ರಾಜ್ಯ ಸುದ್ದಿ

ಸೋಲಿನ ಭೀತಿಯಿಂದ ಬಿಜೆಪಿ ಸುಳ್ಳು ಆರೋಪ- ಸಿದ್ದರಾಮಯ್ಯ

ವರದಿಗಾರ: ಭೂಪಸಂದ್ರ ಗ್ರಾಮದಲ್ಲಿ 6 ಎಕರೆ 26 ಗುಂಟೆ ಡಿನೋಟಿಫಿಕೇಷನ್ ಮಾಡಿದ್ದೇನೆ ಎಂದು ಬಿ.ಜೆ. ಪುಟ್ಟಸ್ವಾಮಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವ ಯಾವ ವ್ಯಕ್ತಿಯೂ ಇಂತಹ ಸುಳ್ಳು ಆರೋಪಗಳನ್ನು ಮಾಡುವುದಿಲ್ಲ. ಸೋಲಿನ ಭೀತಿಯಿಂದ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ. ನಮ್ಮ ಸರಕಾರದ ವರ್ಚಸ್ಸು ಸಹಿಸಲು ಸಾಧ್ಯವಾಗದೆ ರಾಜಕೀಯ ಉದ್ದೇಶಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಅಧಿಕಾರಕ್ಕೆ ಬಂದ ನಂತರ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಮತ್ತು ಅಂತಿಮ ಅಧಿಸೂಚನೆ ಆದ ಬಳಿಕ ಒಂದೇ ಒಂದು ಎಕರೆಯನ್ನೂ ಡಿನೋಟಿಫೈ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಜಮಹಲ್ ವಿಲಾಸ್ ಬಡಾವಣೆ ಸೇರಿದಂತೆ ಯಾವುದೇ ಯೋಜನೆಯಲ್ಲಿ ನಾನು ಡಿನೋಟಿಫಿಕೇಷನ್ ಮಾಡಿರುವ ಬಗ್ಗೆ ದಾಖಲೆಗಳಿದ್ದರೆ ಬಿಜೆಪಿ ಬಿಡುಗಡೆ ಮಾಡಲಿ ಎಂದು ಅವರು ಇದೇ ಸಂದರ್ಭ ಸವಾಲು ಹಾಕಿದ್ದಾರೆ.

ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಡಿನೋಟಿಫೈ ಮಾಡುವುದಕ್ಕಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿರುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಆರ್‌ಎಂವಿ ಬಡಾವಣೆಗೆ ಸಂಬಂಧಿಸಿದಂತೆ ಜಮೀನು ಹಕ್ಕು ಹಸ್ತಾಂತರಿಸುವ ಪ್ರಸ್ತಾವವೇ ಈ ಸಮಿತಿ ಮುಂದೆ ಬಂದಿಲ್ಲ. ಹೀಗಿರುವಾಗ ಡಿನೋಟಿಫೈ ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಭೂಪಸಂದ್ರ ಗ್ರಾಮದಲ್ಲಿ 1987ರಲ್ಲಿ ಜಮೀನು ಸ್ವಾಧೀನ ಮಾಡಿ, ಬಡಾವಣೆ ನಿರ್ಮಿಸಿ 32 ನಿವೇಶನದಾರರಿಗೆ ಹಂಚಿಕೆ ಮಾಡಲಾಗಿತ್ತು. ಬಳಿಕ 1992ರಲ್ಲಿ ಅಂದಿನ ಸರಕಾರ ಈ ಜಾಗವನ್ನು ಡಿನೋಟಿಫಿಕೇಷನ್ ಮಾಡಿತ್ತು. ಇದನ್ನು ಪ್ರಶ್ನಿಸಿ ನಿವೇಶನದಾರರು ಹೈಕೋರ್ಟ್‌ ಮೊರೆ ಹೋದಾಗ ನ್ಯಾಯಾಲಯ ಅರ್ಜಿದಾರರ ಪರವಾಗಿ ತೀರ್ಮಾನ ಪ್ರಕಟಿಸಿ ಡಿನೋಟಿಫಿಕೇಷನ್ ರದ್ದುಪಡಿಸಿತು. ಜಮೀನಿನ ಮಾಲೀಕರಾದ ಸೈಯದ್ ಬಾಶಿದ್ ಸುಪ್ರೀಂ ಕೋರ್ಟ್‌ವರೆಗೆ ಹೋದರೂ ಡಿನೋಟಿಫಿಕೇಷನ್ ಮಾಡಿದ್ದು ತಪ್ಪು ಎಂಬ ತೀರ್ಮಾನವೇ ಬಂತು. ಮತ್ತೊಬ್ಬ ಜಮೀನು ಮಾಲೀಕರಾದ ಕೆ.ವಿ. ಜಯಲಕ್ಷ್ಮಮ್ಮ ಎಂಬುವರು ಅಂತಿಮ ಅಧಿಸೂಚನೆಯನ್ನೇ ಪ್ರಶ್ನಿಸಿ 2016ರ ಫೆಬ್ರುವರಿಯಲ್ಲಿ ಹೈಕೋರ್ಟ್‌ ಮೊರೆ ಹೋದಾಗ, ಯೋಜನೆಯ ಲೋಪಗಳನ್ನು ತಿಳಿಸಿ ಅರ್ಜಿದಾರರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ’ ಎಂದು ಸಿದ್ದರಾಮಯ್ಯ ವಿವರಿಸಿದರು.

ಬಡಾವಣೆ ವಿಸ್ತರಣೆಗಾಗಿ 1978ರಲ್ಲಿ 131 ಎಕರೆ 33 ಗುಂಟೆ ಗುರುತಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 108 ಎಕರೆ 17 ಗುಂಟೆಗೆ 1982ರಲ್ಲಿ ಅಂತಿಮ ಅಧಿಸೂಚನೆ ಮಾಡಲಾಯಿತು. ಇದರಲ್ಲಿ ಬಿಡಿಎ ವಶಪಡಿಸಿಕೊಂಡಿದ್ದು 69 ಎಕರೆ 22 ಗುಂಟೆ ಮಾತ್ರ. ಆದರೆ, ಬಡಾವಣೆ ನಿರ್ಮಾಣವಾಗಿದ್ದು 13 ಎಕರೆ 34 ಗುಂಟೆ ಪ್ರದೇಶದಲ್ಲಿ. ಹೀಗಾಗಿ ಯೋಜನೆಯೇ ಕ್ರಮಬದ್ಧವಾಗಿಲ್ಲ ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಈ ಸಂಬಂಧ ಬಿಡಿಎ ಮೇಲ್ಮನವಿ ಹೋಗುವುದು ಸೂಕ್ತವಲ್ಲ ಎಂದು ಕಾನೂನು ಇಲಾಖೆಯೂ ಸಲಹೆ ನೀಡಿದ್ದರಿಂದ ವಿಷಯನ್ನು ಅಲ್ಲಿಗೇ ಕೈಬಿಡಲಾಗಿತ್ತು ಎಂದರು.

ಶಾಸಕ ವಸಂತ ಬಂಗೇರಾ ಈ ಬಡಾವಣೆಯಲ್ಲಿನ 4 ಕಂದಾಯ ನಿವೇಶನಗಳಿಗೆ ಸಂಬಂಧಿಸಿದಂತೆ ನನಗೆ ಮನವಿಯೊಂದನ್ನು ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಎಂದು ಟಿಪ್ಪಣಿ ಬರೆದಿದ್ದೆ. ಹಾಗೆಂದ ಮಾತ್ರಕ್ಕೆ ಅದು ಡಿನೋಟಿಫೈ ಮಾಡಿ ಎಂದು ಸೂಚನೆ ನೀಡಿದಂತೆ ಎಂದು ಭಾವಿಸಿದರೆ ಹೇಗೆ ಎಂದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group