ವರದಿಗಾರ(ಡಿ.12): ಶೋಭಾ ಕರಂದ್ಲಾಜೆ ಅವರು ತಾವೇ ವೈದ್ಯರೆಂದು ತಿಳಿದುಕೊಂಡಂತಿದೆ. ಹೊನ್ನಾವರದ ಯುವಕ ಪರೇಶ ಮೇಸ್ತ ಶವ ನೋಡಿದ ತಕ್ಷಣವೇ ಸುಳ್ಳು, ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿರವರು, ಶೋಭಾ ಕರಂದ್ಲಾಜೆಯ ‘ಕರಾವಳಿ ಹೊತ್ತಿ ಉರಿಯಲಿದೆ’ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇಂದು ವರದಿಗಾರರೊಂದಿಗೆ ಮಾತನಾಡಿದ ಅವರು, ‘ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಬಿಜೆಪಿಯೇ ನೇರ ಕಾರಣ’ ಎಂದು ಹೇಳಿದ್ದಾರೆ.
ಬಿಜೆಪಿ ಐದಾರು ಮುಖಂಡರು ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನಾನು ಹೇಳುವುದಲ್ಲ ಇತ್ತೀಚೆಗೆ ಪ್ರತಾಪ್ ಸಿಂಹ ರ ವೈರಲ್ ಆಗಿರುವ ಮತ್ತು ಈಶ್ವರಪ್ಪ ಅವರು ಮಾತನಾಡಿರುವ ವಿಡಿಯೊ ನೋಡಿ ಎಂದು ಹೇಳಿದ್ದಾರೆ.
ಇನ್ನು ಅನಂತಕುಮಾರ್ ಹೆಗಡೆ ಅವರದು ಮನುಷ್ಯರು, ಸುಸಂಸ್ಕೃತರು, ವಿದ್ಯಾವಂತರು ಮಾತನಾಡುವ ಭಾಷೆನಾ? ಎಂದು ಪ್ರಶ್ನಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ವಾಮ ಮಾರ್ಗದಲ್ಲಿ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಬಿಜೆಪಿಯ ಕೆಲ ನಾಯಕರು ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರ ಮುಖ ರಾಕ್ಷಸನಂತಿದೆ ಎನ್ನುವವರು ಮೊದಲು ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಆಮೇಲೆ ಮಾತನಾಡಲಿ ಎಂದು ಸಲಹೆ ನೀಡಿದ್ದಾರೆ.
