ರಾಜ್ಯ ಸುದ್ದಿ

ಟಿಪ್ಪು ಮಹಾನ್ ದೇಶಪ್ರೇಮಿ ಎಂದು ಹೇಳಿದ ಯಡಿಯೂರಪ್ಪರೇ ನಿಮಗಿರುವ ನಾಲಿಗೆ ಒಂದೋ ಅಥವಾ ಎರಡೋ?-ಸಿದ್ದರಾಮಯ್ಯ ಪ್ರಶ್ನೆ

ವರದಿಗಾರ: ಯಡಿಯೂರಪ್ಪ ಈ ಹಿಂದೆ ಟಿಪ್ಪು ವೇಷ ಹಾಕಿಕೊಂಡು, ಟಿಪ್ಪು ಮಹಾನ್ ದೇಶಪ್ರೇಮಿ ಎಂದು ಹೇಳಿಕೊಳ್ಳುತ್ತಾ ಟಿಪ್ಪುವನ್ನು ಹಾಡಿ ಹೊಗಳಿದ್ದರು. ಈಗ ಟಿಪ್ಪು ಕನ್ನಡ ವಿರೋಧಿ ಎಂದು ಹೇಳುತ್ತಿದ್ದಾರೆ. ಅಲ್ಲಾಹನ ಮೇಲಾಣೆ, ನಾನು ಮತ್ತೆಂದೂ ಬಿಜೆಪಿ ಸೇರುವುದಿಲ್ಲ ಎಂದು ಕೆಜೆಪಿಯಲ್ಲಿದ್ದಾಗ ಯಡಿಯೂರಪ್ಪ ಹೇಳಿರಲಿಲ್ಲವೇ? ಬಿಜೆಪಿಯವರಿಗೆ ಚರಿತ್ರೆ ತಿರುಚಿ ಗೊತ್ತೇ ಹೊರತು ಸತ್ಯ ಹೇಳುವುದು ಗೊತ್ತಿಲ್ಲ. ಯಡಿಯೂರಪ್ಪರೇ ನಿಮಗಿರುವ ನಾಲಿಗೆ ಒಂದೋ ಅಥವಾ ಎರಡೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅವರು ಧಾರವಾಡದಲ್ಲಿ ಆಯೋಜಿಸಿದ್ದ ಭರವಸೆಗಳ ಸಾಕಾರದ ಸಂಭ್ರಮ, ಬೆಳಗಾವಿ ವಿಭಾಗದ ಸೌಲಭ್ಯಗಳ ವಿತರಣಾ ಸಮಾವೇಶ ಹಾಗೂ ಮಾಹಿತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿಯವರು ಭಾವಿಸಿದ್ದಾರೆ. ಮಿಷನ್ 150 ನಮ್ಮ ಜೇಬಿನಲ್ಲಿದೆ ಎನ್ನುತ್ತಿದ್ದವರು ಈಗ ಮಿಷನ್ 50ಗೆ ಬಂದು ನಿಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿಯವರ ವರ್ಚಸ್ಸಿನ ಮೇಲೆ ಗೆಲುವು ಸಾಧಿಸುವ ಕನಸು ಕಾಣುತ್ತಿದ್ದಾರೆ ಬಿಜೆಪಿಯವರು. ಮೋದಿ ಅಥವಾ ಅಮಿತ್ ಶಾ ನೂರು ಬಾರಿ ಕರ್ನಾಟಕಕ್ಕೆ ಬಂದರೂ ಅವರ ಮ್ಯಾಜಿಕ್ ಇಲ್ಲಿ ನಡೆಯದು. ಕರುನಾಡು ಎಂಬುದು ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನಾಡು.

ಸುಳ್ಳು ಆಪಾದನೆಗಳನ್ನು ಮಾಡುವುದಲ್ಲ. ಧೈರ್ಯವಿದ್ದರೆ ಸಾಧನೆಗಳ ಬಗ್ಗೆ ಚರ್ಚೆಗೆ ಒಂದೇ ವೇದಿಕೆಗೆ ಬರಲಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ. ಅಲ್ಲದೆ ಬಿಜೆಪಿಯವರು ಪರಿವರ್ತನಾ ರಾಲಿ ಮಾಡುತ್ತಾರಂತೆ. ಅಧಿಕಾರದಲ್ಲಿ ಇದ್ದಾಗ ಏನೇನು ಪರಿವರ್ತನೆ ಮಾಡಿದ್ದೇವೆ ಎಂಬುದನ್ನು ಅವರು ಹೇಳಲಿ.

ಅಚ್ಛೇ ದಿನ್ ಆಯೇಗಾ ಎಂದು ಮೋದಿಯವರು ಹೇಳಿದ್ದೇ ಹೇಳಿದ್ದು. ಯಾರಿಗೆ ಬಂತು ಅಚ್ಛೇ ದಿನ್. ರೈತರಿಗೆ, ಬಡವರಿಗೆ, ಮಹಿಳೆಯರಿಗೆ, ನಿರುದ್ಯೋಗಿ ಯುವಕ, ಯುವತಿಯರಿಗೆ ಬರಲಿಲ್ಲ. ಬಂದಿದ್ದು ಅಂಬಾನಿ, ಆದಾನಿ ಮತ್ತು ಅಮಿತ್ ಶಾ ಪುತ್ರನಿಗೆ ಎಂದು ಕೇಂದ್ರ ಸರಕಾರದ ವಿರುದ್ಧ ಆರೋಪಿಸಿದ್ದಾರೆ. ನೋಟು ಅಮಾನ್ಯದಿಂದ ನಿದ್ದೆಗೆಟ್ಟವರು ಜನ ಸಾಮಾನ್ಯರೇ ಹೊರತು ಕಾಳ ಧನಿಕರಲ್ಲ. ನೋಟು ಅಮಾನ್ಯದಿಂದ ಜಿಡಿಪಿ ಬೆಳವಣಿಗೆ ಕುಸಿಯುತ್ತದೆ ಎಂದು ಡಾ. ಮನಮೋಹನ್ ಸಿಂಗ್ ಹೇಳಿದ್ದರು. ಈಗ ಅದೇ ರೀತಿ ಆಗಿದೆ. ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group