ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಬಾಲಕಿಯ ಚಿಕಿತ್ಸೆಯ ಮನವಿಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್

ಮೋದಿ ಸಂಪುಟದ ಕ್ರಿಯಾಶೀಲ ಸಚಿವೆ ಸುಷ್ಮಾ ಸ್ವರಾಜ್

ವಿರೋಧ ಪಕ್ಷದವರಿಂದಲೂ ಶಹಬ್ಬಾಸ್ಗಿರಿ ಪಡೆಯುತ್ತಿರುವ ಮಾನವತಾವಾದಿ !

ವರದಿಗಾರ: ತನ್ನ ಮಗಳ ಶಸ್ತ್ರ ಚಿಕಿತ್ಸೆಗಾಗಿ ಪಾಕಿಸ್ತಾನದ ಲಾಹೋರ್ ಮೂಲದ ವ್ಯಕ್ತಿಯ ಮನವಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಸ್ಪಂದಿಸಿದ್ದು, ವೈದ್ಯಕೀಯ ವೀಸಾ ನೀಡಲಾಗುವುದೆಂದು ಟ್ಟಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮಗಳ ಶಸ್ತ್ರ ಚಿಕಿತ್ಸೆಗಾಗಿ ಉಝೈರ್‌ ಹುಮಾಯೂನ್‌ ವೀಸಾಕ್ಕಾಗಿ ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್‌, ತೆರೆದ ಹೃದಯದ ಶಸ್ತ್ರಚಿಕಿತ್ಸೆ ಅಗತ್ಯವಿರುವ ಮೂರು ವರ್ಷದ ಬಾಲಕಿಗೆ ಮತ್ತು ಯಕೃತ್ತು ಕಸಿಗೆ ಒಳಗಾಗಲಿರುವ ವ್ಯಕ್ತಿಯೊಬ್ಬರಿಗೆ ವೈದ್ಯಕೀಯ ವೀಸಾ ನೀಡಲಾಗುವುದೆಂದು ಅವರು ಹೇಳಿದ್ದಾರೆ.

ಅದಲ್ಲದೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಬಾಲಕಿ ಶೀಘ್ರ ಗುಣಮುಖಳಾಗಲಿ ಎಂದು ಹಾರೈಸಿದ್ದಾರೆ.

ಸಚಿವರ ಈ ಮಾನವೀಯತೆಯ ಮಿಡಿತ ಮೊದಲ ಬಾರಿಯೇನಲ್ಲ. ಅದೆಷ್ಟೋ ಭಾರತೀಯರು ವಿದೇಶಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾಗ, ಅವರ ಪರವಾಗಿ ತನ್ನ ವಿದೇಶಿ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಿ ಅವರನ್ನು ಪಾರು ಮಾಡಿದ್ದರು ಸುಷ್ಮಾ ಸ್ವರಾಜ್. ಮೋದಿ ಮಂತ್ರಿಮಂಡಲದಲ್ಲಿ ಓರ್ವ ಕ್ರಿಯಾಶೀಲ ಸಚಿವರಾಗಿದ್ದಾರೆ ಸುಷ್ಮಾ. ಸುಷ್ಮಾರ ಈ ಕಾರ್ಯಗಳನ್ನು ವಿರೋಧ ಪಕ್ಷದವರು ಕೂಡಾ ಪಕ್ಷಾತೀತವಾಗಿ ಪ್ರಶಂಸಿಸುತ್ತಿದ್ದಾರೆ. ಹಲವಾರು ಜನಪರವಾಗಿರುವ ಕೆಲಸಗಳನ್ನು ಯಾವುದೇ ಪ್ರಚಾರಗಳ ಅಬ್ಬರವಿಲ್ಲದೆ ಮಾಡಿ ಜನರ ಮನಸೂರೆಗೊಳ್ಳುತ್ತಿದ್ದಾರೆ. ‘ಮದದ್’ ಅಪ್ಲಿಕೇಶನ್ ಮೂಲಕ ಬರುವಂತಹಾ ಮತ್ತು ಟ್ವಿಟ್ಟರ್ ಮೂಲಕ ಬರುವಂತಹಾ ಎಲ್ಲಾ ಅಹವಾಲುಗಳನ್ನು ಖುದ್ದಾಗಿ ಪರಾಮರ್ಶಿಸಿ, ಸೂಕ್ತವಾಗಿ ಸ್ಪಂದಿಸುತ್ತಾ ಮೌನ ಕ್ರಾಂತಿಯೊಂದಕ್ಕೆ ಸಾಕ್ಷಿಯಾಗಿದ್ದಾರೆ.

ಇದೇ ವೇಳೆ ನೂರ್ಮಾ ಹಬೀಬ್ ಎನ್ನುವ ಮಹಿಳೆಯೊಬ್ಬರ ತಂದೆಯ ಕಿಡ್ನಿ ಕಸಿ ಚಿಕಿತ್ಸೆಗೂ ಇದೇ ರೀತಿ ಸ್ಪಂದಿಸಿದ್ದಾರೆ. ಸುಷ್ಮಾರವರು ಖುದ್ದು ತನಗೆ ಕಿಡ್ನಿ ಟ್ರಾನ್ಸ್’ಪ್ಲಾಂಟ್ ಚಿಕಿತ್ಸೆಗೆ ಒಳಪಟ್ಟಿದ್ದಾಗಲೂ ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ಮತ್ತು ಮದದ್ ಆಪ್ ಮೂಲಕ ತನಗೆ ಬರುತ್ತಿದ್ದ ಮಾನವೀಯ ಕರೆಗಳಿಗೆ ಹೃದಯಾಂತರಾಳದಿಂದ ಸ್ಪಂದಿಸಿ ಜನಮನ ಗೆದ್ದಿದ್ದರು.

ರಾಜಕೀಯ ಮತ್ತು ಇತರೆಲ್ಲಾ ರಾಜತಾಂತ್ರಿಕ ಸಮಸ್ಯೆಗಳನ್ನು ಬದಿಗೊತ್ತಿ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟು ವಿದೇಶಿ ರೋಗಿಗಳ ಚಿಕಿತ್ಸಾ ಕರೆಗೆ ಓಗೊಡುತ್ತಿರುವ ಸಚಿವೆಯ ಜನಾನುರಾಗಿ ಕೆಲಸಗಳು ಮುಂದುವರಿಯಲೆಂದು ಹಾರೈಸೋಣ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group