ರಿಯಾದ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಂಗಳೂರು ಯುವಕ: ಅಂತ್ಯ ಸಂಸ್ಕಾರಕ್ಕೆ ನೆರವಾದ ಕೆಸಿಎಫ್

ವರದಿಗಾರ-ರಿಯಾದ್: ಇಲ್ಲಿನ ಗೊರ್ನಾತ ಎಂಬಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನಾಟೆಕಲ್ ಉರುಮಣೆ ನಿವಾಸಿ ಅಶ್ರಫ್ (38ವ.) ರವರ ಅಂತ್ಯ ಸಂಸ್ಕಾರವು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ನೆರವಿನಿಂದ ಇಲ್ಲಿನ ನಸೀಂ ಸಾರ್ವಜನಿಕ ಧಫನ ಭೂಮಿಯಲ್ಲಿ ಕಳೆದ ಸೋಮವಾರ ನಡೆಯಿತು. 

     ಕಳೆದ ಕೆಲವು  ವರ್ಷಗಳಿಂದ ರಿಯಾದ್ ಪ್ರಾಂತ್ಯದ ಗೊರ್ನಾತ ಎಂಬಲ್ಲಿನ ಸೂಪರ್ ಮಾರ್ಕೆಟ್ ಒಂದರಲ್ಲಿ ಸೇಲ್ಸ್ ಮನ್ ಆಗಿ ದುಡಿಯತ್ತಿದ್ದ ಯುವಕ ಅಶ್ರಫ್ ಇತ್ತೀಚೆಗೆ ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ತನ್ನ ಕೊಠಡಿಯಲ್ಲಿ ಬಂದು ನಿದ್ದೆ ಮಾಡಿದ್ದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಕುರಿತಂತೆ ಮೃತರ ಮಿತ್ರರು ಸ್ಥಳೀಯ ಕೆಸಿಎಫ್ ಕಾರ್ಯಕರ್ತರಿಗೆ ಸುದ್ದಿ ಮುಟ್ಟಿಸಿದ್ದು ಕೂಡಲೇ ಸ್ಪಂದಿಸಿದ  ಕೆಸಿಎಫ್ ರಿಯಾದ್ ಝೋನಲ್ ನ ಸಾಂತ್ವನ ವಿಭಾಗದ ತಂಡವು ಮೃತರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದ ಶುಮೇಶಿ ಆಸ್ಪತ್ರೆಗೆ ತೆರಳಿ ಕುಟುಂಬಕ್ಕೆ ಹಾಗೂ ಮಿತ್ರರಿಗೆ ಸಾಂತ್ವನ ಹೇಳಿದೆ.
ಮೃತರ ಮರಣೋತ್ತರ ಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ಕಾನೂನು ಪ್ರಕ್ರಿಯೆಗಳನ್ನು ಸಂಗ್ರಹಿಸಲು ಹಾಗೂ ಊರಿನ ಕುಟುಂಬ ವರ್ಗದಿಂದ ಅನುಮತಿ ಪತ್ರ ಪಡೆಯಲು ಕೆಸಿಎಫ್ ರಿಯಾದ್ ಝೋನಲ್ ಸಾಂತ್ವನ ವಿಭಾಗದ ಅಧ್ಯಕ್ಷ ರಮೀಝ್ ಕುಳಾಯಿ ಜೊತೆಗೆ ಮುಖಂಡರಾದ ಹಂಝ ಮೈಂದಾಳ ,ಮಜೀದ್ ವಿಟ್ಲ ಹಾಗೂ ಮೃತರ ಸಂಬಂಧಿ ಹಸೈನಾರ್ ಅರ್ಕಾನ ಸಹಕರಿಸಿದ್ದರು.
ಒಂದು ವರ್ಷದ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅಶ್ರಫ್, ಮುಂಬರುವ ತಿಂಗಳು 6ರಂದು ರಜೆಯ ನಿಮಿತ್ತ ಊರಿಗೆ ತೆರಳಲು ಟಿಕೆಟ್ ಖರೀದಿಸಿದ್ದರು ಎನ್ನಲಾಗಿದೆ. ಆದರೆ ವಿಧಿಯೇ ಬೇರೆಯಾಗಿತ್ತು.
ಅಂತ್ಯ ಸಂಸ್ಕಾರ ಸಂದರ್ಭ ಕೆಸಿಎಫ್ ನ ರಾಷ್ಟ್ರೀಯ ,ಪ್ರಾಂತೀಯ ಮಟ್ಟದ ನಾಯಕರು,  ರಿಯಾದ್ ಝೋನಲ್ ಗೊಳಪಟ್ಟ ವಿವಿಧ ಸೆಕ್ಟರ್ ಗಳ ಕಾರ್ಯಕರ್ತರು, ಮೃತರ ಮಿತ್ರರು ಹಾಗೂ ಸ್ಥಳೀಯರೂ  ಉಪಸ್ಥಿತರಿದ್ದರು.
ಮೃತರ ಅಗಲುವಿಕೆಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಹಿತ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿದೆ.
error: Content is protected !!
%d bloggers like this:
Inline
Inline