ರಾಷ್ಟ್ರೀಯ ಸುದ್ದಿ

‘ನಿರ್ಭಯ’ ಕುಟುಂಬಕ್ಕೆ ಆಸರೆಯಾದ ರಾಹುಲ್ ಗಾಂಧಿ; ಸಹೋದರನನ್ನು ಪೈಲಟ್ ಮಾಡಿದ ಕಾಂಗ್ರೆಸ್ ನಾಯಕ!

ವರದಿಗಾರ: 2012ರ ಡಿಸೆಂಬರ್ ತಿಂಗಳಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ನಿರ್ಭಯ ಎಂದು ಹೆಸರಿಸಲ್ಪಟ್ಟ ಯುವತಿಯ ಕುಟುಂಬಕ್ಕೆ ಆಸರೆಯಾಗುವ ಮೂಲಕ ರಾಹುಲ್ ಗಾಂಧಿ ಇತರ ರಾಜಕಾರಣಿಗಳಿಂದ ಅವರ ಭಿನ್ನತೆಯನ್ನು ಪ್ರದರ್ಶಿಸಿದ್ದಾರೆ.

ನಿರ್ಭಯ ಅತ್ಯಾಚಾರ ಪ್ರಕರಣವು ದೇಶದಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿತ್ತು ಹಾಗೂ ನಂತರ ಅತ್ಯಾಚಾರಿಗಳ ಶಿಕ್ಷೆಯನ್ನು ಕಠಿಣಗೊಳಿಸುವ ಕಾನೂನು ಜಾರಿಗೊಳಿಸಲಾಯಿತು. ಅತ್ಯಾಚಾರ ನಡೆದಾಗ ಪ್ರತಿಭಟಿಸಿದ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ನೇತಾರರು ನಿರ್ಭಯ ಕುಟುಂಬವನ್ನು ಮರೆತರೆ ರಾಹುಲ್ ಗಾಂಧಿ ಮಾತ್ರ ಸದ್ದಿಲ್ಲದೆ ಕುಟುಂಬದ ಆಸರೆಯಾಗಿ ನಿಂತರು.

ನಿರ್ಭಯಾರ ತಾಯಿ ಹೇಳುವಂತೆ, ರಾಹುಲ್ ಗಾಂಧಿಯವರ ನಿರಂತರ ದೂರವಾಣಿ ಕರೆಗಳು ನಿರ್ಭಯಾರ ಸಹೋದರ ‘ಅಮನ್’ ರಿಗೆ (ಹೆಸರು ಬದಲಿಸಲಾಗಿದೆ) ತನ್ನ ಕನಸನ್ನು ನನಸಾಗಿಸಲು ಪ್ರೋತ್ಸಾಹಿಸಿತು.

ತನ್ನ ಸಹೋದರಿ ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದಾಗ ಅಮನ್ 12ನೆಯ ತರಗತಿಯಲ್ಲಿದ್ದನು. ಆ ಒಂದು ದುರ್ಘಟನೆಯು ಸೈನ್ಯ ಸೇರಬೇಕೆಂಬ ಕನಸು ಹೊಂದಿದ್ದ ಆತನ ಆಘಾತಕ್ಕೆ ಕಾರಣವಾಯಿತು.

ಆದರೆ, ರಾಹುಲ್ ಗಾಂಧಿಯವರು ಆತನಿಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಕುಟುಂಬಕ್ಕೆ ಆಸರೆಯಾಗಬೇಕೆಂದು ಸಲಹೆ ನೀಡಿ, ಪ್ರೋತ್ಸಾಹಿಸಿ ಆತನ ಉನ್ನತ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದರು.

ಆತನ ಸೈನ್ಯ ಸೇರಬೇಕೆಂಬ ಕನಸಿನ ಬಗ್ಗೆ ತಿಳಿದ ರಾಹುಲ್ ಗಾಂಧಿ ಆತನನ್ನು ಪೈಲಟ್ ತರಬೇತಿ ಕೋರ್ಸ್ ಗೆ ಸೇರುವಂತೆ ಪ್ರೇರೇಪಿಸಿದರು. ಸೋನಿಯಾ ಗಾಂಧಿಯವರ ಕ್ಷೇತ್ರವಾದ ರಾಯ್ ಬರೇಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಉರನ್ ಅಕಾಡೆಮಿಯಲ್ಲಿ ಅಮನ್ ಗೆ ದಾಖಲಾತಿ ಮಾಡಿಕೊಟ್ಟರು. ಇದೀಗ ಅಮನ್ ತನ್ನ ಪೈಲಟ್ ತರಬೇತಿಯ ಅಂತಿಮ ಹಂತದಲ್ಲಿದ್ದಾನೆ ಎಂದು ಆತನ ತಾಯಿ ಆಶಾ ದೇವಿ ತಿಳಿಸಿದರು.

ಅಮನ್ ತರಬೇತಿ ಪಡೆಯುತ್ತಿರುವಾಗ ರಾಹುಲ್ ಗಾಂಧಿ ನಿರಂತರವಾಗಿ ಆತನೊಂದಿಗೆ ಸಂಪರ್ಕದಲ್ಲಿದ್ದರು. ಪ್ರಿಯಂಕಾ ಗಾಂಧಿಯವರೂ ಆಶಾ ದೇವಿಗೆ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.

ದುರ್ಘಟನೆಗಳನ್ನೂ ತಮ್ಮ ಪ್ರಚಾರಕ್ಕಾಗಿ ಉಪಯೋಗಿಸಿಕೊಳ್ಳುವ ರಾಜಕಾರಣಿಗಳೇ ಹೆಚ್ಚಾಗಿರುವಾಗ, ಸದ್ದಿಲ್ಲದೆ ಕುಟುಂಬವೊಂದಕ್ಕೆ ಆಸರೆಯಾಗಿ ನಿಂತ ರಾಹುಲ್ ಗಾಂಧಿ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group