ರಾಜ್ಯ ಸುದ್ದಿ

ದೇಶವನ್ನೇ ವಿಭಜಿಸಿದ 10 ಪೈಸೆಯ ಜನಿವಾರ: ನಿಜಗುಣಾನಂದ ಸ್ವಾಮೀಜಿ

ವರದಿಗಾರ (07.12.2017): ನಾವು ದೇವಸ್ಥಾನದ ಒಳಗೆ ಹೋಗುವಾಗ  ದಾರ (ಜನಿವಾರ) ಹಾಕಿಕೊಂಡಿದ್ದೇವೆಯೋ ಇಲ್ಲವೋ ಎನ್ನುವುದನ್ನು ನೋಡಲು ಅಂಗಿ ಬಿಚ್ಚಿಸುತ್ತೀರಿ, 10 ಪೈಸೆ ಕಿಮ್ಮತ್ತಿನ ದಾರವು ದೇಶವನ್ನೇ ವಿಭಜನೆ ಮಾಡಿದೆ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಆರೋಪಿಸಿದರು.

ಈ ಜನಿವಾರವೆಂಬ ದಾರದಿಂದ ನೇಣು ಹಾಕಿಕೊಂಡರೆ ಪ್ರಾಣ ಹೋಗುವುದಿಲ್ಲ. ಆದರೆ, ಬೇರೆಯವರ ಪ್ರಾಣ ತೆಗೆಯಬಹುದು ಎಂದು  ಹೇಳುತ್ತಾ, ಆ ದಾರವನ್ನು ಬಿಸಾಕಿಯೇ ನಾವು ಇಲ್ಲಿಗೆ ಬಂದಿರುವುದಾಗಿ ಹೇಳಿದ್ದಾರೆ.

ಅವರು ಬೆಳಗಾವಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸದಾಶಿವನಗರದಲ್ಲಿ ಬುಧವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಇತ್ತೀಚೆಗೆ ಉಡುಪಿಯಲ್ಲಿ ನಡೆದಿರುವ ‘ಧರ್ಮ ಸಂಸದ್’  ದೇಶ ರಕ್ಷಣೆಗಾಗಿ ನಡೆದದ್ದಲ್ಲ, ಚಾತುರ್ವರ್ಣ, ವೈದಿಕಶಾಹಿಯ ರಕ್ಷಣೆಗೆ ನಡೆದ ಸಂಸದ್ ಆಗಿದೆ. ಈ ಸಭೆಯಲ್ಲಿ ಮಠಾಧೀಶರೊಬ್ಬರು ಸಂವಿಧಾನ ಬದಲಾಯಿಸಬೇಕೆಂದು ಹೇಳಿಕೆ ನೀಡಿದ್ದಾರೆ. ನಮಗೆ ಅಂಬೇಡ್ಕರ್‌ ರಚಿಸಿದ ಸಂವಿಧಾನ ಬೇಕು, ನಾಗ್ಪುರದಲ್ಲಿರುವ ಆರೆಸ್ಸೆಸ್ಸಿ ನ ಕೇಂದ್ರ ಸ್ಥಾನದ ಸಂವಿಧಾನ ಬೇಡವೆಂದು ಮಠಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಮಠಾಧೀಶರು ಅಸ್ಪೃಶ್ಯತೆಯನ್ನು ಹೋಗಲಾಡಿಸುವಂತೆ ಕರೆ ನೀಡಿದ್ದಾರೆ. ಅಸ್ಪೃಶ್ಯತೆ ಇದೆ ಎನ್ನುವುದು ಇವರಿಗೆ 21ನೇ ಶತಮಾನದಲ್ಲಿಯಾದರೂ ಅರಿವಿಗೆ ಬಂತಲ್ಲ?’ ಎಂದು ವ್ಯಂಗ್ಯವಾಡುತ್ತಾ, ‘ಸಮಾನತೆ ಬರಬೇಕಾದರೆ ಬನ್ನಿ; ದಲಿತರ ಪಾದ ಪೂಜೆ ಮಾಡಿ. ಶೌಚಾಲಯಕ್ಕೆ ನೀರು ಹಾಕಿ. ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಿ. ತಲೆಯ ಮೇಲೆ ಮಲ ಹೊತ್ತುಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ.

ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ,ಹೋರಾಟಗಾರ್ತಿ ಕೆ.ನೀಲಾ,ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ ಹಾಗೂ ಶರಣ ಬಸವ ಸ್ವಾಮೀಜಿ ,ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌, ವಿಲ್ಫ್ರೆಡ್‌ ಡಿಸೋಜಾ ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group