ರಾಜ್ಯ ಸುದ್ದಿ

ನನಗೆ ಮಾತನಾಡುವುದಕ್ಕೆ ಹೆದರಿಕೆಯಾಗುತ್ತದೆ: ನಟ ಪ್ರಕಾಶ್ ರೈ ಆತಂಕ

ವರದಿಗಾರ:ನನಗೆ ಮಾತನಾಡುವುದಕ್ಕೆ ಹೆದರಿಕೆಯಾಗುತ್ತದೆ. ಹಿಂದೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆಡಳಿತಗಾರರಿಗೆ ಅಧಿಕಾರ ದಾಹವಷ್ಟೇ ಇತ್ತು. ಆದರೆ, ಈಗಿನಂತೆ ಧರ್ಮ, ಜಾತಿ ಹೆಸರಿನಲ್ಲಿ ವೈಯಕ್ತಿಕ ಹಲ್ಲೆ ನಡೆಯುತ್ತಿರಲಿಲ್ಲ. ಮಾತನಾಡುವುದಕ್ಕೆ ಸಾಧ್ಯವಾಗದ ನೋವು ನನ್ನಂತಹ ಅನೇಕರಲ್ಲಿದೆ. ಆದರೆ ನನಗೆ ನಂಬಿಕೆ ಇದೆ ಇಂತಹ ಸ್ಥಿತಿ ಬದಲಾಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ, ಅಧಿಕಾರದಲ್ಲಿ ಇರುವವರನ್ನು ಪ್ರಶ್ನಿಸಿದರೆ ಅದಕ್ಕೆ ಉತ್ತರ ಕೊಡುವ ಬದಲು, ಪ್ರಶ್ನೆ ಮಾಡಿದವರ ಚಾರಿತ್ರ್ಯವನ್ನು ಕೆದಕಿ, ಹೀಯಾಳಿಸುವುದು ಅಪಾಯಕಾರಿ ನಡೆ ಎಂದು ಖ್ಯಾತ ನಟ ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ಆದಿತ್ಯವಾರ ಬೆಂಗಳೂರಿನ ಪ್ರೆಸ್‌ ಕ್ಲಬ್ ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾತನಾಡಿದಾಗ, ನಮ್ಮ ಪ್ರಧಾನಿ ಸಮರ್ಥವಾಗಿದ್ದಾರೆ. ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಅವರ ಪಕ್ಷದವರು ಹೇಳಿದರೆ ಸಾಕಿತ್ತು. ಅದರ ಬದಲು ಸಂಸದ ಪ್ರತಾಪ ಸಿಂಹ, ಸೊಂಟದ ಕೆಳಗಿನ ಭಾಷೆ ಮಾತನಾಡುತ್ತಾರೆ.ಇಂತಹ ಮನಸ್ಥಿತಿಯವರು ಜನರನ್ನು ಹೇಗೆ ಪ್ರತಿನಿಧಿಸುತ್ತಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಖೇಧ ವ್ಯಕ್ತಪಡಿಸಿದರು.

ಗೃಹ ಸಚಿವರು, ನಾಲ್ಕೈದು ವಾರಗಳಲ್ಲಿ ಗೌರಿ ಹಂತಕರನ್ನು ಬಂಧಿಸುವುದಾಗಿ  ಹೇಳಿದ್ದಾರೆ. ನಾವು ಕಾದು ನೋಡೋಣ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಸರಕಾರಿ ಆಸ್ಪತ್ರೆಗಳಲ್ಲಿ ಮಕ್ಕಳು ಸಾಯುತ್ತಿದ್ದರೆ, ಅಲ್ಲಿನ ಮುಖ್ಯಮಂತ್ರಿ ಕೇರಳಕ್ಕೆ ಬಂದು ಪ್ರಚಾರ ಮಾಡುತ್ತಾರೆ. ಇದನ್ನು ಪ್ರಶ್ನಿಸಿದರೆ, ನನ್ನ ಪಕ್ಷ ಬಲವರ್ಧನೆ ಮಾಡಲು ಬಂದಿದ್ದೇನೆ ಎಂದು ಹೇಳುವಷ್ಟೂ ವ್ಯವಧಾನ ಅವರಲ್ಲಿ. ಅದರ ಬದಲು ನನ್ನ ತಂದೆ ಮುಸ್ಲಿಂ, ನನ್ನ ತಾಯಿ ಕ್ರಿಶ್ಚಿಯನ್, ನನ್ನ ಹೆಂಡತಿ ಹಿಂದೂ, ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದೇನೆ, ಪಾಕಿಸ್ತಾನಕ್ಕೆ ಹೋಗಬೇಕು ಎಂದೆಲ್ಲ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್‌ಗಳು ಸದ್ದು ಮಾಡುತ್ತಿವೆ. ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲ ಪಕ್ಷಗಳು, ಸಿನಿಮಾ ನಟರು, ಉದ್ಯಮಿಗಳು 300ರಿಂದ 400 ಜನರನ್ನು ನೇಮಿಸಿಕೊಂಡು ಸಂಬಳ ಕೊಡುತ್ತಿದ್ದಾರೆ. ತಮಗೆ ಆಗದವರ ವಿರುದ್ಧ ಟ್ರೋಲ್‌ಗಳನ್ನು ಹರಿಬಿಡುವುದೇ ಅವರ ಕೆಲಸ. ಅದರಿಂದ ನನಗೆ ಯಾವುದೇ ಭಯವಿಲ್ಲ. ನನ್ನ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಇಂತಹವರನ್ನು ತೆಗೆದುಹಾಕಬೇಕು ಎಂದು ಕೆಲವರು ಸಲಹೆ ನೀಡುತ್ತಾರೆ. ಕೇವಲ ಹೊಗಳುವವರನ್ನೇ ಸೇರಿಸಿಕೊಂಡು ಗಾಜಿನ ಅರಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಇಷ್ಟವಿಲ್ಲ. ನಮ್ಮನ್ನು ಟೀಕಿಸುವವರೂ ಇರಬೇಕು ಎಂದರು.

ಪ್ರಕಾಶ್ ರೈ ಈ ಹಿಂದೆ ಏಕೆ ಮಾತನಾಡುತ್ತಿರಲಿಲ್ಲ ಎಂದು ಕೆಲವರು ಪ್ರಶ್ನಿಸುತ್ತಾರೆ. ರಂಗಭೂಮಿ ನಟನಾಗಿ, ಬಹುಭಾಷಾ ನಟನಾಗಿ, ನಿರ್ಮಾಪಕ, ನಿರ್ದೇಶಕನಾಗಿ ನನ್ನ ವೃತ್ತಿ ಜೀವನದ ಎಲ್ಲ ಹಂತಗಳನ್ನು ದಾಟಿದ್ದೇನೆ. ಮುಂದಿನ ನನ್ನ ಜೀವನಕ್ಕೆ ಬೇಕಾಗುವಷ್ಟು ಹಣವನ್ನೂ ಗಳಿಸಿದ್ದೇನೆ. ಈಗ ಯಾವುದರ ಮೇಲೂ ವ್ಯಾಮೋಹ ಇಲ್ಲ. ಇದೆಲ್ಲದರ ಅನುಭವ ಪಡೆದು ಈಗಲಾದರೂ ಮಾತನಾಡದಿದ್ದರೆ ಇದ್ದೂ ಸತ್ತಂತೆ. ಎಲ್ಲವನ್ನೂ ಮೀರಿ ಹೊಸ ದಿಗಂತದತ್ತ ನೋಡುತ್ತಿದ್ದೇನೆ. ಅದಿನ್ನೂ ಮಸುಕಾಗಿದೆ ಎಂದು ಹೇಳಿದರು.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group