ವರದಿಗಾರ ವಿಶೇಷ

ಲವ್ ಜಿಹಾದ್ ಆರೋಪ : ವ್ಯಕ್ತಿಯೊಬ್ಬನ ಹೃದಯವನ್ನೇ ಕಿತ್ತು ತೆಗೆದ ದುಷ್ಕರ್ಮಿಗಳು ; ವಾಸ್ತವಗಳೇನು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಯಾನಕ ವೀಡಿಯೋದ ಸತ್ಯಾಸತ್ಯತೆ

BOOM ತಂಡದ ಸಹಾಯದಿಂದ ವೀಡಿಯೋ ಜಾಡು ಹಿಡಿದು ಹೊರಟ ‘ವರದಿಗಾರ’

ವರದಿಗಾರ (ಡಿ.12): ಇತ್ತೀಚೆಗೆ ಕರ್ನಾಟಕದ ಹಲವಾರು ವಾಟ್ಸ್ಯಾಪ್ ಗುಂಪುಗಳಲ್ಲಿ ದುಷ್ಕರ್ಮಿಗಳ ಗುಂಪೊಂದು ಓರ್ವನ ಶರೀರದಿಂದ ಹೃದಯವನ್ನು ಕಿತ್ತು ತೆಗೆಯುವ ಭಯಾನಕ ವೀಡಿಯೋ ಒಂದು ವೈರಲ್ ಆಗಿತ್ತು. ವೀಡಿಯೋದೊಂದಿಗೆ ಹಂಚಲಾಗುತ್ತಿದ್ದ ಸಂದೇಶವು, ಆ ವೀಡಿಯೋದಲ್ಲಿದ್ದ ಕೃತ್ಯವು ಭಾರತದ ಹಿಂದುತ್ವವಾದಿ ಸಂಘಟನೆಯಾದ ಆರೆಸ್ಸೆಸ್ ನ ಕಾರ್ಯಕರ್ತರು ‘ಲವ್ ಜಿಹಾದ್’ ಆರೋಪದಲ್ಲಿ ಮುಸ್ಲಿಮ್ ವ್ಯಕ್ತಿಯೋರ್ವನ ಹೃದಯವನ್ನು ಕಿತ್ತು ತೆಗೆಯುವುದೆಂದು ಸೂಚಿಸಲಾಗಿತ್ತು.

ಎರಡು-ಮೂರು ವರ್ಷಗಳ ಹಿಂದೆಯಾಗಿದ್ದಲ್ಲಿ, ಇಂತಹ ಘಟನೆ ಭಾರತದಲ್ಲಿ ಅಸಾಧ್ಯ ಎಂದು ನಿರಾಕರಿಸಬಹುದಿತ್ತು. ಆದರೆ ಪ್ರಸಕ್ತ ಸನ್ನಿವೇಶವನ್ನು ಗಮನಿಸಿದರೆ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಮುಸ್ಲಿಮ್ ಹಾಗೂ ದಲಿತ ವಿರೋಧಿ ಹಿಂಸಾಚಾರದ ಘಟನೆಗಳ ಬಗ್ಗೆ ತಿಳಿದವರಿಗೆ ಒಂದೇ ನೋಟದಲ್ಲಿ ನಿರಾಕರಿಸುವುದು ಅಸಾಧ್ಯ. ವೀಡಿಯೋದಲ್ಲಿದ್ದ ದುಷ್ಕರ್ಮಿಗಳ ಭಾಷೆ ಭಾರತೀಯವಲ್ಲವೆನಿಸಿದರೂ, ಓದುಗರಿಗೆ ನಿಖರ ಮಾಹಿತಿ ನೀಡುವುದಕ್ಕಾಗಿ ಹಾಗೂ ನಮ್ಮನ್ನೆ ಕಾಡುತ್ತಿದ್ದ ಆತಂಕವನ್ನು ನಿವಾರಿಸಲು ನಾವು ವೀಡಿಯೋ ಜಾಡು ಹಿಡಿದು ಹೊರಟೆವು.

ನಮ್ಮ ಪ್ರಾಥಮಿಕ ಪ್ರಯತ್ನದಲ್ಲಿ ಯಾವುದೇ ಪ್ರತಿಫಲ ಸಿಗದಿದ್ದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ವೀಡಿಯೋ, ಫೊಟೋಗಳ ಬಗ್ಗೆ ದಾಖಲೆ ಸಮೇತ ನಿಖರ ಮಾಹಿತಿ ನೀಡುವುದರಲ್ಲಿ ಹೆಸರುವಾಸಿಯಾಗಿರುವ BOOM FactCheck ತಂಡವನ್ನು ಸಂಪರ್ಕಿಸಿದೆವು. ಮರುದಿನವೇ ವೀಡಿಯೋ ಬಗ್ಗೆ ನಿಖರ ಮಾಹಿತಿ ನಮ್ಮ ಮುಂದಿತ್ತು.

ಈ ವೀಡಿಯೋದಲ್ಲಿ ದುಷ್ಕರ್ಮಿಗಳು ಮಾತನಾಡುತ್ತಿರುವ ಭಾಷೆ ‘ಸ್ಪ್ಯಾನಿಷ್’. ಅಧ್ಯಯನದಿಂದ ತಿಳಿದು ಬರುವುದೇನೆಂದರೆ ಈ ವೀಡಿಯೋ 2017ರ ಅಕ್ಟೋಬರ್ ತಿಂಗಳಿಂದ ಇಂಟರ್ ನೆಟ್ ನಲ್ಲಿ ಲಭ್ಯವಿದೆ. ಈ ವೀಡಿಯೋ ಪ್ರಕಟಿಸಿರುವ ಎಲ್ಲಾ ವೆಬ್ ಸೈಟ್ ಗಳ ಪ್ರಕಾರ ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದ್ದು, ಮಾದಕ ದ್ರವ್ಯ ಮಾರಾಟ ಜಾಲದವರಾಗಿದ್ದಾರೆ ಹೃದಯ ಕೀಳುವ ನರಹಂತಕರು. ಮೆಕ್ಸಿಕೋ ದೇಶವು ಮಾದಕ ದ್ರವ್ಯ ಮಾರಾಟ ಜಾಲಗಳ ಹಿಂಸಾಚಾರಕ್ಕೇ ಅರಿಯಲ್ಪಟ್ಟಿದೆ.

ಈ ವೆಬ್ ಸೈಟ್ ಗಳು ಸಂಪೂರ್ಣವಾಗಿ ನಂಬಲರ್ಹವಲ್ಲದಿದ್ದರೂ, ಭಾರತದಲ್ಲಿ ಈ ರೀತಿಯ ಘಟನೆ ನಡೆದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅದೇ ರೀತಿ ವೀಡಿಯೋದಲ್ಲಿ ‘ಸ್ಪ್ಯಾನಿಷ್’ ಭಾಷೆ ಮಾತನಾಡುತ್ತಿರುವ ಕಾರಣ ಅದು ಭಾರತದ್ದಲ್ಲವೆಂದು ಸ್ಪಷ್ಟವಾಗಿ ಹೇಳಬಹುದು.

ಏನಿದ್ದರೂ, ಈ ವೀಡಿಯೋ ಮುಸ್ಲಿಮರು ಹಾಗೂ ಆರೆಸ್ಸೆಸ್ ಗೆ ಸಂಬಂದಪಟ್ಟದ್ದಲ್ಲ.

ಕೃಪೆ: BOOM

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group