ರಾಷ್ಟ್ರೀಯ ಸುದ್ದಿ

ಅಮಿತ್‌ ಷಾ ಪುತ್ರನ ಅವ್ಯವಹಾರ ಪ್ರಕರಣಕ್ಕೆ ಬಿಜೆಪಿ ಬೆಂಬಲ: ಬಿಜೆಪಿ ನೈತಿಕತೆಯನ್ನು ಕಳೆದುಕೊಂಡಿದೆ ಎಂದ ಹಿರಿಯ ನಾಯಕ

ವರದಿಗಾರ: ಅಕ್ರಮ ವಹಿವಾಟು ಪ್ರಕರಣದಲ್ಲಿ ಸಿಲುಕಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ರವರ ಪುತ್ರ ಜಯ್‌ ಷಾ ಬೆಂಬಲಕ್ಕೆ ನಿಲ್ಲುವ ಮೂಲಕ ಪಕ್ಷ ತನ್ನ ನೈತಿಕತೆ ಕಳೆದುಕೊಂಡಿದೆ ಎಂದು ಬಿಜೆಪಿಯ ಹಿರಿಯ ನಾಯಕ ಯಶವಂತ್‌ ಸಿನ್ಹಾ ಹೇಳಿದ್ದು, ಮತ್ತೊಮ್ಮೆ ಬಿಜೆಪಿಗರ ಕಣ್ಣು ಕೆಂಪಾಗಿಸಿದ್ದಾರೆ.

ಅವರು ಪಾಟ್ನಾದಲ್ಲಿ ಜಯಪ್ರಕಾಶ್ ನಾರಾಯಣ ಅವರ ಜಯಂತಿ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಸುದ್ದಿ ಜಾಲತಾಣ ಪ್ರಕಟಿಸಿದ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇದು ವಿಚಾರಣೆ ಮತ್ತು ತನಿಖೆಗೆ ಸಂಬಂಧಿಸಿದ ವಿಚಾರ. ಸತ್ಯ ತಿಳಿಯಲು ಸರಕಾರ ಪ್ರಕರಣದ ತನಿಖೆಗೆ ಆದೇಶಿಸಲಿ. ಅದನ್ನು ಬಿಟ್ಟು ಕೇಂದ್ರ ಸಚಿವರು ಮತ್ತು ಪಕ್ಷದ ಮುಖಂಡರು ಬಹಿರಂಗವಾಗಿಯೇ ಜಯ್‌ ಷಾ ಬೆಂಬಲಕ್ಕೆ ನಿಲ್ಲುವುದು ಸರಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಈ ವರ್ತನೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ. ಪೈಪೋಟಿಯ ಮೇಲೆ ಜಯ್‌ ಷಾ ರಕ್ಷಣೆಗೆ ಮುಂದಾಗಿರುವುದನ್ನು ಗಮನಿಸಿದರೆ ಆರೋಪದಲ್ಲಿ ನಿಜವಿದೆ ಎಂಬ ಸಂಶಯ ಮೂಡುತ್ತದೆ ಎಂದು ಸಿನ್ಹಾ ಶಂಕೆ ವ್ಯಕ್ತಪಡಿಸಿದ್ದಾರೆ.

ಪೀಯೂಷ್‌ ಗೋಯಲ್‌ ತಾವು ಕೇಂದ್ರ ಸಚಿವ ಎಂಬುವುದನ್ನು ಮರೆತು ಬಹಿರಂಗವಾಗಿ ಜಯ್‌ ಷಾ ಸಮರ್ಥನೆಗೆ ಇಳಿದಿದ್ದು ನಾಚಿಕೆಗೇಡಿನ ವಿಷಯ. ಅವರು ಜಯ್‌ ಷಾ ಲೆಕ್ಕ ಪರಿಶೋಧಕರಂತೆ ವರ್ತಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಅಕ್ರಮ ವಹಿವಾಟು ಬಯಲಿಗೆ ಎಳೆದ ಸುದ್ದಿ ಜಾಲತಾಣದ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವ ನಿರ್ಧಾರವನ್ನೂ ಅವರು ಖಂಡಿಸಿದ್ದಾರೆ. ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಸಾಧುವಲ್ಲ ಎಂದು ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಯ್‌ ಪರ ವಕಾಲತ್ತು ವಹಿಸಲು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಮುಂದಾಗಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಸಿನ್ಹಾ ವಿರೋಧ ಪಕ್ಷ ಕಾಂಗ್ರೆಸ್‌ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group