ಜಿಲ್ಲಾ ಸುದ್ದಿ

ಮೋದಿ ಕಾರ್ಯಕ್ರಮ : ಪೊಲೀಸರಿಂದಲೇ ವಿಐಪಿ ಪಾಸ್ ಪಡೆದುಕೊಂಡ ವಿನಾಯಕ ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈ!

ವರದಿಗಾರ : ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯ ಪ್ರಮುಖ ಆರೋಪಿ ನರೇಶ್ ಶೆಣೈಗೆ ಇಂದು ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ವಿಐಪಿ ಪಾಸನ್ನು ನೀಡಿರುವುದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ. ಸ್ವತಃ ನರೇಶ್ ಶೆಣೈ ಇದನ್ನು ತನ್ನ ಫೇಸ್ಬುಕ್’ನಲ್ಲಿ ಹಂಚಿಕೊಂಡಿದ್ದು, “ಧನ್ಯೋಸ್ಮಿ #ನಮೋ” ಎಂದು ಬರೆದುಕೊಂಡಿದ್ದಾನೆ. ಈ ವಿಐಪಿ ಪಾಸನ್ನು ಪ್ರಧಾನಿ ಕಾರ್ಯಕ್ರಮದ ಸಂಘಟಕರಾದ ಧರ್ಮಸ್ಥಳ ಅಭಿವೃದ್ಧಿ ಯೋಜನೆಯ ಅಧಿಕೃತ ಮೊಹರು ಇದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಹೆಸರಿನಲ್ಲಿ ಮುದ್ರಣಗೊಂಡಿದೆ.

ಕಳೆದ ವರ್ಷ ಮಾರ್ಚ್ 21ರಂದು ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿ ಆರ್ ಟಿ ಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರವರ ಕೊಲೆ ಪ್ರಕರಣದಲ್ಲಿ ನರೇಶ್ ಶೆಣೈ ಪ್ರಮುಖ ಆರೋಪಿಯಾಗಿದ್ದಾನೆ. ಈತ ‘ನಮೋ ಬ್ರಿಗೇಡ್’ ಸ್ಥಾಪಕನೂ ಆಗಿದ್ದಾನೆ. ಕೊಲೆ ನಡೆದು ಮೂರು ತಿಂಗಳುಗಳ ಕಾಲ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಶೆಣೈ ನಂತರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಕೆಲವು ತಿಂಗಳು ಜೈಲಿನಲ್ಲಿದ್ದ ಈತ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ರಥಬೀದಿಯ ವೆಂಕಟರಮಣ ದೇವಸ್ಥಾನವೂ ಸೇರಿದಂತೆ ವಿವಿಧ ವಿಷಯಗಳ ಮಾಹಿತಿ ಕೋರಿ ವಿನಾಯಕ ಬಾಳಿಗಾ ಅರ್ಜಿ ಸಲ್ಲಿಸಿದ್ದರು. ಈ ಕಾರಣಕ್ಕಾಗಿಯೇ ನರೇಶ್ ಶೆಣೈ ಕೊಲೆಯ ಸಂಚು ರೂಪಿಸಿದ್ದ. ಇತರೆ ಕೊಲೆ ಆರೋಪಿಗಳನ್ನು ಬಳಸಿಕೊಂಡು ನರೇಶ್ ಶೆಣೈ ಮಾರ್ಚ್ 21 ರಂದು ಬೆಳ್ಳಂಬೆಳಗ್ಗೆ ವಿನಾಯಕರನ್ನು ಕೊಲೆ ಮಾಡಿಸಿದ್ದಾನೆ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಕೊಲೆಯಲ್ಲಿ ಈತನ ಪಾತ್ರದ ಬಗ್ಗೆ ಸಾಕ್ಷಿಯಿರುವ  ಕುರಿತು ಪೊಲೀಸರೇ ಮಾಹಿತಿ ನೀಡಿದ್ದರು. ನರೇಶ್ ಶೆಣೈ ವಿ ಟಿ ರಸ್ತೆಯಲ್ಲಿ ‘ವಿವೇಕ್ ಟ್ರೇಡರ್ಸ್’  ಎಂಬ ಆಯುರ್ವೇದ ಔಷದ ಮಳಿಗೆಯನ್ನು ಹೊಂದಿದ್ದಾನೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರ ಧರ್ಮಸ್ಥಳದ ಸಭಾ ಕಾರ್ಯಕ್ರಮಕ್ಕೆ ಕೊಲೆ ಆರೋಪಿ ನರೇಶ್ ಶೆಣೈಗೆ, ಆತನನ್ನು ಅಂದು ಬಂಧಿಸಿದ್ದ ಅದೇ ಪೊಲೀಸರೇ ಮಂತ್ರಿ ಮತ್ತು ಇತರೆ ಗಣ್ಯಾತಿ ವ್ಯಕ್ತಿಗಳಿಗೆ ನೀಡುವ ವಿಐಪಿ ಪಾಸ್ ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈತ ನಮೋ ಬ್ರಿಗೇಡ್ ಸಂಘಟನೆಯ ಸ್ಥಾಪಕನಾಗಿರುವುದೇ ಅದಕ್ಕೆ ಕಾರಣವೆನ್ನಲಾಗಿದೆ. ಒಟ್ಟಿನಲ್ಲಿ ಪೊಲೀಸರೇ ಒಬ್ಬ ಕೊಲೆ ಆರೋಪಿಗೆ ಗಣ್ಯ ವ್ಯಕ್ತಿಯ ಸ್ಥಾನಮಾನ ನೀಡೀರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆಯೆನ್ನಲಾಗಿದೆ

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group