ಜಿಲ್ಲಾ ಸುದ್ದಿ

ಗೌರಿ ಹುಟ್ಟು ಹಾಕಿದ ವಿಚಾರಧಾರೆಗಳನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ: ಮುಸ್ತಫಾ ಕೆಂಪಿ

ವರದಿಗಾರ-ಪುತ್ತೂರು: ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕಗ್ಗೊಲೆಯ ಹಂತಕರನ್ನು ಸರಕಾರ ಶೀಘ್ರವಾಗಿ ಬಂಧಿಸಬೇಕೆಂದು ಆಗ್ರಹಿಸಿ, ಗೌರಿ ಲಂಕೇಶ್ ಹತ್ಯಾ ವೇದಿಕೆಯು  ದೇಶವ್ಯಾಪಿ ನಡೆಸುತ್ತಿರುವ ಪ್ರತಿಭಟನೆಗೆ ಪೂರಕವಾಗಿ ಉಪ್ಪಿನಂಗಡಿಯ ಪ್ರಗತಿಪರ ವೇದಿಕೆಯಿಂದ ಇಲ್ಲಿಯ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾಲಿಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ  ಅಧ್ಯಕ್ಷರಾದ ಹಾಜಿ ಮುಸ್ತಫಾ ಕೆಂಪಿ ಮಾತನಾಡುತ್ತಾ, ಹಿಂಸಾರಹಿತ ವಿಚಾರಧಾರೆಯ ಪ್ರತಿಪಾದಕಳಾಗಿ ಮತ್ತು ಅದನ್ನು ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದ ಮಾತೃ ಹೃದಯಿಯಾಗಿದ್ದ ಗೌರಿ ಲಂಕೇಶ್ ಕೊನೆಗೆ ಅದೇ ಹಿಂಸೆಗೆ ಬಲಿಯಾದದ್ದು ದೇಶದ ದುರಂತ, ಕ್ರೂರ ಮನಸ್ಥಿತಿಯ ಹಂತಕರು ಗೌರಿಯೆಂಬ ಶರೀರವನ್ನು ಕೊಂದಿರಬಹುದು,ಆದರೆ ಅವರು ಲಕ್ಷಾಂತರ ಗೌರಿಗಳಲ್ಲಿ ಹುಟ್ಟು ಹಾಕಿದ ವಿಚಾರಧಾರೆಗಳನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತನ್ಸಿಫ್ ಬಿ.ಎಂ, ಸತ್ಯವನ್ನು ಹೇಳಿದ್ದಕ್ಕೆ, ಶೋಷಣೆಯನ್ನು ವಿರೋಧಿಸಿದ್ದಕ್ಕೆ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಕ್ಕೆ, ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದದ್ದಕ್ಕೆ, ಜನರ ಮುಗ್ದತೆ-ಮೌಡ್ಯಗಳನ್ನು ಬಂಡವಾಳ ಮಾಡಿಕೊಂಡು ಅವರನ್ನು ಹಿಂಡುವ ಹಿಡಿಯಷ್ಟು ಶೋಷಕರಿಗೆ ತಾತ್ವಿಕವಾಗಿ ಪ್ರತಿರೋಧ ಒಡ್ಡುತ್ತಾ, ಶೋಷಿತರಿಗೆ ಆತ್ಮವಿಶ್ವಾಸ ತುಂಬಿ ಶೋಷಣೆಯ ವಿರುದ್ಧ ದನಿ ಎತ್ತುವಂತೆ ಪ್ರೇರೇಪಿಸುತ್ತಾ, ಹೇಳತೀರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಾ ಬಂದ ಗೌರಿ ಲಂಕೇಶ್ ರವರನ್ನು ಹತ್ಯೆಗೈದಿರುವುದು ವಿಚಾರಗಳನ್ನು ವಿಚಾರಗಳಿಂದ ಎದುರಿಸಲಾರದವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ವರ್ತಕರ ಸಂಫದ ಕಾರ್ಯದರ್ಶಿ ಯುನಿಕ್ ಅಬ್ದುಲ್ ರಹಿಮಾನ್, ಗ್ರಾ.ಪಂ. ಸದಸ್ಯ ಮತ್ತು ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ, ಅಝೀಝ್ ನಿನ್ನಿಕಲ್ಲು,  ಪ್ರಗತಿಪರರ ವೇದಿಕೆಯ ಶಬೀರ್ ಕೆಂಪಿ, ಇಬ್ರಾಹಿಂ ಪಿಲಿಗೂಡು, ಶಹೀದ್ ನಂದಾವರ, ಅಮ್ಮಿ ಸನ್ಮಾನ್, ಝುಬೈರ್ ಕೊಯ್ಲ, ರಿಯಾಝ್ ಕಡವಿನಬಾಗಿಲು,ಆಶಿಕ್ ಅರಫಾ, ಆಶಿಕ್ ರಾಮನಗರ, ಶಲೂಲ್ ಯು.ಟಿ, ಇಬ್ರಾಹಿಂ ಆಚಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಪ್ರಗತಿಪರ ವೇದಿಕೆಯ ಇರ್ಶಾದ್ ಯು.ಟಿ ಉಪ್ಪಿನಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group