ಅಂಕಣ

ಗೌರಿ ಸಂಘಟಿಸಿದ ಪ್ರತಿರೋಧ ಸಮಾವೇಶ

ವರದಿಗಾರ-ರಗಳೆ:ಫಯಾಝ್ ಎನ್.

ಅವರ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿರಬಹುದು! ಗೌರಿಲಂಕೇಶ್ ಎಂಬ ಮಾನವ ಹಕ್ಕು ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಫ್ಯಾಷಿಸ್ಟ್ ವಿರೋಧಿ ಪತ್ರಕರ್ತೆಯನ್ನು ಗುಂಡಿಕ್ಕಿ ಮುಗಿಸಿದ ಮಾತ್ರಕ್ಕೆ ಫ್ಯಾಷಿಸಮ್ ವಿರುದ್ಧದ ಹೋರಾಟವು ಕ್ಷೀಣಗೊಳ್ಳುವುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. 2013ರ ಆಗಸ್ಟ್ 20ರಂದು ಮಹಾರಾಷ್ಟ್ರದಲ್ಲಿ ಪ್ರಗತಿಪರ ಚಿಂತಕ ನರೇಂದ್ರ ದಾಬೋಳ್ಕರ್ (67), 2015ರ ಫೆಬ್ರವರಿ 20ರಂದು ವಿಚಾರವಾದಿ ಗೋವಿಂದ ಪನ್ಸಾರೆ (81), 2015 ಆಗಸ್ಟ್ 30ರಂದು ಕರ್ನಾಟಕದ ಧಾರವಾಡದಲ್ಲಿ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ (76) ಮುಂತಾದ ಪ್ರಮುಖ ಮಾನವತಾವಾದಿಗಳನ್ನು ಫ್ಯಾಷಿಸ್ಟರು ಗುಂಡಿಕ್ಕಿ ಕೊಂದಿದ್ದರು. ಹತ್ಯೆಗೀಡಾದವರ ವಯಸ್ಸನ್ನು ಪರಿಗಣಿಸಿದರೆ ದೈಹಿಕವಾಗಿ ಇವರು ಯಾರ ಮೇಲೂ ಪ್ರಹಾರ ಮಾಡುವಷ್ಟು ತೋಳ್ಬಲ ಹೊಂದಿದವರಲ್ಲ. ಆದರೆ ಅವರಲ್ಲಿ ಫ್ಯಾಷಿಸ್ಟರು ಗುರುತಿಸಿದ್ದ ಅದಮ್ಯ ಶಕ್ತಿಯೊಂದಿತ್ತು. ಅದು ಜನರನ್ನು ಪ್ರಜ್ಞಾವಂತರನ್ನಾಗಿಸುವ, ಅನ್ಯಾಯದ ವಿರುದ್ಧ ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಮತ್ತು ಜನಸಾಮಾನ್ಯರನ್ನು ಮಾನವಹಕ್ಕು ಕಾರ್ಯಕರ್ತರನ್ನಾಗಿಸುವ ಶಕ್ತಿ. ಅವರ ವಿಚಾರಧಾರೆಗಳು, ಸೈದ್ಧಾಂತಿಕ ಬದ್ಧತೆಗಳು ಭಾರತ ನೆಲದಲ್ಲಿ ಗಾಂಧಿವಾದವನ್ನು ಜೀವಂತಗೊಳಿಸುತ್ತಿತು. ಹಾಗೆ ಜೀವ ಪಡೆದಾಗಲೆಲ್ಲಾ ಗೋಡ್ಸೆಯ ಗನ್ನು ಶಬ್ಧ ಮಾಡುತ್ತಲೇ ಇದ್ದವು. ಮೊನ್ನೆ ಸೆಪ್ಟೆಂಬರ್ 5ರಂದು ಗಾಂಧಿವಾದದ ಕೊಂಡಿಯಾಗಿದ್ದ ಗೌರಿ(55) ಯನ್ನು ಗುಂಡಿಟ್ಟು ಕೊಂದರು. ಗೋಡ್ಸೆಯ ಗುಂಡು ಮತ್ತೆ ಶಬ್ಧ ಮಾಡಿತು. ಇಲ್ಲಿಗೆ ಸಂಘರ್ಷವೆಲ್ಲಾ ಕೊನೆಗೊಂಡೀತೇ?

ಫ್ಯಾಷಿಸ್ಟ್ ವಿರೋಧಿಗಳ ಹತ್ಯೆ ಇದೇ ಮೊದಲಲ್ಲ…ಕೊನೆಯೂ ಅಲ್ಲ. ಅದು ಗೊತ್ತಿದ್ದೇ ಮಾನವತಾವಾದಿಗಳು ಮತ್ತೆ ಮತ್ತೆ ಹುಟ್ಟಿ ಬರುತ್ತಿದ್ದಾರೆ…ಫ್ಯಾಷಿಸ್ಟರಿಗೆ ಎದೆಯೊಡ್ಡಿ ಬೆಳೆಯುತ್ತಿದ್ದಾರೆ. ಗಾಂಧಿಯಿಂದ ಗೌರಿಯವರೆಗೆ ಈ ಹಾದಿಯಲ್ಲಿ ಅರ್ಪಣೆಯಾದ ಬಲಿದಾನಗಳು ವ್ಯರ್ಥವಾಗಿಲ್ಲ. ಹೋರಾಟವು ಇನ್ನಷ್ಟು ಮೊನಚುಗೊಂಡು ತೀಕ್ಷ್ಣವಾಗುತ್ತಿದೆಯೇ ಹೊರತು ಕ್ಷೀಣಗೊಂಡದ್ದಿಲ್ಲ. ಮೊನ್ನೆಯವರೆಗೆ ಹೋರಾಟಗಳಿಗೆ ನೇತೃತ್ವ ನೀಡುತ್ತಿದ್ದ ಗೌರಿ ಲಂಕೇಶ್ ಸಂಘಟಿಸುತ್ತಿದ್ದದ್ದು ‘ಪ್ರತಿಭಟನಾ ಸಮಾವೇಶಗಳನ್ನು’. ಇವತ್ತು ಅವರ ಹತ್ಯೆಯನ್ನು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ನಡೆಯುತ್ತಿರುವುದು ‘ಪ್ರತಿರೋಧ ಸಮಾವೇಶ’. ಹೋರಾಟ ರಂಗದಲ್ಲಿ ಪ್ರತಿಭಟನೆಗೂ ಪ್ರತಿರೋಧಕ್ಕೂ ಅರ್ಥ ವ್ಯತ್ಯಾಸವಿದೆ. ಬಹುಶಃ ಗೌರಿಯ ವಿಚಾರಧಾರೆಗಳು ಗುಂಡೇಟಿಗೆ ಕ್ಷುದ್ರಗೊಳ್ಳುವಂಥದ್ದಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತಿದೆಯಲ್ಲವೇ?! ಹೋರಾಟವು ಇನ್ನೊಂದು ಆಯಾಮದತ್ತ ಮಗ್ಗಲು ಬದಲಿಸಿಕೊಳ್ಳುತ್ತಿದೆ.

ಗೌರಿಲಂಕೇಶ್ ಫ್ಯಾಷಿಸಮ್ ಸಿದ್ಧಾಂತದೊಂದಿಗೆ ನಿಷ್ಕರುಣಿಯಾಗಿದ್ದರು. ಅವರಿಗೆ ಫ್ಯಾಷಿಸಮ್ ನೊಂದಿಗೆ ವ್ಯವಹರಿಸುವ ಭಾಷೆ, ವ್ಯಾಕರಣದ ಅರಿವಿತ್ತು. ಅದನ್ನೇ ಅವರು ತನ್ನ ‘ಗೌರಿ ಲಂಕೇಶ್ ಪತ್ರಿಕೆ’ ಪತ್ರಿಕೆಯಲ್ಲಿ ಬಳಸುತ್ತಿದ್ದರು. ಮೊನ್ನೆ ಬಿಜೆಪಿಯ ಶಾಸಕ ಜೀವರಾಜ್ ಅವರು ನೀಡಿದ ಹೇಳಿಕೆಯನ್ನೊಮ್ಮೆ ಗಮನಿಸಿದರೆ ಈ ವಿಚಾರ ಸ್ಪಷ್ಟವಾಗುತ್ತದೆ; “ಚಡ್ಡಿಗಳ ಮಾರಣಹೋಮ ಎಂದು ಗೌರಿ ಬರೆಯದಿರುತ್ತಿದ್ದರೆ ಈ ರೀತಿಯಾಗಿ ಹತ್ಯೆಯಾಗುತ್ತಿರಲಿಲ್ಲ”. ಜೀವರಾಜ್ ರವರ ಮಾತಿನ ಮರ್ಮವೇನೆಂದು ತಿಳಿಯಲು ವಿಶೇಷ ಜ್ಞಾನ ಬೇಕಾಗಿಲ್ಲ. ಹಿಂದೊಮ್ಮೆ ಡಾ.ಎಚ್.ಎಸ್.ಅನುಪಮಾ ಅವರು ಗೌರಿಯವರ ಬಳಿ ನಿಷ್ಟುರ ಭಾಷೆ ಬಳಕೆಯ ಬಗ್ಗೆ ಕೇಳಿದಾಗ “ಅವಕ್ಕೆಷ್ಟು ಮೃದು ಭಾಷೆಯಲ್ಲಿ ಹೇಳಿದರೆ ಲಾಲಿ ಹಾಡಿನಂತೆ ಕೇಳಿಸೋ ಚಾನ್ಸಿದೆ” ಎಂದು ತನ್ನ ಫ್ಯಾಷಿಸಮ್ ವಿರೋಧಿ ಭಾಷೆ, ನಿಲುವನ್ನು ಸಮರ್ಥಿಸಿಕೊಂಡಿದ್ದರು.

ಕೆಲವರು ಗೌರಿ ಲಂಕೇಶ್ ರೊಂದಿಗಿನ ಒಡನಾಟವನ್ನು ಬರಹದ ಮೂಲಕ, ಇನ್ನು ಕೆಲವರು ಕವನ ಹಾಡುಗಳ ಮೂಲಕ ಮೆಲುಕು ಹಾಕುತ್ತಿದ್ದಾರೆ. ಅಂದರೆ ಮನಸ್ಸಿನ ಭಾರ ಇಳಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು, ಹೋರಾಟ ಮಿತ್ರರು ಅವರಿಗೆ ಸಂಬಂಧಿಸಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ನನ್ನ ಸ್ನೇಹಿತನೊಬ್ಬ ಅವರ ಕೆಲವು ಚಿತ್ರಗಳನ್ನು ಜೋಡಿಸಿ ಜಗಜಿತ್ ಸಿಂಗ್ ಅವರ ಅರ್ಥಪೂರ್ಣ ಗಝಲನ್ನು ಸಂಯೋಜಿಸಿ ವಾಟ್ಸಪ್ ನಲ್ಲಿ ಶೇರ್ ಮಾಡಿದ್ದ….
“ಚಿಟ್ಟೀನ ಕೋಯಿ ಸಂದೇಸ್..
ಜಾನೆ ವೊ ಕೋನ್ ಸಾ ದೇಸ್…
ಜಹಾ ತುಮ್ ಚಲೇ ಗಯೇ….””

ಈ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಸೈದ್ಧಾಂತಿಕ ಸಂಘರ್ಷವನ್ನು ಎದುರಿಸುವಷ್ಟು ಶಕ್ತವಲ್ಲದ ದುರ್ಬಲ ಸಿದ್ಧಾಂತವು ಗುಂಡಿನ ಶಬ್ಧವಾಗಿ ಆರ್ಭಟಿಸುತ್ತಿದೆ. ಗುಂಡೇಟಿಗೆ ಬಲಿಯಾದವರು ಈ ದೇಶ, ನೆಲ, ನಾಡನ್ನು ಬಿಟ್ಟು ಹೋಗಿರಬಹುದು. ಆದರೆ ಈ ವಿಚಾರಗಳು ಸದಾ ಜೀವಂತವಾಗಿರುತ್ತವೆ. ಸೆ 12 ರಂದು ಪ್ರತಿರೋಧ ಸಮಾವೇಶವನ್ನು ಸಂಘಟಿಸುತ್ತಿರುವುದು ಕೂಡ ನಮ್ಮ ನಡುವೆ ಜೀವಂತವಿಲ್ಲದ ಗೌರಿಲಂಕೇಶ್ ಎಂಬುದನ್ನು ನಾವು ಮರೆಯಬಾರದು. ಇದರರ್ಥ ಗೌರಿಯ ವಿಚಾರಧಾರೆಗಳು ಗುಂಡಿನ ಶಕ್ತಿಗಿಂತಲೂ ಬಲಿಷ್ಠವೆಂದಲ್ಲವೇ? ಜೀವ ಜಡವಾದರೂ ಧ್ಯೇಯ, ಗುರಿ ದೃಢವಾಗಿರುತ್ತದೆ…ಪ್ರತಿರೋಧ ಅಪರಾಧವಲ್ಲ ಎಂಬ ಸಾಂವಿಧಾನಿಕ ಅವಕಾಶಕ್ಕೆ ಜೀವ ತುಂಬಿದ ಗೌರಿಯ ಬಲಿದಾನವು ವ್ಯರ್ಥವಾಗದಿರಲಿ.

To Top
error: Content is protected !!
WhatsApp chat Join our WhatsApp group