ರಾಜ್ಯ ಸುದ್ದಿ

ಹಿಂದುತ್ವದ ಹೆಸರಿನಲ್ಲಿ ಮೌಢ್ಯ ಬಿತ್ತಲು ಹೊರಟವರಿಗೆ ಅಂಬೇಡ್ಕರ್ ರ ವಿಚಾರಧಾರೆಗಳಿಂದ ಉತ್ತರ ನೀಡಬೇಕು: ಪ್ರಕಾಶ್ ರೈ

ವರದಿಗಾರ (07.12.2017): ಇಷ್ಟು ದಿನಗಳ ಕಾಲ ಬಡತನ, ಅನಕ್ಷರತೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮೌಢ್ಯವನ್ನು ಬಿತ್ತಲಾಗಿತ್ತು. ಆದರೆ, ಪ್ರಸ್ತುತ ರಾಷ್ಟ್ರೀಯತೆ ಹಾಗೂ ಹಿಂದುತ್ವದ ಹೆಸರಿನಲ್ಲಿ ಮೌಢ್ಯವನ್ನು ಬಿತ್ತಲು ಹೊರಟಿದ್ದಾರೆ. ವೈವಿಧ್ಯದ ಸಮಾಜವನ್ನು ತುಳಿದು, ಒಂದು ಧರ್ಮದ ಸಮಾಜವನ್ನು ಕಟ್ಟಲು ಹೊರಟಿದ್ದಾರೆ. ನಮ್ಮ ಮುಗ್ಧತೆಯನ್ನು ಬಳಸಿಕೊಂಡು ಇವರು ಹತ್ತಾರು ಸುಳ್ಳು ಹೇಳುತ್ತಾರೆ. ಅದರ ಮೂಲಕ ಮೌಢ್ಯವನ್ನು ಬೆಳೆಸುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಅನುಸರಿಸುವ ಮೂಲಕ ಇವರಿಗೆ ಉತ್ತರ ನೀಡಬೇಕಾಗಿದೆ. ಅಂಬೇಡ್ಕರ್‌ ಅವರ ಚಿಂತನೆಗಳನ್ನು ರಕ್ತಬೀಜಾಸುರನ ರೀತಿಯಲ್ಲಿ ಲಕ್ಷಾಂತರ ಜನರು ಅಳವಡಿಸಿಕೊಳ್ಳಬೇಕಾಗಿದೆ ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

ಅವರು ಬೆಳಗಾವಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸದಾಶಿವನಗರದಲ್ಲಿ ಬುಧವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡುತ್ತಿದ್ದರು.

ರಾಷ್ಟ್ರೀಯತೆ ಮತ್ತು ಹಿಂದುತ್ವ ಎರಡೂ ಒಂದೇ ಎನ್ನುವ ಮೌಢ್ಯವನ್ನು ಬೆಳೆಸಲು ಕೇಂದ್ರ ಸಚಿವರೊಬ್ಬರು ಯತ್ನಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಸಮಾಜವನ್ನು ಒಡೆಯುವಂತಹ ಹೇಳಿಕೆ ನೀಡುತ್ತಿರುವ ಅನಂತ್ ಕುಮಾರ್ ಹೆಗಡೆಯವರಿಗೆ ಚಾಟಿ ಬೀಸಿದ್ದಾರೆ.

ಮುಕ್ತವಾಗಿ ನಾನು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದನ್ನು ಸಹಿಸದ ಕೆಲವು ಶಕ್ತಿಗಳು ನನಗೆ ಬೆದರಿಕೆಯೊಡ್ಡುತ್ತಿದ್ದಾರೆ ಮತ್ತು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ನಾನು ಜನರ ಮಧ್ಯದಲ್ಲಿರುವುದರಿಂದ ನನಗೇನೂ ಮಾಡಲಿಕ್ಕಾಗದು. ಅವರು ಕಳ್ಳರು, ಅಂಜು ಬುರುಕರು, ಹೇಡಿಗಳು ಎಂದು ವಿಚಾರಧಾರೆಗಳನ್ನು ಎದುರಿಸಲು ಸಾಧ್ಯವಾಗದೇ ಇರುವವರ ವಿರುದ್ಧ ಪ್ರಕಾಶ್ ರೈ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group