಡೆಗೆ ಹಬ್ಬುವಂತೆ ಪ್ರೇರೇಪಿಸಿದ ಸಮಾಜಘಾತುಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ದಿನ ಪೊಲೀಸರ ಮುಂದೆ ಹೇಳಿಕೆ ನೀಡುತ್ತಿರುವ ಬಾಲಕಿ

ಹೊನ್ನಾವರ ಪೊಲೀಸರು ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆ

To Top
error: Content is protected !!
WhatsApp chat Join our WhatsApp group