ಸಾಮಾಜಿಕ ತಾಣ

ರಾಜ್ಯದ ಯುವಕರು ಮನಸ್ಸು ಮಾಡಿದ್ರೆ ಚನ್ನಣವರ್ ಸಂಸದರಾಗ್ತಾರೆ, ಆದರೆ ನಿಮಗೆ ಐ ಪಿ ಎಸ್ ಪಾಸ್ ಮಾಡೋಕೆ ಸಾಧ್ಯಾನಾ? ಸಂಸದ ಪ್ರತಾಪ್ ಸಿಂಹರಿಗೆ ಯುವಕನೊಬ್ಬನ ಸವಾಲು !

“ಧರ್ಮ ಮುಖ್ಯವಾಗಿದ್ದರೆ ದಯವಿಟ್ಟು ಯಾವುದಾದರೂ ಮಠ-ಮಂದಿರಗಳಿಗೆ ಸೇರಿಕೊಳ್ಳಿ”

ವರದಿಗಾರ (05.12.2017) :  ತುಮಕೂರು:  ಪೊಲೀಸ್ ಅಧಿಕಾರಿಯಾಗಿರುವ ರವಿ ಡಿ ಚೆನ್ನಣ್ಣನವರ್ ರವರ ಬಗ್ಗೆ ಲಘುವಾಗಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹರವರಿಗೆ ಜನ ಸಾಮಾನ್ಯರೊಬ್ಬರು ಬಹಿರಂಗ ಸವಾಲು ಹಾಕಿರುವ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಹನುಮ ಜಯಂತಿಯ ನೆಪದಲ್ಲಿ ಹುಣಸೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪೊಲೀಸ್ ಇಲಾಖೆ ಅನುಮತಿ ನೀಡದ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದ್ದ ಸಂಸದ  ಪ್ರತಾಪ್ ಸಿಂಹ ರವರು ಸಾಗುತ್ತಿದ್ದಾಗ ಹುಣುಸೂರಿನಲ್ಲಿ ಪೊಲೀಸರು ತಡೆದಿದ್ದರು. ಇದನ್ನು ಲೆಕ್ಕಿಸದೆ ಪೊಲೀಸ್ ಬ್ಯಾರಿಕೇಡ್ ಗಳನ್ನು ತನ್ನ ಕಾರಿನ ಮೂಲಕ ಉರುಳಿಸಿಕೊಂಡು, ಅಲ್ಲಿದ್ದ ಮಹಿಳಾ ಪೊಲೀಸ್ ರವರ ಪ್ರಾಣಕ್ಕೆ ಹಾನಿಯಾಗುವ ಸಂಭವವಿದ್ದ ರೀತಿಯಲ್ಲಿ ಕಾರು ಚಲಾಯಿಸಿ ದರ್ಪ ತೋರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಪ್ರತಾಪ್ ಸಿಂಹ ರವರನ್ನು ಬಂಧಿಸಲಾಗಿ, ನಂತರ ಬಿಡುಗಡೆ ಮಾಡಲಾಗಿತ್ತು.

ಈ ಸಂಬಂಧವಾಗಿ ಸಂಸದ ಪ್ರತಾಪ್ ರವರು “ನೀವು ಆಳುವ ವರ್ಗದ ಆಳು, ದಕ್ಷ ಪೊಲೀಸ್ ಅಧಿಕಾರಿಗಳಾಗಿರುವ ಡಿ ರೂಪಾ ಮತ್ತು ಅಣ್ಣಾಮಲೈ ರವರಿಂದ ಬಹಳಷ್ಟು ಕಲಿಯಲಿಕ್ಕಿದೆ” ಎಂದು ದಕ್ಷ ಪೊಲೀಸ್ ಅಧಿಕಾರಿಯಾಗಿರುವ ರವಿ ಡಿ ಚನ್ನಣವರ್ ರವರನ್ನು  ಹೀಯಾಳಿಸಿದ್ದರು. ನಂತರ ಇದಕ್ಕೆ ರವಿ ಡಿ ಚನ್ನಣವರ್ ರವರು “ಸಂಸದರ ಬಗ್ಗೆ ನನಗೆ ಗೌರವವಿದೆ, ಕಾನೂನಿನಡಿಯಲ್ಲಿ ನನಗೆ ಎಲ್ಲರೂ ಸಮಾನರು. ದೇಶದ ಸಂವಿಧಾನವೇ ನನಗೆ ಶ್ರೇಷ್ಠ. ಒಬ್ಬ ಪೊಲೀಸ್ ಪೇದೆಯಿಂದಲೂ ನನಗೆ ಕಲಿಯಲಿಕ್ಕಿದೆ” ಎಂದು ಉತ್ತರಿಸಿದ್ದರು.

ಈ ಬಗ್ಗೆ ತನ್ನ ಫೇಸ್ಬುಕ್ ಖಾತೆಯಲ್ಲಿ ತುಮಕೂರಿನ ನವ ಭಾರತ್ ಯುವ ಬ್ರಿಗೇಡ್ ಅಧ್ಯಕ್ಷ ಎಂದು ಬರೆದುಕೊಂಡಿರುವ ದರ್ಶನ್ ಹೆಚ್.ಡಿ ಎಂಬವರು, ಲೈವ್ ವಿಡಿಯೋ ಮೂಲಕ ಮಾತನಾಡುತ್ತಾ, ಸಂಸದರ ಬಗ್ಗೆ ಅಪಾರ ಗೌರವಿತ್ತು. ಆದರೆ ನಿನ್ನೆ ಅವರು ಮಾಡಿರುವ ಕೆಲಸದಿಂದಾಗಿ ಮೂರು ಕಾಸಿನ ಬೆಲೆಯೂ ಕೊಡಲ್ಲ. ಅವರನ್ನು ರೌಡಿ ಪ್ರತಾಪ್ ಸಿಂಹ ಎಂದು ಕರೆಯುವುದೇ ಸೂಕ್ತ. ಇದೇ ರವಿ ಡಿ ಚೆನ್ನಣ್ಣನವರ್ ರವರು 224 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಕೂಡಾ ಶಾಸಕರಾಗುತ್ತಾರೆ ಅಥವಾ ಸಂಸದರಾಗುತ್ತಾರೆ. ನಿಮಗೆ ನಿಮ್ಮ ತಂದೆ ತಾಯಿ ಸಿಂಹ ಎಂತ ಹೆಸರಿಟ್ಟಿರ ಬಹುದು. ಆದರೆ ರವಿ ಸರ್ ರವರಿಗೆ ಜನರು ನೀಡಿರುವ ಪ್ರೀತಿಯ ಬಿರುದು “ಸಿಂಗಂ”. ನನ್ನಂತಹ ಲಕ್ಷಾಂತರ ಯುವಕರಿಗೆ ರವಿ ಸರ್ ರವರು ಸ್ಪೂರ್ತಿ. ನಮ್ಮ ಹಿಂದೂ ಧರ್ಮ ಕಟ್ಟೋಕೆ ನಿಮ್ಮಂತಹ ನಾಯಕರ ಅವಶ್ಯಕತೆ ಇಲ್ಲ. ನೀವು ಹೇಳಿದ ಹಾಗೇ ಧರ್ಮ ರಕ್ಷಣೆಯೆ ನಿಮಗೆ ಮುಖ್ಯವಾಗಿದ್ದರೆ, ರಾಜಿನಾಮೆ ಕೊಟ್ಟು ಯಾವುದಾದರೂ ಮಂದಿರ, ಮಠ ನೋಡ್ಕೊಳ್ಳಿ. ಮೋದಿಯವರು ಹಲವು ಉದ್ಯೋಗ ಕೊಡ್ತೀನಿ ಅಂತ ಹೇಳಿ ಭರವಸೆ ಮೂಡಿಸಿದ್ದರು. ಎಲ್ಲಿದೆ ಉದ್ಯೋಗ ಎಂದು ಹೋಗಿ ಸಂಸತ್ ನಲ್ಲಿ ಕೇಳಿ. ಊರಿನಲ್ಲಿ ಧರ್ಮದ ಹೆಸರಿನಲ್ಲಿ ಗಲಭೆ ಎಬ್ಬಿಸಿ ಅಧಿಕಾರ ಹಿಡಿಯುತ್ತೀರಿ ಎಂದು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ. ರವಿ ಸರ್ ರವರ ಉಸಿರಲ್ಲೇ ಹಿಂದೂತನವಿದೆ. ಅವರಿಗೆ ನಿಮ್ಮ ಹಿಂದುತ್ವದ ಪಾಠ ಬೇಕಾಗಿಲ್ಲ. ಅವರ ಮನಸ್ಸು ಮಾಡಿದರೆ ನಾಳೆ ಸಂಸದರಾಗುತ್ತಾರೆ. ಆದರೆ ನೀವು ತಿಪ್ಪರಲಾಗ ಹಾಕಿದರೂ ಐಪಿಎಸ್ ಆಗೋಕೆ ಸಾಧ್ಯವಿಲ್ಲ. ಕನಿಷ್ಟ ಪೊಲೀಸ್ ಪೇದೆ ಆಗೋಕೂ ನಿಮ್ಮಿಂದ ಸಾಧ್ಯವಿಲ್ಲ. ನಮ್ಮ ಗೆಳೆಯರೊಬ್ಬರು ಹೇಳಿದ ಮಾತು, ನಮ್ಮ ಕಣ್ಣು ಕಟ್ಟಿಹೋಗಿತ್ತು, ಮೋದಿ ಮೋದಿ ಅಂತ ಜಪ ಮಾಡ್ಕೊಂಡು ಈ ಮೂರ್ಖನಿಗೆ ಓಟು ಹಾಕಿದ್ದೇವೆ ಎಂದು ಗೆಳೆಯ ಹೇಳಿದರು. ಎಲ್ಲ ಹುಡುಗರನ್ನು ಗುಂಪುಗೂಡಿಸಿ ಧರ್ಮಾಂಧತೆಯನ್ನು ತುಂಬಿ ಹೋರಾಟ ಮಾಡಿ ಅಂತ ಹೇಳಿ, ಆ ಹುಡುಗರೆಲ್ಲಾ ಜೈಲಿಗೆ ಹೊಗಿ ಕೂತಿದ್ದಾರೆ, ಇವರು ಮಾತ್ರ ಇಡೀ ದಿನ ಫೇಸ್ಬುಕ್, ಟ್ವಿಟರ್ ನಲ್ಲಿ ಮುಳುಗಿದ್ದಾರೆ. ನೀವೊಬ್ಬ ಸಮಯ ಸಾಧಕ ಮಾತ್ರ ಆಗಿದ್ದೀರಿ. ಅದಕ್ಕೆ ಧರ್ಮದ ಬಣ್ಣ ಹಚ್ಚಿದ್ದೀರಿ. ಕರ್ನಾಟಕವನ್ನು ಗುಜರಾತ್ ಮಾಡಲು ನೋಡಬೇಡಿ. ಹಿಂದು ಮುಸ್ಲಿಂ ಕ್ರೈಸ್ತರನ್ನು ಒಟ್ಟುಗೂಡಿಸಿ ಅಧಿಕಾರ ನಡೆಸಿ. ನಿಮಗೆ ಒಂದಷ್ಟು ಹುಡುಗರು ಬೆಂಬಲಕ್ಕಿರಬಹುದು. ಆದರೆ ನಮ್ಮಂತಹ ಲಕ್ಷಾಂತರ ಯುವಕರು ರವಿ ಸರ್ ರವರ ಬೆಂಬಲಕ್ಕಿದ್ದಾರೆ. ಪ್ರತಾಪ್ ರವರೇ ನಿಮ್ಮ ಕಪಿಚೇಷ್ಟೆ ಬಿಟ್ಟು ಸಂಸತ್ ನಲ್ಲಿ ನಮ್ಮ ಯುವಕರಿಗೆ ಉದ್ಯೋಗ ಕೊಡಿಸಲು ಹೋರಾಟ ಮಾಡಿ, ಕಾವೇರಿ, ಮಹದಾಯಿ ಬಗ್ಗೆ ಹೋರಾಟ ಮಾಡಿ, ರೈತರ ಸಾಲ ಮನ್ನಾ ಬಗ್ಗೆ ಹೋರಾಟ ಮಾಡಿ.

ನಿನ್ನೆ ನಮ್ಮ ಪತ್ರಕರ್ತ ಗೆಳೆಯ ವಾಗೀಶ್ ಎಂಬವರಿಗೆ ಸಾಯೋ ತನಕ ಹೋಡೆದಾಗ, ಮಾಧ್ಯಮ ರಂಗದಿಂದಲೇ ಬಂದ ನೀವು ಹಾಗೂ ತೇಜಸ್ವಿನಿಯವರು ಒಂದು ಮಾತನ್ನೂ ಆಡಿಲ್ಲ. ನಿಮ್ಮ ಪತ್ರಿಕಾ ಧರ್ಮ ಎಲ್ಲಿ ಅಡಗಿತ್ತು? ನೀವು ಮಾಡುವ ಪ್ರತಿ ಕೆಲಸಾನೂ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎಸ್ಪಿ ಅಥವಾ ಡಿಸಿಯವರು ನಿಮ್ಮ ಮನೆಯ ಗುಲಾಮರಲ್ಲ. ಅವರ ಜ್ಞಾನಕ್ಕೂ ನೀವು ಸೃಷ್ಟಿಸಿರುವ ಸುಳ್ಳು ಇತಿಹಾಸಕ್ಕೆ ಹೋಲಿಸಿದರೆ ನೀವು ನಗಣ್ಯ. ಇನ್ನಾದರೂ ಸ್ವಲ್ಪ ಜವಾಬ್ದಾರಿಯಿಂದ ಇರುವುದನ್ನು ಕಲಿತುಕೊಳ್ಳಿ. ಇಲ್ಲಾಂದ್ರೆ ನಿಮ್ಮ ವಿರುದ್ಧ ಹೋರಾಟವನ್ನು ನಾವು ಹಿಂದೂ ಧರ್ಮದವರೇ ಶುರು ಮಾಡ್ತೇವೆ. ಧರ್ಮಾಂಧತೆಯ ಅಮಲೇರಿಸಿ ಜೈಲುಪಾಲಾಗಿರುವ ಯುವಕರ ತಂದೆತಾಯಿಗಳು ಕಣ್ಣೀರು ಹಾಕುತ್ತಿದ್ದಾರೆ. ಆ ತಂದೆತಾಯಿಗಳ ಶಾಪ ನಿಮಗೆ ತಟ್ಟದಿರದು. ಅನಂತ್ ಕುಮಾರ್ ಹೆಗ್ಡೆ, ಶೋಭಾ ಕರಂದ್ಲಾಜೆಯವರೇ,  ಧರ್ಮ ಧರ್ಮಗಳನ್ನು ಕಚ್ಚಾಡಿಸುವುದನ್ನು ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಿ. ಯಡಿಯೂರಪ್ಪನವರೇ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಮತ್ತು ಅನಂತ್ ಕುಮಾರ್ ಹೆಗ್ಡೆ ಈ ಮೂವರೇ ಸಾಕು ಬಿಜೆಪಿಯ ಹಡಗು ಮುಳುಗಿಸಲು ಎಚ್ಚರಿಕೆ. ಪ್ರತಾಪ್ ಸಿಂಹ ರವರೇ ನಿಮ್ಮನ್ನು ಚುನಾವಣೆಯಲ್ಲಿ ಸೋಲಿಸಲು ಎಲ್ಲಾ ಧರ್ಮದವರನ್ನು ಒಗ್ಗೂಡಿಸಿ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ನನ್ನಂತಹ ಸಾಮಾನ್ಯ ವ್ಯಕ್ತಿಯೇ ಸಾಕು ಎಂದು ತನ್ನ ವೀಡಿಯೋದಲ್ಲಿ ದರ್ಶನ್ ರವರು ಹೇಳಿಕೊಂಡಿದ್ದಾರೆ.

 

1 Comment

1 Comment

  1. cash online

    December 20, 2017 at 1:17 pm

    Very good post! We are linking to this great post on our
    site. Keep up the good writing.

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group