ಜಿಲ್ಲಾ ಸುದ್ದಿ

ಮಂಗಳೂರು ಮೇಯರ್ ಕವಿತಾ ಸನಿಲ್ ಮತ್ತು ಕಾಂಗ್ರೆಸ್ ಮೇಲೆ ಸುಳ್ಳಾರೋಪ ಹೊರಿಸುವ  ಬಿಜೆಪಿಯ ಪ್ರಯತ್ನ ವಿಫಲವಾಯಿತೇ?

ವರದಿಗಾರ : ಅಕ್ರಮ ದಂಧೆಕೋರರೊಂದಿಗೆ ರಾಜಿಯಿಲ್ಲದ ಆಡಳಿತ ವೈಖರಿ,  ಅವ್ಯವಹಾರಗಳ ಮತ್ತು ಅಕ್ರಮ ಅಡ್ಡೆಗಳಿಗೆ ತೆರಳಿ ಗರ್ಜಿಸುವ ತನ್ನ ಧೈರ್ಯಶಾಲಿ ನಡೆಗಳಿಂದಾಗಿ ರಾಜ್ಯದಾದ್ಯಂತ ಹೆಸರುವಾಸಿಯಾಗಿರುವ ‘ಲೇಡಿ ರಾಂಬೋ’ ಎಂದೇ ಖ್ಯಾತಿವುಳ್ಳ ಮಂಗಳೂರಿನ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರ ಮೇಲೆ ಮತ್ತು ಅವರು  ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ಏಕ ಕಾಲದಲ್ಲಿ ಸುಳ್ಳಾರೋಪ ಹೊರಿಸಿ ಇಕ್ಕಟ್ಟಿಗೆ ಸಿಲುಕಿಸುವ ಬಿಜೆಪಿಯ ಪ್ರಯತ್ನ ಅವರಿಗೇ ಮಗ್ಗುಲ ಮುಳ್ಳಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

ಘಟನೆಯ ಹಿನ್ನೆಲೆ:

ಅಕ್ಟೋಬರ್ 20 ರಂದು ರಾತ್ರಿ ಮೇಯರ್ ಕವಿತಾ ಸನಿಲ್ ವಾಸಿಸುವ ಅಪಾರ್ಟ್ ಮೆಂಟ್’ನ  ಮಕ್ಕಳು ಪಟಾಕಿ ಸಿಡಿಸುತ್ತಾ ದೀಪಾವಳಿಯನ್ನು ಸಂಭ್ರಮಿಸುತ್ತಿದ್ದರು. ಅಲ್ಲಿ ಮೇಯರ್ ರವರ ಮಕ್ಕಳೂ ಸೇರಿ ಅಪಾರ್ಟ್ ಮೆಂಟಿನ ಕಾವಲುಗಾರನ ಮಕ್ಕಳೂ ಪಟಾಕಿ ಸಿಡಿಸುತ್ತಾ ಖುಷಿ ಪಡುತ್ತಿದ್ದರು. ಆ ವೇಳೆ ಮಕ್ಕಳ ಮಧ್ಯೆ ನಡೆದ ಸಣ್ಣ ಮಟ್ಟಿನ ಜಗಳ ರಾಜಕೀಯ ರೂಪ ಪಡೆದಿದ್ದು ಅಲ್ಲಿನ ಕಾವಲುಗಾರನ ಪತ್ನಿ ಅಕ್ಟೋಬರ್ 27ರಂದು ಮಾಧ್ಯಮಗಳೆದುರು ಬಂದು ತನ್ನ ಮಗುವಿಗೆ ಮೇಯರ್ ಕವಿತಾ ಸನಿಲ್’ರವರು ಹಲ್ಲೆ ನಡೆಸಿದ್ದಾರೆ ಮತ್ತು ಮಗುವನ್ನು ಎತ್ತಿ  ಬಿಸಾಕಿದ್ದಾರೆ ಎಂದು ಹೇಳಿಕೆ ನೀಡಿದ ನಂತರ !!

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಮೇಯರ್ ಕವಿತಾ ಸನಿಲ್, ಕಾವಲುಗಾರನ ಪತ್ನಿ ಯಾರದೋ ಕುಮ್ಮಕ್ಕಿನಿಂದ ನನ್ನ ಮೇಲೆ ಸುಳ್ಳಾರೋಪಗಳನ್ನು ಮಾಡುತ್ತಿದ್ದು, ಮಕ್ಕಳ ಮೇಲೆ ನಾನು ಹಲ್ಲೆ ನಡೆಸಿಲ್ಲವೆಂದು ಹೇಳಿದ್ದರು. ಕವಿತಾರವರು ಅಂದಿನ ಪತ್ರಿಕಾಗೋಷ್ಠಿಯಲ್ಲಿ , ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ ಹಾಗೂ ನಗರ ಪಾಲಿಕೆಯ ಸದಸ್ಯೆ ಆಗಿರುವಂತಹಾ ರೂಪಾ.ಡಿ ಬಂಗೇರರವರು ತನ್ನ ಅಪಾರ್ಟ್ ಮೆಂಟ್’ಗೆ  ಬಂದು ಕಾವಲುಗಾರ ಮತ್ತವನ ಪತ್ನಿಯೊಂದಿಗೆ ಮಾತನಾಡುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆಗೊಳಿಸಿದ್ದರು. ನಗರಪಾಲಿಕೆಯಲ್ಲಿ ನನ್ನೊಂದಿಗೆ ಕಾರ್ಯನಿರ್ವಹಿಸುತ್ತಿರುವಂತಹಾ ರೂಪಾ ಡಿ ಬಂಗೇರರವರು ಕಾವಲುಗಾರನ ಪತ್ನಿಯನ್ನು ಭೇಟಿ ಮಾಡಿದ ಹಾಗೆ ನನ್ನನ್ನೂ ಭೇಟಿ ಮಾಡಿ ಘಟನೆಯ ಕುರಿತಾಗಿ ವಿವರಗಳನ್ನು ಪಡೆಯಬಹುದಾಗಿತ್ತು. ಆದರೆ ಗುಪ್ತವಾಗಿ ಕಾವಲುಗಾರನ ಪತ್ನಿಯನ್ನು ಮಾತ್ರ ಭೇಟಿ ಮಾಡಿ ಹೋಗಿರುವುದು ಯಾಕೆ ಎಂದು ಪ್ರಶ್ನಿಸಿದ್ದರು. ಅವರ ಭೇಟಿಯ ನಂತರವಾಗಿದೆ ಕಾವಲುಗಾರನ ಪತ್ನಿ ಮಾಧ್ಯಮಗಳ ಎದುರು ನನ್ನ ವಿರುದ್ಧ ಸುಳ್ಳಾರೋಪಗಳನ್ನು ಹೊರಿಸಿದ್ದು ಎಂದು ನೇರವಾಗಿ ಬಿಜೆಪಿಯ ಮೇಲೆ ಆರೋಪ ಹೊರಿಸಿದ್ದರು. ಮರುದಿನ ಬಿಜೆಪಿ ಮಹಿಳಾ ಮೋರ್ಚಾ ಕೂಡಾ ಪತ್ರಿಕಾಗೋಷ್ಟಿ ನಡೆಸಿ, ಒಂದೋ ಮೇಯರ್ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಕಾಂಗ್ರೆಸ್ಸಿನ ಎಲ್ಲಾ ಸದಸ್ಯರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು.

ಘಟನೆ ನಡೆದಂದಿನ ಅಪಾರ್ಟ್’ಮೆಂಟಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಮೇಯರ್ ಕವಿತಾ ಸನಿಲ್, ಅಕ್ಟೋಬರ್ 20ರಂದು ರಾತ್ರಿ ಕಾವಲುಗಾರನ ಪತ್ನಿ ಒಂಬತ್ತು ವರ್ಷದ ತನ್ನ ಮಗಳನ್ನು ರಸ್ತೆಗೆ ಓಡಿಸಿಕೊಂಡು ಹೋಗುತ್ತಿರುವ ದೃಶ್ಯಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಕವಿತಾ ಸನಿಲ್’ರವರು ಕಾವಲುಗಾರನ ಪತ್ನಿಯ ವಿರುದ್ಧ ಕೊಲೆ ಯತ್ನ ಮೊಕದ್ದಮೆ ದಾಖಲಿಸಿದ್ದಾರೆ. ಇದರ ಸಿಸಿಟಿವಿ ದೃಶ್ಯಾವಳಿಗಳನ್ನು ಅವರು ಮಾಧ್ಯಮಗಳಿಗೂ ಬಿಡುಗಡೆಗೊಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳು

ಈ ಕುರಿತು “ವರದಿಗಾರ” ತಂಡ ಮೇಯರ್ ಕವಿತಾ ಸನಿಲ್’ರವರನ್ನು ಸಂಪರ್ಕಿಸಿದಾಗ ಅವರು, ಘಟನೆಯನ್ನು ಕೆಲವರು ರಾಜಕೀಯಗೊಳಿಸುತ್ತಿರುವ ಕುರಿತು ತಮ್ಮ ಖೇಧ ವ್ಯಕ್ತಪಡಿಸಿದ್ದಾರೆ. ಓರ್ವ ತಾಯಿಯಾಗಿ ಯಾರೂ ಮಾಡುವ ಕೆಲಸವನ್ನೇ ನಾನೂ ಮಾಡಿದ್ದು, ನನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಿದ್ದು ಸಹಜವೇ ಆಗಿದೆ. ಆದರೆ ಕಾವಲುಗಾರನ ಮಗುವಿನ ಮೇಲೆ ಹಲ್ಲೆ ನಡೆಸಿದ್ದನ್ನು ನಿರಾಕರಿಸಿದ್ದಾರೆ. ನನ್ನ ಮಗುವಿನ ಹೇಳಿಕೆಗಳನ್ನೂ ನಿನ್ನೆ ಪೊಲೀಸರು ದಾಖಲಿಸಿದ್ದು, ಪೊಲೀಸರು ಈ ಕುರಿತು ಸೂಕ್ತ ತನಿಖೆ ನಡೆಸುತ್ತಾರೆನ್ನುವ ಅಚಲ ವಿಶ್ವಾಸವಿದೆ ಎಂದು ಕವಿತಾರವರು ಹೇಳುತ್ತಾರೆ.  ಮಗುವಿನ ಮೇಲೆ ಹಲ್ಲೆ ನಡೆಸಿದ್ದೇನೆಂದು ಆರೋಪಿಸಿರುವ ದಿನ ಸಂಜೆ 4.07 ಕ್ಕೆ ನಾನು ಕಾವಲುಗಾರನ ಪತ್ನಿಯೊಂದಿಗೆ ಮಾತನಾಡಿ 4.11 ಕ್ಕೆ ಹೊರಬರುವ ಸಿಸಿಟಿವಿ ದೃಶ್ಯಗಳು ನನ್ನ ಬಳಿಯಿದೆ ಎಂದು ಕವಿತಾರವರು ಹೇಳಿದರು. ಆ ವೇಳೆ ಹಲ್ಲೆಗೊಳಪಟ್ಟಿದ್ದೆಂದು ಹೇಳಲಾದ ಮಗು ಕೂಡಾ ಆಟವಾಡುತ್ತಿರುವ ದೃಶ್ಯಗಳು ಅದರಲ್ಲಿದೆ. ಇದು ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ. ನನ್ನ ವಿರುದ್ಧ ರಾಜಕೀಯ ಆಟವಾಡುವವರ ವಿರುದ್ಧ ಭಾವೋದ್ವಿಗ್ನರಾಗಿಯೇ ಮಾತನಾಡಿದ ಕವಿತಾರವರು, ನನ್ನನ್ನು ಓರ್ವ ತಾಯಿಯಾಗಿ ಕಾಣದೆ, “ಮೇಯರ್” ವಿರುದ್ಧ ತಮ್ಮ ರಾಜಕೀಯ ನಡೆಸುತ್ತಿದ್ದಾರೆ. ಓರ್ವ ತಾಯಿಯ ಸಂವೇದನೆಯನ್ನು ಅರ್ಥ ಮಾಡಿಕೊಳ್ಳದವರ ವಿರುದ್ಧ ತಮ್ಮ ಬೇಸರ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಅಪಾರ್ಟ್ ಮೆಂಟಿನ ಮಕ್ಕಳ ಮಧ್ಯೆ ನಡೆದ ಸಣ್ಣ ಮಟ್ಟಿಗಿನ ಜಗಳಕ್ಕೆ ರಾಜಕೀಯ ಬಣ್ಣ ಹಚ್ಚಲು ನೋಡಿದ ಬಿಜೆಪಿಗರು, ಈಗ ಅಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ ನಂತರ ಇಡೀ ಘಟನಾವಳಿಗಳು ಬಿಜೆಪಿಗೇ ತಿರುಗುಬಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಲ್ಲಿ ಯಾರದೇ ಒತ್ತಡಗಳಿಗೆ ಮಣಿಯದೆ ಸೂಕ್ತವಾಗಿ ತನಿಖೆ ನಡೆಸುವ ಜವಾಬ್ದಾರಿಯೂ ಪೊಲೀಸ್ ಇಲಾಖೆಯ ಮೇಲಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group