ನಮ್ಮ ಹೆಜ್ಜೆ - ನಿಮ್ಮ ನುಡಿ

ಅಸತ್ಯದ ವಿರುದ್ಧ ನೀವಾಗಿದ್ದರೆ, ನಿಮ್ಮ ಹೆಜ್ಜೆಗೆ ಸಮಾಜ ಗೆಜ್ಜೆಯಾಗುತ್ತದೆ: ರಶೀದ್ ವಿಟ್ಲ

ನಮ್ಮ ಹೆಜ್ಜೆ, ನಿಮ್ಮ ನುಡಿ: ಬಹುತೇಕ ಮಾಧ್ಯಮಗಳು ರಾಜಕೀಯ ವ್ಯಕ್ತಿಗಳ ಹಿಡಿತದಲ್ಲಿದೆ. ಇಂದಿನ ಹೆಚ್ಚಿನ ಮಾಧ್ಯಮಗಳಿಂದ ನೈಜ ಘಟನೆಗಳು ಹೊರಬರುತ್ತಿಲ್ಲ. ಕೆಲ ಮಾಧ್ಯಮಗಳು ಅಡ್ಡ ಗೋಡೆಗಳ ಮೇಲೆ ದೀಪ ಇಡತ್ತವೆ. ಮಾಧ್ಯಮಗಳ ವರದಿಯನ್ನು ನಂಬಿ ಸೋತವರೂ ಇದ್ದಾರೆ. ತನಗೆ ತೋಚಿದಂತೆ ವರದಿ ಮಾಡುವವರೂ ಇದ್ದಾರೆ. ಗಾಳಿ ಸುದ್ದಿಗಳನ್ನು ಹರಡುವವರೂ ಇದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ನಿಜಸುದ್ದಿಗೆ ಬೆಲೆ ಇಲ್ಲದಂತಾಗಿದೆ. ಅತಿ ವರ್ಣರಂಜಿತ ಫೇಕು ಬರಹಗಳು ರಾರಾಜಿಸುತ್ತಿವೆ. ದೊಂಬಿ, ಗಲಾಟೆ, ಪಕ್ಷಪಾತ, ಧರ್ಮ-ಧರ್ಮಗಳ ನಡುವಿನ ಬಿರುಕಿಗೆ ಮಾಧ್ಯಮಗಳೇ ಮಧ್ಯವರ್ತಿಯಾಗುತ್ತಿರುವುದು ಸಮಾಜದ ದುರಂತ.

ಶಾಸನಕ್ಕೆ ನಾಲ್ಕು ಸ್ತಂಭಗಳಿವೆ ಎಂದು ನಂಬುವವರು ನಾವು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮೂರು ಸ್ತಂಭಗಳಾದರೆ ಇವುಗಳ ಎಡರು ತೊಡರುಗಳನ್ನು ಬಿಂಬಿಸುವ ನಾಲ್ಕನೇ ಸ್ತಂಭ ಪತ್ರಿಕಾರಂಗ. ಆದರೆ ಅದು ಕೆಲವರಿಂದ ಕೆಟ್ಟು ಹೋಗಿದೆ ಎಂದು ಭಾಸವಾಗುತ್ತಿದೆ. ಅರ್ಥಾತ್ ನಾಲ್ಕನೇ ಸ್ತಂಭ ಅಲುಗಾಡುತ್ತಿದೆ. ಪತ್ರಿಕೆ, ದೃಶ್ಯ ಮಾಧ್ಯಮಗಳು ಇಂದು ಬಲಿಷ್ಠರ ಕೈಗೊಂಬೆಯಾಗಿದೆ. ಪರಸ್ಪರ ಕೆಸರೆರಚಾಟಕ್ಕೆ ವೇದಿಕೆಯಾಗಿವೆ. ಈ ನಿಟ್ಟಿನಲ್ಲಿ ಸತ್ಯನಿಷ್ಟ, ವಸ್ತುನಿಷ್ಟ ಮಾಧ್ಯಮಗಳ ಅಗತ್ಯ ಮತ್ತು ಅನಿವಾರ್ಯತೆ ಇದೆ.

“ವರದಿಗಾರ”ನಿಗೆ ಸಮಾಜದಲ್ಲಿ ಸವಾಲಿದೆ. ವರದಿಗಾರ ಯಾವುದೇ ಪಕ್ಷ, ಜಾತಿ, ಧರ್ಮದ ತಳಹದಿಯಲ್ಲಿ ನಿಲ್ಲದೆ ನೈಜ ವರದಿಗಾರಿಕೆಗೆ ಬೆಳಕು ಚೆಲ್ಲಬೇಕು. ಈ ಹಾದಿಯಲ್ಲಿ ಸಾಗುವಾಗ ಕಲ್ಲು ಮುಳ್ಳುಗಳು ಸಹಜ. ಅದನ್ನು ಮೆಟ್ಟುವಾಗ ನೋವಾಗಬಹುದು. ಗುರಿ ಮುಟ್ಟುವಾಗ ಸಿಗುವ ಆತ್ಮತೃಪ್ತಿಗೆ ಬೆಲೆ ಕಟ್ಟಲಾಗದು. ಇಂದು ಟಿವಿ ಹಾಗೂ ಪತ್ರಿಕೆಗಳಿಗಿಂತ ಹೆಚ್ಚಾಗಿ ನೋಡುವ ಮಾಧ್ಯಮವಾಗಿ ಮೊಬೈಲ್ ಪರಿವರ್ತನೆಗೊಂಡಿದೆ. ವೆಬ್ ಪೋರ್ಟಲ್ ಗಳನ್ನು ಹೆಚ್ಚಾಗಿ ಓದುವವರು ಮೊಬೈಲ್ ಬಳಕೆದಾರರು. ಈ ನಿಟ್ಟಿನಲ್ಲಿ “ವರದಿಗಾರ” ವೆಬ್ ಪೋರ್ಟಲ್ ಯಶಸ್ವಿಯಾಗಲಿ. ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿ. ಘಟನೆಯಾದ ತಕ್ಷಣಕ್ಕೆ ಕೈಗೆಟಕುವ ನಿಜಸುದ್ದಿಗಳು ಮಾತ್ರ ಬಿತ್ತರಿಸಲಿ. ಸತ್ಯದ ಪರದೆಯನ್ನು ಎಳೆಯಿರಿ. ಸುದ್ದಿಗಳ ಜೊತೆಗೆ ಸಮಾಜಕ್ಕೆ ಫಲಪ್ರದವಾಗುವ ಅಂಕಣ ಬರಹಗಳಿಗೂ ಪ್ರಾಶಸ್ತ್ಯ ನೀಡುವಿರೆಂಬ ಭರವಸೆಯಿದೆ. ಎಡವದೆ ಮುನ್ನಡೆಯಿರಿ. ಅಸತ್ಯದ ವಿರುದ್ಧ ನೀವಾಗಿದ್ದರೆ ನಿಮ್ಮ ಹೆಜ್ಜೆಗೆ ಸಮಾಜ ಖಂಡಿತಾ ಗೆಜ್ಜೆಯಾಗುತ್ತದೆ. ಶುಭವಾಗಲಿ.
-ರಶೀದ್ ವಿಟ್ಲ

ಬರಹಗಾರರು, ಸ್ಥಾಪಕರು, ಎಂ.ಫ್ರೆಂಡ್ಸ್

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group