ಜ್ವರಕ್ಕೆಂದು ನೀಡಿದ ಚುಚ್ಚು ಮದ್ದಿನಿಂದ ಯುವತಿಯ ಸಾವು: ಕ್ಲಿನಿಕ್ ಬೋರ್ಡ್ ಕಿತ್ತು ಹಾಕಿ ವೈದ್ಯ ಪರಾರಿ

ವರದಿಗಾರ: ಜ್ವರದಿಂದ ಬಳಲುತ್ತಿದ್ದಕ್ಕೆ  ವೈದ್ಯರು ನೀಡಿದ ಚುಚ್ಚುಮದ್ದಿನ ಪರಿಣಾಮ ವಿದ್ಯಾರ್ಥಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನಲ್ಲಿ ವರದಿಯಾಗಿದೆ.

ಹಂಪಾಪುರ ಹೋಬಳಿಯ ಕಾಳಹುಂಡಿ ಗ್ರಾಮದ ನಿವಾಸಿ ಅಂಕುಶ (21) ಮೃತಪಟ್ಟ ಯುವತಿ. ಅಂಕುಶ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿ.ಎಸ್ಸಿ ಮುಗಿಸಿದ್ದು, ಡಿಎಡ್ ಸೇರಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಅಂಕುಶಗೆ ಇತ್ತೀಚೆಗೆ ಜ್ವರ ಕಾಣಿಸಿಕೊಂಡಿದ್ದು, ಹಂಪಾಪುರದಲ್ಲಿರುವ ಡಾ.ರಾಜು ಎಂಬವರ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಡಾ.ರಾಜು ಎಂಬಾತ ಅಂಕುಶ ಅವರಿಗೆ ತೊಡೆಗೆ ಚುಚ್ಚುಮದ್ದು ನೀಡಿದ್ದು, ಈ ವೇಳೆ ಆ ಜಾಗದಲ್ಲಿ ಊತ ಕಾಣಿಸಿಕೊಂಡಿದೆ. ತಕ್ಷಣವೇ ಅಂಕುಶ ರಾಜು ಅವರ ಬಳಿ ತೆರಳಿ ತೋರಿಸಿದಾಗ ಸೋಂಕಿನಿಂದ ಊತ ಕಾಣಿಸಿಕೊಂಡಿರಬಹುದೆಂದು ಹೇಳಿದ್ದು ಯಾವುದೇ ತೊಂದರೆಯಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

ಆದರೆ ಮರುದಿನ ನೋವು ಹೆಚ್ಚಾಗಿ ಕೀವು ತುಂಬಿಕೊಂಡಿದೆ. ಪುನಃ ಅಂಕುಖ ವೈದ್ಯರ ಬಳಿ ಹೋದಾಗ ಆತನೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾನೆ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಆಕೆಯನ್ನು ಅಪೋಲೋ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅಂಕುಶ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ಡಾ.ರಾಜು, ತನ್ನ ಕ್ಲಿನಿಕ್ ಬೋರ್ಡ್ ನ್ನು ಕಿತ್ತು ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!
%d bloggers like this:
Inline
Inline