ನಮ್ಮ ಹೆಜ್ಜೆ - ನಿಮ್ಮ ನುಡಿ

ಸರ್ವ ಜನಾಂಗದ ಶಾಂತಿಯ ತೋಟ ಕಟ್ಟುವ ವರದಿಗಾರನಾಗಲಿ: ಫಾರೂಕ್ ಕುಕ್ಕಾಜೆ

ನಮ್ಮ ಹೆಜ್ಜೆ, ನಿಮ್ಮ ನುಡಿ: ಎರಡು ಮೂರು ದಶಕಗಳ ಹಿಂದೆ ಪತ್ರಿಕಾ ರಂಗಕ್ಕೆ ಉನ್ನತವಾದ ಗೌರವವಿತ್ತು. ಪತ್ರಿಕಾ ರಂಗದಲ್ಲಿ ಕೆಲಸ ಮಾಡಲು ಎಷ್ಟೋ ಜನರು ಉತ್ಸುಕರಾಗಿದ್ದರು. ಅದನ್ನು ದೇಶ ಮತ್ತು ಜನ ಸೇವೆಯ ಒಂದು ಭಾಗ ಎಂದು ಭಾವಿಸಿದ ಒಂದು ಜನ ವರ್ಗವಿತ್ತು. ಆದರೆ ಇಂದು ಪತ್ರಿಕಾ ರಂಗವು ಅತಿ ವೇಗವಾಗಿ ಬೆಳೆಯುತ್ತಿದ್ದು ಅದು ಉದ್ಯಮವಾಗಿ ಪರಿವರ್ತಿನೆಗೊಂಡು ದೇಶದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಶಾಂತಿಗೆ ದಾರಿ ಮಾಡಿ ಕೊಡುತ್ತಿರುವ ವಿಷಾದನೀಯ ಘಟ್ಟದಲ್ಲಿದೆ ಎನ್ನದೆ ವಿಧಿಯಿಲ್ಲ.

ಇತ್ತೀಚಿಗೆ ಕೆಲವು ಪತ್ರಕರ್ತರು ದುರುದ್ದೇಶ ಪೂರಿತ, ಕಪೋಲ ಕಲ್ಪಿತ ವರದಿ ತಯಾರಿಸಿ ಪ್ರಕಟಿಸುವುದು ಸಾಮಾನ್ಯವಾಗುತ್ತಿದೆ. ಕೆಲವು ಪತ್ರಕರ್ತರು ಯಾರದೋ ಒತ್ತಡಕ್ಕೆ ಮಣಿದು ಅಥವಾ ಹೆದರಿ ಪ್ರಾಮುಖ್ಯವಿಲ್ಲದ ಸುದ್ದಿಗಳಿಗೆ ಮಹತ್ವ ನೀಡುತ್ತಿದ್ದು ಓದುಗರು ಅದನ್ನು ನಂಬಬೇಕೋ ಬೇಡವೋ ಎಂಬ ಸಂಧಿಗ್ದತೆ ಮತ್ತು ಗೊಂದಲದಲ್ಲಿದ್ದಾರೆ . ಸಾಧಾರಣವಾಗಿ ಸಾಮಾನ್ಯ ಜನತೆಯು ಸಮಸ್ಯೆಗಳು ಎದುರಾದಾಗ ಮಾಧ್ಯಮಗಳು ತಮಗೆ ನ್ಯಾಯ ಒದಗಿಸಬೇಕೆಂದು ಬಯಸುತ್ತಾರೆ. ಆದರೆ ಆ ಜವಾಬ್ದಾರಿಯನ್ನು ಮರೆತ ಕೆಲವು ಮಾಧ್ಯಮದ ವರ್ತನೆಗಳು ಜನರ ವಿಶ್ವಾಸಾರ್ಹತೆಯನ್ನು ಕಳೆದು ಕೊಳ್ಳುತ್ತಿವೆ. ಇಂತಹ ಮಾಧ್ಯಮದಿಂದ ಸಮಾಜಕ್ಕೆ ದೇಶಕ್ಕೆ ಯಾವ ಪ್ರಯೋಜನವೂ ಆಗಲಾರದು.

ಉತ್ತಮ ಪತ್ರಕರ್ತನು ಸತ್ಯ ಶೀಲತೆ , ಪ್ರಾಮಾಣಿಕತನ , ಸ್ವಾಭಿಮಾನ, ಸಹನಶೀಲತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಳ್ಳಬೇಕು, ಸದಾ ಅಧ್ಯಯನಶೀಲರಾಗಿರಬೇಕು, ವಾಸ್ತವಾಂಶದ ವರದಿಯ ಜೊತೆಗೆ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು. ಸಮಾಜದ ಒಳ ಸುಳಿಗಳನ್ನು ಅರಿಯುವವನಾಗಿರಬೇಕು. ವಾಸ್ತವಾಂಶದ ವರದಿಗಾರಿಕೆಯ ಜೊತೆಗೆ ಸಮಸ್ಯೆಗಳಿಗೆ ತನ್ನಿಂದಾಗುವ ಪರಿಹಾರಕ್ಕೆ ಪ್ರಯತ್ನಿಸಬೇಕು.

ನ್ಯಾಯಾಂಗ, ಕಾರ್ಯಂಗ, ಶಾಸಕಾಂಗದಂತೆ ಪತ್ರಿಕಾರಂಗವು ನಾಲ್ಕನೇ ಅಂಗವಲ್ಲದಿದ್ದರೂ ಇವೆಲ್ಲವುಗಳಿಗಿಂತ ಹೆಚ್ಚಿನ ಜವಾಬ್ದಾರಿ ಹೊಂದಿರುವ ಪತ್ರಿಕಾ ರಂಗವು ಅವುಗಳ ತಪ್ಪನ್ನು ಖಂಡಿಸುವ ಮತ್ತು ತಿದ್ದುವ ಕೆಲಸ ಮಾಡಬೇಕು. ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಬೇಕು. ದೇಶದ ಅಖಂಡತೆ, ಏಕತೆ, ಸಮಗ್ರತೆಯನ್ನು ಕಾಪಾಡುವ ಕೆಲಸ ಮಾಡಬೇಕು.

ಸರ್ವ ಜನಾಂಗದ ಶಾಂತಿಯ ತೋಟವನ್ನು ಕಟ್ಟಲು, ಸಾರೆ ಜಹಾಂಸೆ ಅಚ್ಛಾ ಹಿಂದುಸ್ತಾನ್ ಹಮಾರಾ ಎಂದು ನಾವು ಹೆಮ್ಮೆಯಿಂದ ಹಾಡುವಂತಾಗಲು ನಮ್ಮ ದೇಶದ ಪತ್ರಿಕಾ ರಂಗವು ಶ್ರಮಿಸಲಿ. ಎಂದು ಭಿನ್ನವಿಸುತ್ತೇನೆ. ಸ್ವಾತಂತ್ರ ಉತ್ಸವದ ೭೧ ನೇ ವಾರ್ಷಿಕದ ಈ ಶುಭ ದಿನದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವ ‘ವರದಿಗಾರ’ ಆನ್ಲೈನ್ ಪತ್ರಿಕೆಯು ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮುನ್ನಡೆಯಲಿ ಎಂದು ಶುಭ ಹಾರೈಸುತ್ತೇನೆ.

ದೇಶದ ಸರ್ವ ಜನ ಭಾಂದವರಿಗೂ ಸ್ವಾತಂತ್ರ ದಿನದ ಶುಭಾಶಯಗಳು. ಜೈ ಹಿಂದ್.

-ಉ. ಫಾರೂಕ್ ಕುಕ್ಕಾಜೆ

ಯುವ ಬರಹಗಾರರು

To Top
error: Content is protected !!
WhatsApp chat Join our WhatsApp group