ವರದಿಗಾರ ವಿಶೇಷ

ಪರೇಶ ಮೇಸ್ತ ಸಾವು : ಉತ್ತರ ಕನ್ನಡದ ಗಲಭೆ ಪೂರ್ವ ನಿಯೋಜಿತವೇ ? ಅವಲೋಕನಾ ವರದಿ

ವರದಿಗಾರ (ಡಿ.12):ಇತ್ತೀಚೆಗೆ ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಕುಮಟಾ ಮತ್ತು ಕಾರವಾರದಲ್ಲಿ ಸೋಮವಾರ ಬಂದ್ ಗೆ ಕರೆ ನೀಡಿ ಪ್ರತಿಭಟನೆಯ ಹೆಸರಿನಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದು, ಐ.ಜಿ.ಪಿ ಹೇಮಂತ ನಿಂಬಾಳ್ಕರ್ ಕಾರಿನಿಂದ ಇಳಿದ ನಂತರ, ಚಾಲಕ ಒಳಗಿದ್ದಾಗಲೇ ಕಾರಿಗೆ ಬೆಂಕಿ ಹಚ್ಚಲಾಯಿತು. ಗಂಭೀರ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಮಟಾ ಪಿಎಸ್ಐ ಇ.ಸಿ. ಸಂಪತ್, ದಾಂಡೇಲಿ ಮಹಿಳಾ ಎಎಸ್ಐ ಮಂಜುಳಾ ರಾವೋಜಿ ಸೇರಿದಂತೆ ಸುಮಾರು ಹತ್ತು ಜನ ಪೊಲೀಸರು ಗಾಯಗೊಂಡಿದ್ದಾರೆ, ಹಲವು ಮನೆಗಳಿಗೆ ಹಾನಿಯಾಗಿದೆ ಮತ್ತು ಮಾಧ್ಯಮದವರ ಮೇಲೂ ಕಲ್ಲು ತೂರಲಾಗಿದೆ.

ಪೂರ್ವನಿಯೋಜಿತ ಹಿಂಸಾಚಾರ ಘಟನೆ ಬಳಿಕ ಎಚ್ಚೆತ್ತ ಅಧಿಕಾರಿಗಳು, ಪರೇಶ್‌ ಮೇಸ್ತ ಮರಣೋತ್ತರ ಪರೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಪರೇಶ ಮೇಸ್ತ ಮೃತದೇಹದ ಮೇಲೆ ಯಾವುದೇ ರೀತಿಯ ಹಲ್ಲೆಯ ಗುರುತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದ್ದು, ಸಾವಿನ ಹೆಸರಿನಲ್ಲಿ ಸಂಘಪರಿವಾರ ತನ್ನ ರಾಜಕೀಯದ ಓಲೈಕೆಗಾಗಿ ಧರ್ಮ-ಧರ್ಮಗಳ ಮಧ್ಯೆ ವಿಷಬೀಜವನ್ನು ಭಿತ್ತಿ ಮತ್ತೊಮ್ಮೆ ಗಲಭೆಯನ್ನು ಸೃಷ್ಠಿಸಿದೆ ಮತ್ತು ಶಾಂತಿ ಸುವ್ಯವಸ್ಥೆ ಕದಡಿದೆ ಎಂಬುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಈ ಹಿಂದೆ ನೀಡಿರುವ ಹೇಳಿಕೆಗಳನ್ನು ಅವಲೋಕಿಸುವಾಗ ‘ಬಿಜೆಪಿಯು ಈ ಸಮಾಜಕ್ಕೆ ಬೆಂಕಿ ಹಚ್ಚಲು ನಿರಂತರವಾಗಿ ಪ್ರಯತ್ನಿಸುತ್ತಿದೆ’. ಧ್ವೇಷ ಸಾಧಿಸುವುದೇ ತನ್ನ ರಾಜಕೀಯವೆಂದು ಬಲವಾಗಿ ನಂಬಿಕೊಂಡಿದೆ ಎಂಬುವುದ್ಕೆ ಕೆಳಗೆ ನೀಡಿರುವ ಉದಾಹರಣೆಗಳೇ ಅದನ್ನು ಒತ್ತಿ ಹೇಳುತ್ತದೆ.  ಅದಕ್ಕೆ ಪೂರಕವಾಗಿ ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ಪ್ರಚೋದನಕಾರಿ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ, ಶಾಂತಿಗೆ ಮಾರಕವಾಗಿರುವ ಹೇಳಿಕೆಗಳ ಮೇಲೊಂದು ನೋಟ

ಅನಂತ್ ಕುಮಾರ್ ಹೆಗಡೆ:

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ  ನೀಡಿದ ಹೇಳಿಕೆ, ಬಿಜೆಪಿಯಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಬಯಸುವವರಿಗೆ ಪರೋಕ್ಷವಾಗಿ ಎಚ್ಚರಿಸಿದ್ದಲ್ಲದೇ, ಹುಣಸೂರಿನಲ್ಲಿ ಸಂಸದ ಪ್ರತಾಪ ಸಿಂಹ ರನ್ನು ಬಂಧಿಸಿದಂತೆ, ಉತ್ತರ ಕನ್ನಡದಲ್ಲಿ ಆಗಿದ್ದರೆ ಇಡೀ ಜಿಲ್ಲೆ ಹೊತ್ತಿ ಉರಿಯುತ್ತಿತ್ತು. ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆ ಶಕ್ತಿಯಿದೆ. ಇಂತಹ ತಾಕತ್ತು ಮೈಸೂರಿನ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಪ್ರಶ್ನಿಸುತ್ತಾ, ‘ಕಾರ್ಯಕರ್ತರು ಎದ್ದು ನಿಂತರೆ ಪೊಲೀಸರಿಗೆ ಜಾಗ ಇಲ್ಲದಂತೆ ಆಗಬೇಕು. ಇಂತಹ ಶಕ್ತಿಯನ್ನು ನಾಯಕರು ಅವರಲ್ಲಿ ತುಂಬಬೇಕು’ ಎಂಬ ಹೇಳಿಕೆಯು ಕುಮಟಾ ಘಟನೆಗೆ ಮತ್ತಷ್ಟು ಪುಷ್ಠಿ ನೀಡುತ್ತದೆ ಮತ್ತು ಹೇಳಿಕೆ ನೀಡಿದಂತೆ ಇಲ್ಲಿ ಪೊಲೀಸರನ್ನೇ ಬೆದರಿಸುವ, ಅವರ ಮೇಲೆ ಕಲ್ಲು ತೂರುವ, ಕಾರಿಕೆ ಬೆಂಕಿ ಹಚ್ಚುವ ಕೃತ್ಯ ನಡೆದಿದೆ.

ಪ್ರತಾಪ್ ಸಿಂಹ: ವೀಡಿಯೋ ಹೇಳಿಕೆ

ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ವೀಡಿಯೋ ಒಂದು ಸಾಮಾಜಿಕ ತಾಣದಲ್ಲಿ ಹರಿದಾಡಿದ್ದು, ಅದರಲ್ಲಿ ಅವರೇ ಹೇಳಿಕೊಂಡಿರುವಂತೆ ಕಳೆದ ಬಾರಿ ಅಮಿತ್ ಶಾ ಕರ್ನಾಟಕಕ್ಕೆ ಭೇಟಿಯ ಸಂದರ್ಭದಲ್ಲಿ ಲಾಠಿ ಚಾರ್ಜ್, ಕೇಸು ದಾಖಲಾಗುವಂತಹಾ “ಉಗ್ರ” ಪ್ರತಿಭಟನೆಗಳನ್ನು ಮಾಡಬೇಕೆಂದು ಕರೆ ಕೊಟ್ಟಿದ್ದರೆಂದು ಹೇಳಿದ್ದರು. ಇಂದು ಕುಮಟಾ, ಕಾರವಾರ, ಶಿರಸಿ ಯಲ್ಲೂ ನಡೆಯುತ್ತಿರುವುದು ಇದುವೇ ಅಲ್ಲವೇ?

ನಳಿನ್ ಕುಮಾರ್ ಕಟೀಲ್:

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯಲ್ಲಿ ಸ್ವತಃ ತನ್ನ ಸಹೋದರಿಯಿಂದಲೇ ಹತ್ಯೆಗೈಯ್ಯಲ್ಲಪಟ್ಟಿದ್ದ ಕಾರ್ತಿಕ್ ರಾಜ್ ಎಂಬ ಯುವಕನ ಸಾವಿನ ತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಮಾತನಾಡುತ್ತಾ, ‘ಜಿಲ್ಲೆಗೆ ಬೆಂಕಿ ಕೊಡಲು ನಮಗೆ ಸಾಧ್ಯವಿದೆ’ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

 

ಪೊಲೀಸ್ ಅಧಿಕಾರಿಯನ್ನೇ ಬೆದರಿಸುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲ್:

ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ:

ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ನಡೆಸಿರುವ ಪ್ರತಿಭಟನೆಯಲ್ಲಿ ಮಾತನಾಡಿರುವ ಸಂಸದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಂಘಪರಿವಾರದ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ ಇದುವರೆಗೂ ಸರಕಾರ ಪ್ರಕರಣವನ್ನು ಭೇಧಿಸಿಲ್ಲ. ಆದರೆ, ಒಂದು ವೇಳೆ ಪರೇಶ್ ಮೇಸ್ತಾ ಸಾವಿನ ತನಿಖೆ ಸೂಕ್ತ ರೀತಿಯಲ್ಲಿ ಆಗದಿದ್ದರೆ ಇಡೀ ಕರಾವಳಿ ಭಾಗ ಹೊತ್ತಿ ಉರಿಯಲಿದೆ ಎಂದು ಹೇಳಿಕೆ ನೀಡಿದ್ದಾರೆ.ಕೆಲ ತಿಂಗಳ ಹಿಂದೆ ಶೋಭಾ ಕರಂದ್ಲಾಜೆ, ಅಮಾಯಕ್ ಹಿಂದೂಗಳ ಹತ್ಯೆ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ನಡೆದಿದೆಯೆನ್ನುತ್ತಾ 22 ಜನರ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿದ್ದರು. ತದ ನಂತರ ಇದು ಸುಳ್ಳೆಂದು ಸಾಬೀತಾಗಿದ್ದು, ಶೋಭಾರವರ ಪಟ್ಟಿಯಲ್ಲಿದ್ದ ಹೆಚ್ಚಿನವರು ಕೌಟುಂಬಿಕ ಕಲಹ, ಆಸ್ತಿ ವಿವಾದ ಮತ್ತು ವೈಯುಕ್ತಿಕ ಧ್ವೇಷಗಳಿಂದ ಹತ್ಯೆಯಾದವರೇ ಸೇರಿದ್ದರು. ಮಾತ್ರವಲ್ಲ ಅಶೋಕ್ ಎನ್ನುವ ಬದುಕಿದ್ದ ವ್ಯಕ್ತಿಯನ್ನೂ ಹತ್ಯೆಯಾದವರ ಪಟ್ಟಿಯಲ್ಲಿ ಸೇರಿಸಿ ಆತನನ್ನು ಮಾಧ್ಯಮಗಳಲ್ಲಿ ಹತ್ಯೆ ಮಾಡಿ ನಗೆಪಾಟಲಿಗೀಡಾಗಿದ್ದರು.

ಮುಸ್ಲಿಮರ ಮನೆಗೆ ನುಗ್ಗಿ ದಾಳಿ ನಡೆಸುವಂತೆ ಕರೆ ನೀಡಿದ ಸಂಘಪರಿವಾರ ನಾಯಕ:
ಜಗದೀಶ್ ಕಾರಂತ್ ಪ್ರಚೋದನಾತ್ಮಕ ಭಾಷಣ: 
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಪೊಲೀಸ್ ಅಧಿಕಾರಿಗಳಾದ ಸಂಪ್ಯ ಠಾಣಾ ಎಸ್ಐ ಖಾದರ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಎಎಸ್ಐ ರುಕ್ಮಾ ಮತ್ತು ಚಂದ್ರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ 2017 ಸೆಪ್ಟೆಂಬರ್ 15ರಂದು ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಮಾತನಾಡುತ್ತಾ, ಎಸ್ಐ ವಿರುದ್ಧ ಅತ್ಯಂತ ಅಶ್ಲೀಲ ಪದಗಳನ್ನು ಬಳಸಿ, ಅವರೆಲ್ಲರೂ ನಮ್ಮ ಕಾಲ ಕಸ. ಅವರ ತಲೆಯನ್ನು ಬೋಲಿಸಿ, ಕತ್ತೆಯ ಮೇಲೆ ಕೂರಿಸಿ, ಪುತ್ತೂರಿನಲ್ಲಿ ಮೆರವಣಿಗೆ ಮಾಡುವುದು ನಮಗೆ ಲೆಕ್ಕವೇ ಅಲ್ಲವೆಂಬ ಬಹಿರಂಗ ಬೆದರಿಕೆ ಒಡ್ಡಿದ್ದರು ಮತ್ತು ನಮಗೆ ಯಾವುದೇ ಕಾನೂನಿನ ಭಯವಿಲ್ಲ, ಪುತ್ತೂರನ್ನು ಹಳೆ ಸುರತ್ಕಲ್ ಮಾಡುತ್ತೇವೆ ಎಂಬಂತಹ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದರು.

 

ಆದರೆ, ಪರೇಶ ಮೇಸ್ತ ವರದಿಯ ವಿವರ ಈ ಕೆಳಗಿನಂತಿದೆ:

ಡಿ.8ರಂದು ಪರೇಶ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ವರದಿಯು ಪ್ರಶ್ನೋತ್ತರ ಮಾದರಿಯಲ್ಲಿದೆ. ಸಹಜವಾಗಿ ಮೃತಪಟ್ಟಿದ್ದಾರೆಯೇ ಅಥವಾ ಹತ್ಯೆ ಮಾಡಲಾಗಿದೆಯೇ ಎಂಬ ಕುರಿತಾದ 19 ಪ್ರಶ್ನೆಗಳಿಗೆ ಈ ವರದಿಯಲ್ಲಿ ಉತ್ತರಿಸಲಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶಂಕರ್‌ ಎಂ.ಬಕ್ಕನ್ನವರ ಅವರು ಹೊನ್ನಾವರ ಪೊಲೀಸರಿಗೆ ನೀಡಿರುವ ವರದಿಯಲ್ಲಿ, ‘ಆಯುಧದಿಂದ ಹಲ್ಲೆ ನಡೆಸಿದ ಗುರುತುಗಳಾಗಲಿ ಅಥವಾ ಉಸಿರುಗಟ್ಟಿಸಿ ಸಾಯಿಸಿರುವ ಲಕ್ಷಣಗಳಾಗಲಿ ಪರೇಶ್‌ ಮೇಸ್ತ ಮೃತದೇಹದಲ್ಲಿ ಕಂಡುಬಂದಿಲ್ಲ’ ಎಂದು ಹೇಳಿದ್ದಾರೆ.

‘ಸುಟ್ಟ ಗಾಯದ ಗುರುತು ಕಂಡುಬಂದಿಲ್ಲ. ಆದರೆ, ದೇಹದ ಎರಡು ಕಡೆ ತರಚಿದ ಗಾಯಗಳಿವೆ. ಉಗುರು ಅಥವಾ ಪಿನ್‌ನಿಂದ ಚುಚ್ಚಿರುವುದು ಕಂಡುಬಂದಿಲ್ಲ. ಇನ್ನು ಮರ್ಮಾಂಗವಾಗಲಿ ಅಥವಾ ಇತರ ಅಂಗಾಂಗಗಳಾಗಲಿ ವಿರೂಪಗೊಂಡಿಲ್ಲ. ಕೈಯಲ್ಲಿ ಶಿವಾಜಿ ಚಿತ್ರದ ಹಚ್ಚೆ (ಟ್ಯಾಟು) ಇದ್ದು , ‘ಮರಾಠಾ’ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಇದಕ್ಕೂ ಯಾವುದೇ ಹಾನಿಯಾಗಿಲ್ಲ. ತಲೆಗೂ ಯಾವುದೇ ರೀತಿ ಪೆಟ್ಟು ಬಿದ್ದಿಲ್ಲ. ದೇಹದ ಮೇಲೆ ಬಿಸಿ ನೀರು ಅಥವಾ ಆ್ಯಸಿಡ್‌ ಬಿದ್ದಿಲ್ಲ. ಹಗ್ಗ ಬಿಗಿದ ಗುರುತು ಸಹ ಎಲ್ಲೂ ಇಲ್ಲ’ ಎಂದು ವರದಿಯಲ್ಲಿ ಆಯಾ ಪ್ರಶ್ನೆಗಳಿಗನುಸಾರ ಉತ್ತರಿಸಲಾಗಿದೆ.

ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ನಿಂಬಾಳ್ಕರ್ ಎಚ್ಚರಿಕೆ
ಪರೇಶ ಸಾವಿಗೆ ಸಂಬಂಧಿಸಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹಾಕಿ ಗಲಭೆಗೆ ಪ್ರಚೋದನೆ ನೀಡುತ್ತಿರುವುದು ಗಮನಕ್ಕೆ ಬಂದಿದೆ.  ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪಶ್ಚಿಮ ವಲಯದ ಐಜಿಪಿ ಹೇಮಂತ್‌ ನಿಂಬಾಳ್ಕರ್ ಎಚ್ಚರಿಕೆಯನ್ನು ನೀಡಿದ್ದಾರೆ.

ಜಿಲ್ಲೆಯಾದ್ಯಂತ 14ರವರೆಗೆ ನಿಷೇಧಾಜ್ಞೆ
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಡಿ.14ರವರೆಗೆ ಸಭೆ, ಸಮಾರಂಭ, ಮೆರವಣಿಗೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿದ್ದಾರೆ.

ಸಾವಿನ ಬಗ್ಗೆ ತನಿಖೆ ಇನ್ನಷ್ಟೇ ಪ್ರಗತಿಯಲ್ಲಿದೆ. ತಪ್ಪಿತಸ್ಥರು ಯಾರೇ ಆಗಿದ್ದರು ಶಿಕ್ಷೆಯಾಗಲಿ. ಆದರೆ, ತನ್ನ ಅಭಿವೃದ್ಧಿ ಕೆಲಸಗಳಿಂದ ಮತ್ತು ಒಬ್ಬ ಜನಪರವಾದ ಜನಪ್ರತಿನಿಧಿಯಾಗಿ ಎಲ್ಲರ ಮನಸ್ಸನ್ನು ಗೆಲ್ಲಬೇಕಾಗಿದ್ದವರು,  ಸಾವಿನ ಹೆಸರಿನಲ್ಲಿ ಸಮಾಜಕ್ಕೆ ಬೆಂಕಿ ಹೊತ್ತಿಸಿ, ಅದರಿಂದ ತನ್ನ ರಾಜಕೀಯದ ಬೇಳೆ ಬೇಯಿಸಲು ಹೊರಟಿರುವ ಬಿಜೆಪಿಯ ನಡೆ ವಿಪರ್ಯಾಸ ಮಾತ್ರವಲ್ಲ ಆತಂಕಕಾರಿ ಕೂಡಾ ಹೌದು.

 

1 Comment

1 Comment

  1. Dinesh Poonja

    December 13, 2017 at 6:05 pm

    This uttara Kannada disturbance was caused to influence Gujarat voters and make them vote for BJP as claimed in some videos on YouTube.

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group