ಕಲ್ಲಡ್ಕ ಗಲಭೆ : ವಿಚಾರಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ವರದಿಗಾರ-ಬಂಟ್ವಾಳ :  ಕಳೆದ ಜೂನ್ 13 ರಂದು ಕಲ್ಲಡ್ಕದಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ 26 ಮಂದಿಯ ಮೇಲೆ ಎಫ್ ಐ ಆರ್ ದಾಖಲಿಸಿದ್ದ ಪೊಲೀಸರ ಏಕ ಪಕ್ಷೀಯ ಕ್ರಮದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಕಲ್ಲು ತೂರಾಟದ ಘಟನೆಗಳಿಗೆ ಸಂಬಂಧಿಸಿದಂತೆ ಏಕಪಕ್ಷೀಯವಾಗಿ ವರ್ತಿಸಿದ್ದಾರೆಂದು ಪೊಲೀಸರ ಮೇಲೆ ಆರೋಪ ಮಾಡಲಾಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಎಸ್ಸೈ ರಕ್ಷಿತ್ ಗೌಡ ನೇತೃತ್ವದ ಪೊಲೀಸರು, 26 ಮಂದಿ ಮುಸ್ಲಿಮರು ಮತ್ತು ಕೇವಲ ಎರಡು ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಿತ್ತು. ಅಹಿತಕರ ಘಟನೆಗಳಿಗೆ ಸಾಕ್ಷಿಯಾದ ಕಲ್ಲಡ್ಕ ಪರಿಸರಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಲು ಆಗಮಿಸಿದ ರಕ್ಷಿತ್ ಗೌಡರ ಮೇಲೆ ಕಲ್ಲು ತೂರಾಟವಾಗಿತ್ತೆಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದು, ಮಸೀದಿ ಮತ್ತು ಶ್ರೀ ರಾಮ ಮಂದಿರದ ಮೇಲಿಂದ ಕಲ್ಲು ತೂರಾಟ ನಡೆದಿತ್ತೆಂದು ಆರೋಪ ಪಟ್ಟಿ ತಯಾರಿಸಿದ್ದರು. ಆದರೆ ಪ್ರಕರಣದಲ್ಲಿ ಮೊದಲಿಗೆ 26 ಮಂದಿ ಮುಸ್ಲಿಂ ಯುವಕರನ್ನು ಮಾತ್ರ ಹೆಸರಿಸಿದ್ದು, ಪೊಲೀಸರು ನ್ಯಾಯಯುತವಾಗಿ ಪ್ರಕರಣವನ್ನು ನಡೆಸಿಕೊಳ್ಳುತ್ತಿಲ್ಲವೆಂದು ಆರೋಪಗಳು ಕೇಳಿ ಬಂದಿದ್ದವು.

ಈ ಪ್ರಕರಣದ ಕುರಿತಂತೆ ಆರೋಪಿಗಳ ಪರ ವಾದಿಸಿದ ಹೈಕೋರ್ಟ್ ಪರ ವಕೀಲ ಲತೀಫ್, ಪೊಲೀಸರು ಪ್ರಕರಣವನ್ನು ಏಕಪಕ್ಷೀಯವಾಗಿ ನಡೆಸಿಕೊಂಡಿದ್ದಾರೆ. ಘಟನೆಯಲ್ಲಿ 26 ಮುಸ್ಲಿಮರ ಮೇಲೆ ಕೇಸ್ ದಾಖಲಿಸಲಾಗಿದ್ದರೂ, ಗಾಯಾಳುಗಳು ಕೂಡಾ ಮುಸ್ಲಿಮರೇ ಆಗಿದ್ದಾರೆಂದು ನ್ಯಾಯಾಲದ ಗಮನಕ್ಕೆ ತಂದಿದ್ದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯ ದಿನಾಂಕದ ವರೆಗೆ ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿ ಆದೇಶಿಸಿತು.

error: Content is protected !!
%d bloggers like this:
Inline
Inline