ರಾಜ್ಯ ಸುದ್ದಿ

ಬಾಬಾ ಬುಡಾನ್ ಗಿರಿಯಲ್ಲಿ ಗೋರಿ ಹಾನಿ ಯತ್ನ ತಡೆದ ಪೊಲೀಸರಿಗೆ ನಗದು ಪುರಸ್ಕಾರ : ಇದು ‘ಸಿಂಗಂ’ ಅಣ್ಣಾಮಲೈ ಸ್ಟೈಲ್ !

ವರದಿಗಾರ (07.12.2017) :  ಡಿಸಂಬರ್ ಮೂರರಂದು ಬಾಬಾ ಬುಡಾನ್ ಗಿರಿಯ ಪ್ರಮುಖ ಗುಹೆಯ ಸಮೀಪದ ಗೋರಿಗಳಿರುವ ಸ್ಥಳಕ್ಕೆ,  ಅಲ್ಲಿ ಹಾಕಿದ್ದ ತಂತಿಬೇಲಿಗಳನ್ನು ಹರಿದು, ಗೋರಿಗಳನು ನಾಶಪಡಿಸಲು ಪ್ರಯತ್ನಿಸಿದ್ದ ದುಷ್ಕರ್ಮಿಗಳನ್ನು ಸೂಕ್ತ ಸಮಯದಲ್ಲಿ ತಡೆದ ಇಬ್ಬರು ಪೊಲೀಸರಿಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ ಮಾತ್ರವಲ್ಲ ನಗದು ಬಹುಮಾನವನ್ನು ಪೊಲೀಸ್ ವರಿಷ್ಟಾಧಿಕಾರಿ ಅಣ್ಣಾಮಲೈಯವರು ಘೋಷಿಸಿದ್ದಾರೆ. ಆ ಮೂಲಕ ಕಾನೂನು ಮೀರಿ ನಡೆಯುವ ದುಷ್ಕರ್ಮಿಗಳನ್ನು ಹತ್ತಿಕ್ಕುವ ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನವೊಂದನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಮಾಡಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದತ್ತ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದವರಲ್ಲಿ ಕೆಲ ದುಷ್ಕರ್ಮಿಗಳು ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನದ ಭಾಗವಾಗಿ,  ದರ್ಗಾದ ಸಮೀಪವಿರುವ ಗೋರಿಗಳಿರುವ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿ, ಹಾನಿ ಮಾಡಲು ಯತ್ನಿಸಿದ್ದರು. ಆ ವೇಳೆ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಿದ್ದ ಬೆಳಗಾವಿ ಸದಲಗ ಪೊಲೀಸ್ ಠಾಣೆಯ ಸಿಪಿಸಿ ಎಸ್ ಪಿ ಗಲಗಲಿ ಮತ್ತು ಮಡಿಕೇರಿಯ ಶ್ರೀಮಂಗಲ ಪೊಲೀಸ್ ಠಾಣೆಯ ಗುರುದೇವ್ ಪಾವಡೆ ದಯಾಗೊಂಡ ಕೂಡಲೇ ಅಲ್ಲಿದ್ದ ದುಷ್ಕರ್ಮಿಗಳ ಸಂಖ್ಯೆಯನ್ನೂ ಗಣನೆಗೆ ತೆಗೆದುಕೊಳ್ಳದೆ ತಮಗೆ ವಹಿಸಿದ್ದ ಕರ್ತವ್ಯವನ್ನು ದಿಟ್ಟತನದಿಂದ ನಿರ್ವಹಿಸಿ ಅಲ್ಲಿ ಹೆಚ್ಚಿನ ಹಾನಿಯಾಗದಂತೆ ತಡೆದಿದ್ದರು. ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಈ ಇಬ್ಬರು ಪೊಲೀಸರ ಧೈರ್ಯ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸಿಸಿದ್ದು, 10000 ರೂಪಾಯಿ ನಗದು ಪುರಸ್ಕಾರವನ್ನು ಮಂಜೂರು ಮಾಡಲಾಗಿದೆ.

ಇದಲ್ಲದೇ ಅವರಿಗೆ ಉತ್ತಮ ಸೇವಾ ನಮೂದಾತಿಯನ್ನು ನೀಡಲು ಅವರ ಜಿಲ್ಲೆಯ ಪೊಲೀಸ್ ಅಧೀಕ್ಷಕರವರಿಗೆ ಪತ್ರವನ್ನು ಬರೆಯಲಾಗಿದೆ. ಹಾಗೂ ಮಾನ್ಯ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರಿಂದ ‘ಡಿಜಿ ಕಮಂಡೇಷನ್ ಪತ್ರ’ಕ್ಕೂ ಸಹ ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group