ಜಿಲ್ಲಾ ಸುದ್ದಿ

ಸಾರ್ವಜನಿಕರಿಂದ ಚಂದಾ ಎತ್ತಿ ಚರಂಡಿ ನಿರ್ಮಾಣ : ನಗರಸಭೆಯ ವಿರುದ್ಧ ಹೀಗೊಂದು ಪ್ರತಿಭಟನೆ!

ಶಿಡ್ಲಘಟ್ಟ ಅಕ್ಟೋಬರ್ 30 : ಮಳೆಯ ನೀರು ಸರಾಗವಾಗಿ ಹರಿಯಲು ಚರಂಡಿಯನ್ನು ನಿರ್ಮಿಸಬೇಕೆಂದು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸ್ವತಃ ನಾಗರಿಕರು ಚಂದಾ ವಸೂಲಿ ಮಾಡಿ ಚರಂಡಿ ನಿರ್ಮಿಸುವ ಮೂಲಕ ಗಮನಸೆಳೆದಿದ್ದಾರೆ.

ನಗರದ ವಾರ್ಡ್ ಸಂಖ್ಯೆ 18ರ ಫಿರ್ದೋಸ್ ಮಸೀದಿಯ ಬಳಿ ಚರಂಡಿಯ ವ್ಯವಸ್ಥೆ ಇಲ್ಲದೇ ಪ್ರಾರ್ಥನೆ ಸಲ್ಲಿಸಲು ಬರುವ ನಾಗರಿಕರು ಮತ್ತು ಇದೇ ಮಾರ್ಗದಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ನಗರಸಭೆಯ ಪೌರಾಯುಕ್ತ ಜಿ.ಎನ್.ಚಲಪತಿ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಳೆ ಬಂದರೆ ಪುನಃ ನರಕಯಾತನೆಯನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮನನೊಂದ ನಾಗರಿಕರು ಸಂಘಟಿತರಾಗಿ ಸ್ವಂತ ಹಣವನ್ನು ಖರ್ಚು ಮಾಡಿ ಚರಂಡಿಯನ್ನು ನಿರ್ಮಿಸಿಕೊಳ್ಳುವ ಮೂಲಕ ನಗರಸಭೆಯ ಅಧಿಕಾರಿಗಳಿಗೆ ಶಾಕ್ ನೀಡಿ ಗಮನಸೆಳೆದಿದ್ದಾರೆ.

ನಗರಸಭೆಯ ವ್ಯಾಪ್ತಿಯಲ್ಲಿರುವ ವಾರ್ಡ್ ಸಂಖ್ಯೆ18 ರಲ್ಲಿ ಮೂಲಭೂತ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸಲು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ಯಾರೆ ಎನ್ನದಿರುವ ಅಧಿಕಾರಿಗಳ ಧೋರಣೆಯಿಂದ ಮನನೊಂದು ಚರಂಡಿಯನ್ನು ನಿರ್ಮಿಸಿಕೊಂಡಿದ್ದೇವೆ ಎಂದು ಸ್ಥಳೀಯ ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group