ವರದಿಗಾರ ವಿಶೇಷ

ರಾಜ್ ಸಮಂದ್ ಹಂತಕ ಶಂಭುಲಾಲ್ : ಸಾಮಾನ್ಯನೊಬ್ಬ ಉಗ್ರವಾದಿಯಾಗಿದ್ದು ಹೇಗೆ?

ವರದಿಗಾರ (16.12.2017) : ರಾಜಸ್ಥಾನದ ರಾಜ್ ಸಮಂದ್ ನಲ್ಲಿ ಲವ್ ಜಿಹಾದ್ ಎಂಬ ಕಪೋಲಕಲ್ಪಿತ ಸಂಘಪರಿವಾರದ ಅಪಪ್ರಚಾರಕ್ಕೆ ಬಲಿಬಿದ್ದು, ವ್ಯಕ್ತಿಯೊಬ್ಬನನ್ನು ಕೊಂದು ಜೀವಂತ ದಹಿಸಿದ ಪ್ರಕರಣದ ಪ್ರಮುಖ ಆರೋಪಿ ಶಂಭುಲಾಲ್ ಓರ್ವ ಸಾಮಾನ್ಯ ವ್ಯಕ್ತಿಯಾಗಿದ್ದ. ಆದರೆ ಮನುಕುಲವೇ ತಲೆತಗ್ಗಿಸುವಂತಹಾ ಅದರಲ್ಲೂ ತಾನು ಮಾಡುತ್ತಿರುವ ಕೃತ್ಯದ ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಡುವಂತಹಾ ಉಗ್ರರ ಮನೋಸ್ಥಿತಿಗೆ ಆತ ತಲುಪಿದ್ದಾದರೂ ಹೇಗೆ ಎಂಬ ಕುರಿತು ಇನ್ನೂ ಅಲ್ಲಿನ ನಾಗರಿಕರು ಯೋಚಿಸುತ್ತಿದಾರೆ.

ತನ್ನ ಜೀವಮಾನದಲ್ಲಿ ಪ್ರಥಮ ಬಾರಿಗೆ ನೋಡುತ್ತಿರುವ ವ್ಯಕ್ತಿಯೊಬ್ಬನ ಮೇಲೆ ಒಂದು ಗಂಭೀರ ಆರೋಪ ಹೊರಿಸಿ ಕೊಲೆ ಮಾಡಿ ದಹಿಸುವಷ್ಟು ಮತಾಂಧತೆಯನ್ನು ಶಂಭುಲಾಲ್ ಮನಸ್ಸಿನಲ್ಲಿ ಬಿತ್ತಿದವರಾರು? ಇದನ್ನು ಮಾಡಿದ ಆ ಕಿರಾತಕ ಹೇಳಿದ್ದಿಷ್ಟು, “ಅದು ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ನನಗೆ ಗೊತ್ತಿದ್ದದ್ದನ್ನು ನಾನು ಮಾಡಿದೆ. ಓರ್ವ ಜಿಹಾದಿಗೆ ಸರಿಯಾದ ಅಂತ್ಯ ಹಾಡಿದ್ದೇನೆ. ರಾಜಕೀಯ ಪಕ್ಷಗಳು ನನ್ನನ್ನು ಭಯೋತ್ಪಾದಕನೆಂದು ಕರೆಯಬಹುದು ಅಥವಾ ದೇಶದ್ರೋಹಿಯೆನ್ನಬಹುದು. ನನ್ನ ಕುಟುಂಬಕ್ಕೆ ನಾನು ನೋವು ಕೊಡುತ್ತಿದ್ದೇನೆ. ಆದರೆ ದೇಶಕ್ಕೆ ಭಯೋತ್ಪಾದಕರ ದಾಳಿಯ ವೇಳೆ ಮೃತನಾದವರ ಪಟ್ಟಿಯಲ್ಲಿ ನನ್ನ ಹೆಸರೂ ಸೇರಿಸಲು ನಾನು ಇಷ್ಟಪಡುತ್ತೇನೆ” !

ಈ ರೀತಿಯ ಮತಾಂಧತೆಯ ಮೂಲವೆಲ್ಲಿ ?

ಈಗಿನ ಕಾಲದಲ್ಲಿ ಪ್ರತಿಯೊಬ್ಬನ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ಇಂಟರ್ನೆಟ್ ಕೂಡಾ ಬಹಳ ಕಡಿಮೆ ದರದಲ್ಲಿ ದೊರೆಯುತ್ತಿದೆ. ಅಫ್ರಝುಲ್ ಹತ್ಯೆಯಾದ ರಾಜ್ ಸಮಂದ್ ಗ್ರಾಮದ ಪ್ರತಿಯೊಬ್ಬರ ಕಥೆಯೂ ಇದಕ್ಕಿಂತ ಭಿನ್ನವಿಲ್ಲ. ಇಲ್ಲಿನವರೂ ಸಾಮಾಜಿಕ ತಾಣಗಳಲ್ಲಿ ಹರಿಯಬಿಡಲಾಗುವ ನಕಲಿ ಸಂದೇಶ, ಆಡಿಯೋ ಮತ್ತು ವೀಡಿಯೋಗಳನ್ನು ಪ್ರತಿದಿನ ನೋಡುತ್ತಿರುತ್ತಾರೆ. ಅದರಲ್ಲಿ ಹೆಚ್ಚಿನವು ಹಿಂದೂಗಳ ಮೇಲಾಗುತಿರುವ ದೌರ್ಜನ್ಯಗಳು ಎಂಬಂತೆ ಬಿಂಬಿಸುವ ವೀಡಿಯೋಗಳಾಗಿವೆ. ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದ ವೀಡಿಯೋ ಒಂದರಲ್ಲಿ ಗೋವೊಂದನ್ನು ಕಡಿಯುವ ದೃಶ್ಯಗಳಿದ್ದವು. ಅದು ಭಾರತದಲ್ಲಿ ನಡೆದದ್ದೆಂಬಂತೆ ಅಲ್ಲಿ ಬಿಂಬಿಸಲಾಗಿತ್ತು. ಆದರೆ ವಾಸ್ತವದಲ್ಲಿ ಅದು ಪಾಕಿಸ್ತಾನದ ದೃಶ್ಯಗಳಾಗಿದ್ದವು. ಇದರ ಬಗ್ಗೆ ಅವರಲ್ಲಿ ತಿಳಿಸಿದಾಗ, “ನಮಗದೆಲ್ಲ ಗೊತ್ತಿಲ್ಲ, ಆದರೆ ನಾವು ಪ್ರತಿದಿನ ಇಂತಹದ್ದನ್ನೇ ನೋಡುತ್ತೇವೆ. ನಾವೂ ಕೂಡಾ ಬಿಸಿರಕ್ತದ ಯುವಕರು ತಾನೇ? ನಮ್ಮ ರಕ್ತ ಕುದಿಯುತ್ತದೆ!!’

ನರಹಂತಕ ಶಂಭುಲಾಲ್ ಕೂಡಾ ಇದೇ ರೀತಿಯ ಓರ್ವ ಯುವಕನಾಗಿದ್ದ. ಆತನ ಮನೋಸ್ಥಿತಿ ಆತ ಮಾಡಿರುವ ವೀಡಿಯೋದಲ್ಲಿ ಗೋಚರಿಸುತ್ತಿದೆ. ಧರ್ಮದ ಆಧಾರದಲ್ಲಿ ಜನರನ್ನು ಕೇಂದ್ರೀಕರಿಸುವ ರಾಜಕಾರಣಿಗಳಿಗೆ ಹಿಂದಿನಂತೆ ಮತ ಸೆಳೆಯಲು ಮನೆ ಮನೆಗೆ ಹೋಗಬೇಕಾಗಿಲ್ಲ. ಬದಲಾಗಿ ವಾಟಪ್ಪಿನಲ್ಲೋ ಅಥವಾ ಫೇಸ್ಬುಕ್ಕಿನಲ್ಲೋ ಈ ರೀತಿಯ ವೀಡಿಯೋ ಹರಿಯಬಿಟ್ಟರೆ ಅವರ ಕೆಲಸ ಸಲೀಸಾಗಿ ನಡೆಯುತ್ತದೆ. ಶಂಭುಲಾಲ್ ನ ಭಾವನೇ ಹೇಳುವ ಪ್ರಕಾರ, ಕಳೇದ ಕೆಲವು ವರ್ಷಗಳಿಂದ ಆತನ ವ್ಯವಹಾರ ನಷ್ಟದಲ್ಲಿತ್ತು. ಆತ ಕುಡಿತ ಮತ್ತು ಮಾದಕ ದ್ರವ್ಯದ ದಾಸನಾಗಿದ್ದ.  ಹೆಚ್ಚಿನ ವೇಳೆಯಲ್ಲಿ ಈ ರೀತಿಯ ಪ್ರಚೋದನಕಾರಿ ವೀಡಿಯೋಗಳನ್ನು ನೋಡುತ್ತಿದ್ದ.

ಉದಯಪುರದ “ದೈನಿಕ್ ಭಾಸ್ಕರ್” ಸಂಪಾದಕ ತ್ರಿಭುವನ್ ಅವರು ಹೇಳುವ ಪ್ರಕಾರ ಕಳೆದೊಂದು ವರ್ಷದಿಂದ ರಾಜಸ್ಥಾನದ ನಿರುದ್ಯೋಗ ಸಮಸ್ಯೆ ಉಲ್ಭಣಿಸಿದೆ. 20 ರಿಂದ 35 ವರ್ಷದೊಳಗಿನವರಿಗೆ ಇಲ್ಲಿ ಉದ್ಯೋಗ ಸಿಗುವುದು ಕಷ್ಟವಾಗಿದೆ. ಈ ವಯೋಮಾನದ ಯುವಕರು ತಮ್ಮ ಉಚಿತ ವೇಳೆಯಲ್ಲಿ ಪ್ರಚೋದನಕಾರಿ ವೀಡಿಯೋಗಳನ್ನು ನೋಡಿಕೊಂಡು ಸಮಯ ಕಳೆಯುತ್ತಾರೆ. ರಾಜ್ ಸಮಂದ್ ಘಟನೆಗೆ ಈ ರೀತಿಯ ವೀಡಿಯೋಗಳೇ ನೇರ ಕಾರಣವೆಂದು ತ್ರಿಭುವನ್ ಆರೋಪಿಸುತ್ತಾರೆ.

ಹಂತಕ ಶಂಭುಲಾಲ್ ತಾಯಿ, “ಇದುವರೆಗೂ ಒರ್ವನನ್ನು ಹೊಡೆಯದ ಶಂಭುಲಾಲ್ ಒಂದು ಕೊಲೆ ಮಾಡಿದ್ದಾನೆಂದರೆ ನಂಬಲು ಕಷ್ಟವಾಗುತ್ತದೆ. ಆದರೆ ಈ ಕೃತ್ಯಕ್ಕೆ ಆತನನ್ನು ಪ್ರಚೋದಿಸಿದವರು ಕೂಡಾ ಈ ಅಪರಾಧದಲ್ಲಿ ಸಮಾನ ಭಾಗೀದಾರರು” ಎಂದು ಹೇಳುತ್ತಾರೆ.

ಶಂಭೂಲಾಲ್ ತನ್ನ ಕೃತ್ಯ ನಡೆಸುವುದಕ್ಕಿಂತ ಮುಂಚೆ ತನ್ನ ಫೇಸ್ಬುಕ್ಕಿನಲ್ಲಿ ಇಂಗ್ಲಿಷ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಅದರಲ್ಲಿ ಆರೆಸ್ಸೆಸ್, ಬಿಜೆಪಿ, ವಿ ಹೆಚ್ ಪಿ, ಭಜರಂಗದಳ ಸೇರಿದಂತೆ ಹಿಂದುತ್ವದ ಸಂಘಟನೆಗಳು ಕಳೆದ ಕೆಲವು ವರ್ಷಗಳಿಂದ ತಮ್ಮ ರಾಜಕೀಯಕ್ಕಾಗಿ ಎತ್ತಿರುವ  ಲವ್ ಜಿಹಾದ್, ಭಯೋತ್ಪಾದನೆ ಮತ್ತು ಬಹುಪತ್ನಿತ್ವದ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಅದರಲ್ಲಿ ಹಂತಕ “ಜಗತ್ತಿನಾದ್ಯಂತ ಇಸ್ಲಾಮಿಕ್ ಜಿಹಾದ್ ಹರಡುತ್ತಿದೆ, ಅದನ್ನು ತಡೆಯಲು ನಾನು ನನ್ನ ಅಹಿಂಸಾತ್ಮಕ ಜೀವನವನ್ನು ಕೊನೆಗೊಳಿಸಬೇಕಾಗಿದೆ, ಹುಡುಗಿಯರನ್ನು ಅವರಿಂದ ರಕ್ಷಿಸಬೇಕಾಗಿದೆ” ಎಂದು ಹೇಳಿಕೊಂಡಿದ್ದಾನೆ.

ಸಾಮಾನ್ಯ ಯುವಕರಂತೆ ಬದುಕುತ್ತಿದ್ದ ವ್ಯಕ್ತಿಯೋರ್ವ ಇಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಸುಳ್ಳು ಮಾಹಿತಿಗಳಿಗೆ ಬಲಿ ಬಿದ್ದು, ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಸಂಚಿಗೆ ಬಲಿಯಾಗಿ ತನ್ನ ಜೀವನವನ್ನು ಹಾಳುಮಾಡಿಕೊಂಡು ಜನರ ಮುಂದೆ ಓರ್ವ ಭಯೋತ್ಪಾದಕನಾಗಿದ್ದುದು ಮಾತ್ರ ಪರಿಸ್ಥಿತಿಯ ವಿಪರ್ಯಾಸವೆನ್ನದೆ ವಿಧಿಯಿಲ್ಲ. ಇನ್ನಾದರೂ ಯುವ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ

ಕೃಪೆ : ಬಿಬಿಸಿ ಹಿಂದಿ

To Top
error: Content is protected !!
WhatsApp chat Join our WhatsApp group