ಅಂಕಣ

ಎಲ್ಲವೂ ಸರಿ ಇಲ್ಲದ ಆಲ್ ‘ರೈಟ್’ ಮಾಧ್ಯಮ!

ರಗಳೆ ಅಂಕಣ : ಫಯಾಝ್ ಎನ್

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಬಾಂಬು ಪತ್ತೆಯಾಗುವುದು ಇದೇ ಮೊದಲಲ್ಲ. ದುಬಾಯಿಗೆ ತೆರಳುತ್ತಿದ್ದ ವ್ಯಕ್ತಿಯ ಬ್ಯಾಗಿನಲ್ಲಿ ಮೊಬೈಲ್ ಪವರ್ ಬ್ಯಾಂಕನ್ನು ಬಾಂಬು ಆಗಿ ಪರಿವರ್ತಿಸುವಲ್ಲಿ ರಿಪಬ್ಲಿಕ್ ಅರ್ನಾಬನೊಂದಿಗೆ ಕೆಲವು ಪೂರ್ವಾಗ್ರಹಪೀಡಿತ ಮಾಧ್ಯಮಗಳು ಅರಚಾಡುತ್ತಿದ್ದವು.

“ನೇಶನ್ ವಾಂಟ್ಸ್ ಟು ನೋ” ಎಂದು ಅರಚಾಡುತ್ತಿದ್ದ ಪತ್ರಕರ್ತನ ನಿಜಬಣ್ಣವನ್ನು ಈಗ ಜನರು ಅರಿತಿದ್ದಾರೆ. ಅಲ್ಲಿಂದ ಪಲಾಯನಗೈದ ಸುದ್ದಿನಿರೂಪಕ ಮತ್ತೆ ಅರಚಾಡುತ್ತಿದ್ದಾನೆ. ಎಷ್ಟೇ ಆದರೂ ನಮ್ಮದು ‘ರಿಪಬ್ಲಿಕ್’ ಕಂಟ್ರಿ ಅಲ್ಲವೇ?! ಅದು ಬಿಟ್ಟು ಕನ್ನಡ ಸುದ್ದಿ ಚಾನೆಲ್ ನೋಡೋಣವೆಂದರೂ ಪಬ್ಲಿಕ್ ಆಗಿ ಕಿರುಚಾಡಿಕೊಂಡು ಸುದ್ದಿ ನಿರೂಪಣೆ ಮಾಡುವ ಚಾಳಿ ಇಲ್ಲಿ ದಿಲ್ಲಿಗಿಂತ ಹೆಚ್ಚಿದೆ. ಸುದ್ದಿ ನಿರೂಪಣೆಯ ಖರೆ ವಾಕರಿಕೆ ಬರಿಸುವಷ್ಟು ಅಸಹ್ಯ. “ಆಲ್ ರೈಟ್” ಮುಂದಕ್ಕೆ ಹೋಗೋಣ ಎಂದರೂ ನನ್ನ ಮನಸ್ಸು ಮುಂದೆ ಚಲಿಸುತ್ತಿರಲಿಲ್ಲ. ಏನಿದು “ಆಲ್ ರೈಟ್”? ಎಂದು ಆಲೋಚಿಸುತ್ತಿದ್ದೆ.

ಗೂಗಲ್ ಟ್ರಾನ್ಸ್ ಲೇಶನ್ ಹಾಕಿದರೂ ಅದರರ್ಥ “ಎಲ್ಲವೂ ಸರಿ” ಎಂದಾಗಿತ್ತು. ಆದರೆ ನಿರೂಪಕನ ಶೈಲಿ, ಸುದ್ದಿಯ ನಿರೂಪಣೆ, ಅದಕ್ಕೆ ನೀಡುತ್ತಿದ್ದ ಒಕ್ಕಣೆ…ಎಲ್ಲವೂ ಸರಿ ಎಂದು ಅನಿಸಲಿಲ್ಲ. ಅವರ ನಿಲುವು ಪೂರ್ವಾಗ್ರಹ ಪೀಡಿತವಾದಂತಿತ್ತು. ಆಗಲೇ ಹೊಳೆದದ್ದು “ಆಲ್ ರೈಟ್” ನ ಮರ್ಮವೇನು ಎಂಬುದು.

‘ರೈಟ್’ ಎಂದರೆ ಬಲ ಎಂದರ್ಥ. ನಿರೂಪಕನ ನಿಲುವು, ಒಕ್ಕಣೆಗಳೆಲ್ಲ ಬಲಪಂಥೀಯ ವಿಚಾರಧಾರೆಗಳಿಗೆ ಹತ್ತಿರವಾಗಿತ್ತು. ಮೋದಿ ಮಿಸ್ಟರಿ ಇಲ್ಲದೆ ದಿನದ ವಹಿವಾಟು ಕೊನೆಗೊಳಿಸದ ಕನ್ನಡ ನ್ಯೂಸ್ ಚಾನೆಲ್ ಗಳ ಪೈಕಿ ‘ಆಲ್ ರೈಟ್’ ಕೂಡಾ ಒಂದು. ಎಲ್ಲವೂ ಬಲಪಂಥೀಯವಾದ ನೆಚ್ಚಿಕೊಂಡಿರುವುದಕ್ಕೆ ಪ್ರತಿ ಸುದ್ದಿಯ ಕೊನೆಗೆ “ಆಲ್ ರೈಟ್” ಎಂದು ನೆನಪಿಸುತ್ತಾ ಇರುವುದು. ಅಂದರೆ ಎಲ್ಲವೂ ‘ರೈಟ್’ ಗೆ ಇದೆ ಎಂದರ್ಥಲ್ಲವೇ?

ಇದು ಒಂದು ಚಾನೆಲ್ ನ ಖಯಾಲಿ ಮಾತ್ರವಲ್ಲ. ಕೆಲವರಂತೂ ಮನಸ್ಸಿನ ನೆಮ್ಮದಿಗಾಗಿ ಪ್ರವಾಸಿ ತಾಣಕ್ಕೆ ಹೋಗುವುದನ್ನು ಕೇಳಿದ್ದೇನೆ. ಮನಸ್ಸು ಸ್ವಲ್ಪ ರಿಲ್ಯಾಕ್ಸ್ ಆಗಲು ಪ್ರಕೃತಿ ರಮಣೀಯ ಸ್ಥಳಗಳಿಗೆ ಹೋಗುವ ಪರಿಪಾಠ ಹೆಚ್ಚಿನವರಿಗಿದೆ. ನಾನಂತೂ ಶಾಂತಿ ಸಮಾಧಾನ ಬೇಕೆಂದರೆ ಒಂದು ವಾರ ಕನ್ನಡ ನ್ಯೂಸ್ ಚಾನೆಲ್ ನೋಡುವುದನ್ನು ಬಿಟ್ಟುಬಿಡುತ್ತೇನೆ. ಅಷ್ಟಕ್ಕೂ ಎಲ್ಲವೂ ಸರಿಯಿಲ್ಲದ ‘ಆಲ್ ರೈಟ್’ ಮಾಧ್ಯಮಗಳಿಂದ ದೊರೆಯುವ ಜ್ಞಾನವಾದರೂ ಏನು?

ಬೇಡ ಬೇಡವೆಂದರೂ ಕೆಲವು ನ್ಯೂಸ್ ಚಾನೆಲ್ ಗಳ ವೀಡಿಯೋ ತುಣುಕುಗಳು ಮೊಬೈಲ್ ಗಳಿಗೆ ವಾಟ್ಸಪ್ ಮೂಲಕ ವಕ್ಕರಿಸಿಕೊಳ್ಳುತ್ತದೆಯಲ್ಲವೇ? ಅದರಲ್ಲೂ ಸೆಲೆಕ್ಟಿವ್ ಮೆಸೇಜ್ ಗಳನ್ನು ಮಾತ್ರ ನೋಡುತ್ತಿರುವಾಗ ಸ್ನೇಹಿತನೊಬ್ಬ ಮಾಧ್ಯಮಕ್ಕೆ ಸಂಬಂಧಿಸಿದ ವೀಡಿಯೋ ಮೆಸೇಜು ನನಗೆ ತುಂಬಾ ಇಷ್ಟವಾಯಿತು.

ನಿರೂಪಕಿ ಪ್ರಶ್ನಿಸುತ್ತಿದ್ದಳು. ಆಕೆಯ ಹಲವು ಪ್ರಶ್ನೆಗೆ ಆತ ಸಂತನಂತೆ ಉತ್ತರಿಸುತ್ತಿದ್ದ. “ಮಾಧ್ಯಮದ ಬಗ್ಗೆ ನೀವೇನು ಹೇಳುತ್ತೀರಾ?” ಆಕೆ ಕೇಳಿದ ಪ್ರಶ್ನೆಗೆ ಸಂತ ರಂಗಣ್ಣ ನೀಡಿದ ಉತ್ತರ “ಒಂದು ಹರಿತವಾದ ಚಾಕುವನ್ನು ಏನೂ ಗೊತ್ತಿಲ್ಲದ ಮಗುವಿನ ಕೈಯಲ್ಲಿ ಕೊಟ್ಟರೆ ಏನಾಗುತ್ತೆ? ಅದು ಜವಾಬ್ಧಾರಿ ಇರುವವರ ಕೈಯಲ್ಲಿ ಇರಬೇಕು.” ಅದೇ ರೀತಿ ಶಿಕ್ಷಣದ ಬಗ್ಗೆ ಸಂತ ನೀಡುವ ಪ್ರತಿಕ್ರಿಯೆ “ಈಗಿನ ಶಿಕ್ಷಣ ಕಳ್ಳತನವನ್ನು ಟ್ಯಾಲೆಂಟ್ ಅನ್ನುತ್ತೆ; ಮೋಸವನ್ನು ಮ್ಯಾನೇಜ್ ಮೆಂಟ್ ಅನ್ನುತ್ತೆ” ಎಂದು ವಿವರಿಸುವಾಗ ನನಗಂತೂ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಸರ್ಜಿಕಲ್ ಸ್ಟ್ರೈಕ್, ಜಿಡಿಪಿ, ಮೋದಿ ಮಿಸ್ಟರಿ, ಮೇಕ್ ಇನ್ ಇಂಡಿಯಾ, ನೋಟು ಬ್ಯಾನ್….ಸುದ್ದಿಗಳ ನೆನಪಾಯಿತು. ದೇಶದ ಜನರೊಂದಿಗೆ ನಡೆಸಿದ ಮೋಸವನ್ನು ಮ್ಯಾನೇಜ್ ಮೆಂಟ್ ಎಂದು ತೋರಿಸುತ್ತಿರುವ ಮಾಧ್ಯಮಗಳ ಬಗ್ಗೆ ಜಿಗುಪ್ಸೆ ಹುಟ್ಟುತ್ತಿದೆ.

ಹಿಂದೊಮ್ಮೆ ಮಾಧ್ಯಮ ಕಾರ್ಯಾಗಾರವೊಂದು ನಡೆಯುತ್ತಿತ್ತು. ಸಂಪನ್ಮೂಲ ವ್ಯಕ್ತಿ ಮಾಧ್ಯಮದ ಅಗತ್ಯತೆಯ ಬಗ್ಗೆ ವಿವರಿಸುತ್ತಿದ್ದರು. ಪ್ರಶ್ನೋತ್ತರ ವೇಳೆಯಲ್ಲಿ ಶಿಬಿರಾರ್ಥಿಯೊಬ್ಬ ಪ್ರಶ್ನಿಸಿದ “ಸರ್,  ಮಾಧ್ಯಮಗಳಲ್ಲಿ ಅನಾಚಾರ, ಕೊಲೆ, ಸುಲಿಗೆ, ಅತ್ಯಾಚಾರ, ಅಪರಾಧ ಸುದ್ದಿಗಳೇ ವೈಭವವಾಗುತ್ತಿದೆಯಲ್ಲವೇ?”  ಅದಕ್ಕೆ ಸಂಪನ್ಮೂಲ ವ್ಯಕ್ತಿ ನೀಡಿದ ಪ್ರತಿಕ್ರಿಯೆ ಈ ರೀತಿ ಇತ್ತು “ಮಾಧ್ಯಮ ಸಮಾಜದ ಕನ್ನಡಿ. ಸಮಾಜ ಹೇಗಿರುತ್ತದೋ ಅದು ಮಾಧ್ಯಮದಲ್ಲಿ ಪ್ರತಿಫಲಿಸುತ್ತದೆ”.
ಶಿಬಿರಾರ್ಥಿ ಚುಡಾಯಿಸಿದ “ಸಾರ್! ಯಾವ ಕನ್ನಡಿಯನ್ನು ನಂಬೋದು? ಇವತ್ತು ಸಂತೆಯಲ್ಲಿ ನಮ್ಮನ್ನು ವಿಕೃತಿಯಾಗಿ ತೋರಿಸುವ ಸಾಕಷ್ಟು ಕನ್ನಡಿಗಳು ಇವೆಯಲ್ಲಾ? ಅವುಗಳ ಪೈಕಿ ನಿಮ್ಮದು ಯಾವುದು?” ಆಲ್ ರೈಟ್ ಶಿಬಿರವನ್ನು ಅಲ್ಲಿಗೇ ಮುಗಿಸಬೇಕಾಯಿತು!

ವರ್ಷದ ಹಿಂದೆ ಗೌರಿಲಂಕೇಶ್ ಪತ್ರಿಕೆಯಲ್ಲಿ ಶ್ರೀದೇವಿ ಕೆರೆಮನೆ ಅವರು ಮಾಧ್ಯಮಗಳ TRP ಹುಚ್ಚಾಟದ ಕುರಿತಂತೆ “ಕಣ್ಣೀರಿನಿಂದಲೂ ಕಾಸಿಗೆ ಬರುವರು” ಲೇಖನವೊಂದನ್ನು ಬರೆದಿದ್ದರು. ಅವರು ಆ ಲೇಖನದಲ್ಲಿ ಉಲ್ಲೇಖಿಸಿದ್ದ ಘಟನೆಯೊಂದು ನಿತ್ಯವೂ ನನಗೆ ನೆನಪಾಗುತ್ತದೆ. ಕಾರಣ,  ಅಂತಹ ದೃಶ್ಯಗಳು ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಮತ್ತೆ ಮತ್ತೆ ಕಾಣಿಸುತ್ತಿವೆ. “ಎಡವಿ ಬಿದ್ದ ತಮ್ಮನನ್ನು ಎತ್ತಿ ಸಂತೈಸುವ ಬದಲು, ‘ನೀವು ಜೋರಾಗಿ ಬಿದ್ದು ಮಂಡಿಗೆ ಗಾಯವಾಗಿದೆ. ಇದರ ಬಗ್ಗೆ ನಿಮಗೆ ಏನು ಅನಿಸುತ್ತಿದೆ?’ ಎಂದು ಪ್ರಶ್ನೆ ಕೇಳಿದ್ದ. ನೋವಾದ ತಮ್ಮನನ್ನು ಎತ್ತಿಕೊಂಡು ಬರುವ ಬದಲು ಆತನ ಮುಖದ ಎದುರು ಮೈಕ್ ಹಿಡಿಯುವ ನಾಟಕ ಮಾಡುತ್ತೀಯಲ್ಲಾ? ಅವನು ನೋವಿನಿಂದ ಅಳುತ್ತಿರೋದು ನಿನಗೆ ಕಾಣುತ್ತಿಲ್ಲವೆ? ಎಂದು ಬೈಸಿಕೊಂಡ ಮಗ ಕೂಡಾ ಹೇಳಿದ್ದು ಇದೇ ಮಾತನ್ನು. ‘ಆಕ್ಸಿಡೆಂಟ್ ಆಗಿ ಸತ್ತವರ ಸಂಬಂಧಿಕರ ಬಳಿ ಮೈಕ್ ಹಿಡಿದು ನಿಮಗೆ ಏನು ಅನಿಸ್ತಿದೆ ಅಂತಾ ಕೇಳೋದಿಲ್ವೇ ಅಮ್ಮಾ? ಹೀಗಾಗಿ ನಾನು ಕೂಡಾ ತಮಾಷೆಗೆ ಕೇಳಿದ್ದು…” ಎಂದು ಶ್ರೀದೇವಿ ಕರೆಮನೆಯವರು ತಮ್ಮ ಲೇಖನದಲ್ಲಿ ಆ ಘಟನೆಯನ್ನು ವಿವರಿಸುತ್ತಾರೆ. ಬೆಂಗಳೂರಿನಲ್ಲಿ ಶಾಲಾ ಕಟ್ಟಡವೊಂದು ಕುಸಿದು ಬಿದ್ದು ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡಾಗ ಒದ್ದಾಡುತ್ತಿದ್ದ ಮಕ್ಕಳ ಹೆತ್ತವರ ಆಕ್ರಂದನವನ್ನು ಪದೇ ಪದೇ ಪ್ರಸಾರ ಮಾಡುತ್ತಾ ಅವರಲ್ಲಿ ಮೈಕ್ ಹಿಡಿದು ಕೇಳುತ್ತಿದ್ದರು “ನಿಮಗೆ ಏನು ಅನಿಸುತ್ತಿದೆ?” ಎಂದು!

ಆಲ್ ‘ರೈಟ್’ಗೆ ವಾಲಿರುವ ಕನ್ನಡದ ಬಹುತೇಕ ನ್ಯೂಸ್ ಚಾನೆಲ್ ಗಳು ನಡೆಸುವ ಪ್ಯಾನೆಲ್ ಚರ್ಚೆಯಲ್ಲಿ ಹಲವು ಬಾರಿ ನಾನು ನಿರೂಪಕನನ್ನು ಹುಡುಕಾಡಿದ್ದುಂಟು. ಸಂಘಪರಿವಾರದ ಪ್ರತಿನಿಧಿಗಳೊಂದಿಗೆ ಸೇರಿಕೊಂಡು ವಿಚಾರಗಳನ್ನು ವಿಕೃತಿಗೊಳಿಸುವ ನಿರೂಪಕನ ಶೈಲಿಯು ಪತ್ರಿಕಾ ಧರ್ಮಕ್ಕೆ ಕಳಂಕ.  ಜನರನ್ನು ದಾರಿತಪ್ಪಿಸುವ ಇಂತಹ ಮಾಧ್ಯಮಗಳಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವೇ? ಬೆಲೆಯೇರಿಕೆ, ಜನವಿರೋಧಿ ನೀತಿಗಳು, ಕುಸಿಯುತ್ತಿರುವ ದೇಶದ ಜಿಡಿಪಿ, ಮಾನವ ಹಕ್ಕುಗಳ ಉಲ್ಲಂಘನೆ…ಇದ್ಯಾವುದರ ಕುರಿತು ಪ್ರಬುದ್ಧ ಚರ್ಚೆಗಳಿಗೆ ಅವಕಾಶ ನೀಡದ ಮಾಧ್ಯಮಗಳು ಯಾರ ಪರವಾಗಿ ಕೆಲಸ ನಿರ್ವಹಿಸುತ್ತಿವೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಆಲ್ ರೈಟ್ ಎಂದಾಕ್ಷಣ ಮುಂದಕ್ಕೆ ಹೋಗಲು ಇದೇನು ಲೋಕಲ್ ಬಂಡಿಯಲ್ಲ.  ನೇರ, ದಿಟ್ಟ, ನಿರಂತರವಾಗಿ ಫ್ಯಾಶಿಸಮನ್ನು ಪ್ರಚಾರ ಮಾಡುತ್ತಿರುವ ಮಾಧ್ಯಮಗಳಿಂದ ದೂರವಿದ್ದು, ಕೆಲವೊಂದು ದಿನ ಮನಸ್ಸಿಗೆ ನೆಮ್ಮದಿ ತಂದುಕೊಳ್ಳಬೇಕೆಂದಿದ್ದೇನೆ. ಶಾಂತಿ ಸುವ್ಯವಸ್ಥೆಗೆ ಸೆಕ್ಷನ್ 144 ನಿಷೇಧಾಜ್ಞೆಗಿಂತಲೂ ಜನರಲ್ಲಿ ಆತಂಕ, ವದಂತಿಯನ್ನು ಹಬ್ಬಿಸುತ್ತಿರುವ ಚಾನೆಲ್ ಗಳಿಗೆ ಕಡಿವಾಣ ಹೇರಿದರೆ ಎಲ್ಲವೂ ಸರಿ ಹೋದೀತು.

To Top
error: Content is protected !!
WhatsApp chat Join our WhatsApp group