ರಾಷ್ಟ್ರೀಯ ಸುದ್ದಿ

ಗುಜರಾತ್ : ಆತಂಕ ಮೂಡಿಸಿದ ಮನೆಗಳ ಮೇಲಿನ ‘ಕೆಂಪು ಗುರುತು’ ಚಿಹ್ನೆ ; ತನಿಖೆಗೆ ಆದೇಶ !

ವರದಿಗಾರ : 2002 ರ ದಂಗೆಯ ಕರಾಳ ನೆನಪು ಮಾಸುವ ಮುನ್ನವೇ ಗುಜರಾತಿನ ಅಹ್ಮದಾಬಾದಿನ ಕೆಲವೊಂದು ಮನೆಗಳ ಹೊರಭಾಗದಲ್ಲಿ ಕೆಂಪು ಬಣ್ಣದಲ್ಲಿ ‘X’  ಗುರುತು ಹಾಕಿದ ಘಟನೆ ವರದಿಯಾಗಿದ್ದು, ನಿವಾಸಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮುಸ್ಲಿಮರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಅಹ್ಮದಾಬಾದ್ ನಗರಪಾಲಿಕೆ ಅಧಿಕಾರಿಗಳೇ ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದು ಜನರ ಆತಂಕ ಇಮ್ಮಡಿಯಾಗಲು ಕಾರಣವಾಗಿದೆ. ಅಹ್ಮದಾಬಾದ್ ಪೊಲೀಸ್ ಕಮಿಷನರ್ ಘಟನೆಯ ಸತ್ಯಾಸತ್ಯತೆ ಬಯಲಾಗಲು ತನಿಖೆಗೆ ಆದೇಶಿಸಿದ್ದಾರೆ. ಸಾರ್ವಜನಿಕರೂ ಕೂಡಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆನ್ನಲಾಗಿದೆ.

 

ಅಹ್ಮದಾಬಾದ್ ನಗರಪಾಲಿಕೆಯ ಪಾಲ್ಡಿ ಪ್ರದೇಶದ ಕೆಲವೊಂದು ಮನೆಗಳ ಹೊರಗಡೆ ಈ ಗುರುತುಗಳು ಹೆಚ್ಚಾಗಿ ಕಂಡು ಬಂದಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಉಪ ಆರೋಗ್ಯಾಧಿಕಾರಿ ಚಿರಾಗ್ ಶಾ, ನಾವು ಜಿಪಿಎಸ್ ಮುಖಾಂತರ ಗುರುತಿಸಲಾದ ಕೆಲವೊಂದು ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸುತ್ತೇವೆ. ನಮ್ಮ ಡ್ರೈವರ್’ಗಳಲ್ಲಿ ಒಬ್ಬ ತನ್ನ ಪ್ರದೇಶವಾದ ಪಾಲ್ಡಿಯಲ್ಲಿ ನಿಖರವಾಗಿ ತನ್ನ ತ್ಯಾಜ್ಯ ಸಂಗ್ರಹ ಸ್ಥಳದ ಗುರುತಿಸುವಿಕೆಗಾಗಿ 20 ಕಡೆಗಳಲ್ಲಿ ಈ  ಗುರುತು ಹಾಕಿದ್ದಾನೆ ಎಂದಿದ್ದಾರೆ.  ಆದರೆ ಈ ಪ್ರಕ್ರಿಯೆಯು ಜನರ ಮಧ್ಯೆ ಆತಂಕಕ್ಕೆ ಕಾರಣವಾದ ಕೂಡಲೇ ಅವುಗಳ ಮೇಲೆ ಬಿಳಿ ಬಣ್ಣ ಬಳಿದು ಅಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಆದರೆ ಅಹ್ಮದಾಬಾದ್ ನಗರಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ನಿರ್ದೇಶಕರಾಗಿರುವ ಹರ್ಶದ್ ಸೋಲಂಕಿ ಇದನ್ನು ನಿರಾಕರಿಸಿದ್ದು, ನನಗೆ ಇದರ ಮಾಹಿತಿ ಇಲ್ಲ. ಆದರೆ ನಗರಪಾಲಿಕೆಯ ವತಿಯಿಂದ ಈ ತರಹ ಮನೆಗಳನ್ನು ಗುರುತಿಸುವ ಪ್ರಕ್ರಿಯೆ ಇಲ್ಲವೆಂದು ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರೆ.

ಮುಸ್ಲಿಮರ ಆತಂಕ್ಕಕ್ಕೆ ಕಾರಣಗಳೂ ಇಲ್ಲದಿಲ್ಲ. ಏಕೆಂದರೆ ಮುಸ್ಲಿಮರ ಮನೆಗಳ ಮೇಲೆ ಈ ಗುರುತುಗಳನ್ನು ಹಾಕಲಾಗಿರುವ ಪಾಲ್ಡಿ ಪ್ರದೇಶದ ಕೇವಲ ಒಂದು ಕಿ ಮೀ ದೂರದ ಮಹಾಲಕ್ಷ್ಮಿ ವೃತ್ತದಲ್ಲಿ “ಪಾಲ್ಡಿಯನ್ನು ಜುಹಾಪುರವನ್ನಾಗಿ ಮಾಡಲು ಬಿಡಬೇಡಿ” ಎನ್ನುವ ಫ್ಲೆಕ್ಸ್ ಒಂದು ನೇತು ಹಾಕಲಾಗಿತ್ತು. ಅದರ ಮೂರು ದಿನಗಳ ತರುವಾಯ ಈ ಗುರುತು ಹಾಕಿರುವ ಘಟನೆಗಳು ವರದಿಯಾಗಿದೆ ಎನ್ನಲಾಗಿದೆ. ಜುಹಾಪುರ ಅಹ್ಮದಾಬಾದಿನ ಪಕ್ಕದಲ್ಲೇ ಇರುವ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದು, ಭಾರತದ ಅತಿ ದೊಡ್ಡ ಮುಸ್ಲಿಮರು ವಾಸಿಸುವ  ಪ್ರದೇಶವೆಂದೇ ಖ್ಯಾತಿ ಪಡೆದಿದೆ.

ಗುಜರಾತಿನ ಚುನಾವಣೆಯನ್ನು ಗೆಲ್ಲಲು ಹರ ಸಾಹಸ ಪಡುತ್ತಿರುವ ಬಿಜೆಪಿಗರು, ಯಾವ ತಂತ್ರ ಪ್ರಯೋಗಕ್ಕೂ ಹೇಸಲಾರರೆಂಬ ಬಲವಾದ ಸಂಶಯವೇ ಈ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶದ ಹಿಂದೂ-ಮುಸ್ಲಿಮರು ಅನ್ಯೋನ್ಯತೆಯಿಂದ ಇರುವರಾದರೂ, 2002 ದ ಗಲಭೆಯಲ್ಲಿ ಹೊರಗಿನಿಂದ ಬಂದವರು ಇಲ್ಲಿ ದಂಗೆ ನಡೆಸಿದರೆಂದು ಅದೇ ಪ್ರದೇಶದ  ಝಫರ್ ಸರೇಶ್’ವಾಲಾ ಹೇಳುತ್ತಾರೆ.  ಇದೇ ಪ್ರದೇಶದ ಡಿಲೈಟ್ ಸೊಸೈಟಿಗೆ ದಂಗೆಕೋರರು ದಾಳಿ ಮಾಡಿದಾಗ, ಅಲ್ಲಿನ ನಿವಾಸಿಯಾಗಿದ್ದ ಡಾ. ಯೂನುಸು ಭಾವ್ನಗರಿಯವರು ಆತ್ಮರಕ್ಷಣೆಗಾಗಿ ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿ ದಂಗೆಕೋರನೊಬ್ಬನನ್ನು ಕೊಂದು ಹಾಕಿದ್ದರು. ಇದರಿಂದಾಗಿ ಇಲ್ಲಿ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿ ಹೋಗಿತ್ತು. ಇದಕ್ಕಾಗಿ ಅವರು ಮೂರು ತಿಂಗಳುಗಳ ಕಾಲ ಜೈಲಿನಲ್ಲಿದ್ದು ಬಿಡುಗಡೆಯಾಗಿದ್ದರು. ಈ ಘಟನೆಯನ್ನು ಡಿಲೈಟ್ ಸೊಸೈಟಿಯ ನಿವಾಸಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಇದೀಗ ಗುರುತು ಹಾಕಲಾಗಿರುವ ಮನೆಗಳಲ್ಲಿ ಡಿಲೈಟ್ ಸೊಸೈಟಿ ಕೂಡಾ ಸೇರಿದೆ ಎಂಬುವುದು ಇಲ್ಲಿ ಗಮನಾರ್ಹವಾಗಿದೆ

ಒಟ್ಟಿನಲ್ಲಿ ನಗರಪಾಲಿಕೆಯ ಅಧಿಕಾರಿಗಳ ವ್ಯತಿರಿಕ್ತ ಹೇಳಿಕೆಗಳ ನಡುವೆಯೂ ಪೊಲೀಸ್ ಕಮಿಷನರ್ ಎ ಕ್ ಸಿಂಗ್ ಅವರು, ವಿಶೇಷ ಕಮಿಷನರ್ ಆಗಿರುವ ಕೆ ಎಲ್ ಎನ್ ರಾವ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.

 

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group